ಶನಿವಾರ, ಡಿಸೆಂಬರ್ 7, 2019
16 °C

ಅಡ್ಡಾದಲ್ಲಿ ಬೆಂಕಿ ಮತ್ತು ಹಬ್ಬ

Published:
Updated:
ಅಡ್ಡಾದಲ್ಲಿ ಬೆಂಕಿ ಮತ್ತು ಹಬ್ಬ

ನಿರ್ದೇಶಕ-ನಟ ಪ್ರೇಮ್ ಬಿಳಿ ಅಂಗಿ ತೊಟ್ಟು ಪಂಚೆ ಉಟ್ಟಿದ್ದರು. ಹೆಗಲ ಮೇಲೊಂದು ಬಣ್ಣದ ಟವೆಲ್ಲು. ಪುನೀತ್ ರಾಜಕುಮಾರ್ ಕೂಡ ಸ್ವಲ್ಪ ಹೊತ್ತು ಅಂಗಿ-ಪಂಚೆ ತೊಟ್ಟಿದ್ದರು. ಸಂಗೀತ ನಿರ್ದೇಶಕ ಹರಿಕೃಷ್ಣ ಕೂಡ `ಪ್ರೇಮ ಮಾರ್ಗ~ ಅನುಸರಿಸಿದ್ದರು. ಅಷ್ಟು ಮಾತ್ರವಲ್ಲ, ಅಲ್ಲಿದ್ದ ಅನೇಕರು ಪಂಚೆ ಅಂಗಿ ತೊಟ್ಟು ಯಾವುದೋ ತುರ್ತಿನ ಕೆಲಸದ ಮೇಲೆ ಓಡಾಡುವಂತೆ ಉತ್ಸಾಹದಲ್ಲಿದ್ದರು. ಅಂದಹಾಗೆ, ಅದು ಮದುವೆಮನೆಯಲ್ಲ, ಹಬ್ಬದ ವೇದಿಕೆ. `ಪ್ರೇಮ್ ಅಡ್ಡಾ~ ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ಕಂಡುಬಂದ ಸಂಕ್ರಾಂತಿ ಸಂಭ್ರಮ.`ಜೋಗಯ್ಯ~ ನಂತರ ನಿರ್ದೇಶಕನ ಕ್ಯಾಪ್ ಮತ್ತೆ ತೆಗೆದಿಟ್ಟು ಬಣ್ಣ ಹಚ್ಚಿಕೊಂಡಿರುವ ಪ್ರೇಮ್ ನಾಯಕರಾಗಿ ನಟಿಸುತ್ತಿರುವ ಚಿತ್ರ `ಪ್ರೇಮ್ ಅಡ್ಡಾ~. ಹಬ್ಬದ ದಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಂದರ್ಭಕ್ಕೆ ಪ್ರೇಮ್ ಹಬ್ಬದ ಸ್ಪರ್ಶ ನೀಡಿದ್ದರು. ಬಣ್ಣಬಣ್ಣದ ಕಾಗದದ ತೋರಣಗಳ ನಡುವೆ ಇಣುಕುತ್ತಿದ್ದ ತಳಿರುತೋರಣ, ಕಬ್ಬಿನ ಜಲ್ಲೆ, ಸಿಂಗರಗೊಂಡಿದ್ದ ರಾಸುಗಳು, ಹಳ್ಳಿಗೌಡರ ಗಮ್ಮತ್ತಿನಲ್ಲಿದ್ದ ನಾಯಕನಟರುಗಳು- ನಗರದ ನಡುವೆಯೊಂದು `ಉದ್ಭವ ಗ್ರಾಮ~ ಥಟ್ಟನೆ ರೂಪುಗೊಂಡಂತಿತ್ತು.ನಟಿ-ನಿರ್ಮಾಪಕಿ ರಕ್ಷಿತಾ ಉಸ್ತುವಾರಿಯಲ್ಲಿ ಹೆಣ್ಣುಮಕ್ಕಳ ಗುಂಪೊಂದು ಮಡಿಕೆಯಲ್ಲಿ ಏನನ್ನೋ ಬೇಯಿಸುತ್ತಿತ್ತು. ಅದೇನು ನಟನೆಯ ಅಡುಗೆಯೋ ಅಥವಾ ನಿಜದ ಹುಗ್ಗಿಯೇ ಅಲ್ಲಿ ತಯಾರಾಗುತ್ತಿತ್ತೋ ಸ್ಪಷ್ಟವಾಗಲಿಲ್ಲ. ಅದೇನೆಂದು ಸ್ಪಷ್ಟಪಡಿಸಿಕೊಳ್ಳೋಣವೆಂದರೆ, ಇನ್ನೊಂದು ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಜಾನುವಾರುಗಳನ್ನು ಕಿಚ್ಚು ಹಾಯಿಸಲು ಹಾಕಿದ್ದ ಬೆಂಕಿ.ಬಯಲಿನಲ್ಲಿ ಉರಿಯುತ್ತಿದ್ದ ಬೆಂಕಿ ಪ್ರೇಮ್ ಅವರ ಎದೆಯೊಳಗೂ ಸುಳಿಯುತ್ತಿದ್ದಂತಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಗ್ಗೆ ಅವರು ಸಿಟ್ಟು ತೋಡಿಕೊಂಡರು. ತಮ್ಮ ಚಿತ್ರದ ಟೈಟಲ್‌ಗೆ ಸಂಬಂಧಿಸಿದಂತೆ ಮಂಡಳಿಯ ಧೋರಣೆ ನ್ಯಾಯಯುತವಾಗಿಲ್ಲ ಎನ್ನುವುದು ಅವರ ದೂರು.`ಪ್ರೇಮ್ ಅಡ್ಡಾ ಎನ್ನುವ ಶೀರ್ಷಿಕೆಯನ್ನು, ಎಲ್ಲ ಅಕ್ಷರಗಳೂ ಸಮಾನವಾಗಿ ಎದ್ದುಕಾಣುವಂತೆ ಮಂಡಳಿ ಸೂಚಿಸಿದೆ. ಹೀಗೆ ಸೂಚಿಸಲು ಮಂಡಳಿಗೆ ಯಾವ ಅಧಿಕಾರವಿದೆ. ಶೀರ್ಷಿಕೆಯನ್ನು ಯಾವ ರೀತಿ ಬಳಸಬೇಕು ಎನ್ನುವುದು ನನಗೆ ಗೊತ್ತು. ಅದೊಂದು ಕ್ರಿಯಾಶೀಲ ಕೆಲಸ. ಮಂಡಳಿಯ ನಿಲುವನ್ನು ನಾನು ಒಪ್ಪುವುದಿಲ್ಲ.ನಿರ್ಮಾಪಕರ ಸಂಘಕ್ಕೆ ನಾನು ಅಹವಾಲು ಸಲ್ಲಿಸುತ್ತೇನೆ~ ಎಂದು ಪ್ರೇಮ್ ಹೇಳಿದರು.

ಅಂದಹಾಗೆ, ಮುರಳಿ ನಿರ್ಮಿಸಿ, ಮಹೇಶ್ ಬಾಬು ನಿರ್ದೇಶಿಸುತ್ತಿರುವ `ಪ್ರೇಮ್ ಅಡ್ಡಾ~ ತಮಿಳಿನ `ಸುಬ್ರಹ್ಮಣ್ಯಪುರಂ~ ಚಿತ್ರದ ರೀಮೇಕು. ಪ್ರೇಮ್‌ಗೆ ನಾಯಕಿಯಾಗಿ ಕೃತಿ ಖರಬಂಧ ನಟಿಸುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)