ಸೋಮವಾರ, ಜನವರಿ 27, 2020
17 °C

ಅಡ್ಡಾದಿಡ್ಡಿ ಹಾಡುದೆಲ್ಲಾ ಜಾನಪದ ಅಲ್ಲರ‌್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಗ್ರಾಮೀಣ ಭಾಗದ ಟ್ರ್ಯಾಕ್ಟರ್‌ನಲ್ಲಿ ಕೇಳುವ ಕ್ಯಾಸೆಟ್‌ಗಳೆಲ್ಲಾ ಜನಪದ ಹಾಡುಗಳಲ್ಲ, ಒಟ್ಟಾರೇ ಅಡ್ಡಾದಿಡ್ಡಿ ಹಾಡುದೆಲ್ಲಾ ಜಾನಪದ ಹಾಡು ಅಲ್ಲ ಎಂದು ಜನಪದ ಸಾಹಿತಿ ಬಾಗಲಕೋಟೆಯ ಡಾ. ಪ್ರಕಾಶ ಖಾಡೆ ಹೇಳಿದರು.ಕಲಗುರ್ಕಿಯಲ್ಲಿ ಶನಿವಾರ ಜರುಗಿದ ವಿಜಾಪುರ ಜಿಲ್ಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಡೆದ ಜಾನಪದ ಗೋಷ್ಠಿ-1 ರಲ್ಲಿ ಶಿಷ್ಟ ಸಾಹಿತ್ಯ ಮತ್ತು ಜನಪದ ಸಾಹಿತ್ಯ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.ಜನಪದರು ಪ್ರಕೃತಿಯ ನಿಜವಾದ ಶಿಶುಗಳು, ಜಾನಪದ ಕಲಾವಿದರು ಬಯಲು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅನುಭವ, ಕುಶಲತೆಗಳ ಸಾಕಾರವೇ ಜನಪದ ಎಂದರು. ಶಿಷ್ಟರು ಜಗಳ ಹಚ್ಚಿದರೇ ಜನಪದರು ಸೌಹಾರ್ದತೆಯನ್ನು ಬೆಳೆಸುವರು. ವಿಜಾಪುರ ಹಲಸಂಗಿ ಗೆಳೆಯರ ಬಳಗ ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆಯನ್ನು ನೀಡಿದೆ. ದೇಶಿಯ ಊಟ, ಉಡುಗೆ, ಭಾಷೆ, ಸಂಸ್ಕೃತಿ ಜಾಗತೀಕರಣದ ಭರಾಟೆಯಲ್ಲಿ ನಾಶವಾಗುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು.ಗೋಕಾಕದ ಖ್ಯಾತ ಸಾಹಿತಿ ಡಾ. ಸಿ.ಕೆ. ನಾವಲಗಿ `ಜಾನಪದ ಸಾಹಿತ್ಯ ಅಂದು-ಇಂದು~ ಕುರಿತು ಉಪನ್ಯಾಸ ನೀಡಿ, ಶಾಸ್ತ್ರಕ್ಕೆ, ವಿಜ್ಞಾನಕ್ಕೆ ಜನಪದ ಹೊರತಾದದ್ದು, ಆದರೆ ಇಂದು ಜಾನಪದ ಅವುಗಳನ್ನು ಮೀರಿ ಬೆಳೆದಿದೆ.300ಕ್ಕೂ ಅಧಿಕ ಪ್ರಕಾರದ ರಂಗ ಪ್ರದರ್ಶನ ಕಲೆಗಳು ರಾಜ್ಯದಲ್ಲಿ ಲಭ್ಯವಾಗಿದ್ದು, ಅದರಲ್ಲಿ 65 ಕಲೆಗಳು ಅಖಂಡ ವಿಜಾಪುರ ಜಿಲ್ಲೆಯವು ಎಂದರು. ಜನಪದ ಕೇವಲ ಗ್ರಾಮೀಣ ಪ್ರದೇಶಕ್ಕೆ ಸೀಮಿತವಲ್ಲ, ಅದೂ ಸರ್ವವ್ಯಾಪಿ ಹಾಗೂ ಸರ್ವಕಾಲಿಕ, ಜಾನಪದವಿಲ್ಲದೇ ಬದುಕಿಲ್ಲ, ಆಧುನಿಕತೆಯಲ್ಲಿಯೂ ಜಾನಪದ ಇದೆ, ಕಾಲಕ್ಕೆ ತಕ್ಕಂತೆ ಜನಪದ ಕಲೆಗಳನ್ನು ಪ್ರಸ್ತುತಗೊಳಿಸಬೆಕಾದ ಅವಶ್ಯಕತೆ ಇದೆ ಎಂದರು.ಜಾಗತೀಕರಣ, ಖಾಸಗೀಕರಣಗಳು ಶ್ರಿಮಂತರ, ಅಧಿಕಾರಿಗಳ ಪರವಾಗಿವೆ. ಆದರೆ ರೈತ ಹಾಗೂ ಕಾರ್ಮಿಕರ ವಿರೋಧಿ ನಿಲುವುಗಳು ಇವಾಗಿವೆ ಎಂದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ ಡಾ. ಎಂ.ಎನ್. ವಾಲಿ ಮಾತನಾಡಿ, ಜಾನಪದ ಶ್ರಿಮಂತ ಸಂಸ್ಕೃತಿ, ಇದು ಎಲ್ಲಾ ಕಾಲ ಘಟ್ಟದ ಆಚಾರ ವಿಚಾರಗಳನ್ನು ತಿಳಿಸಿಕೊಡುತ್ತದೆ, ಕುಂತಲ್ಲಿಯೋ, ನಿಂತಲ್ಲಿಯೋ ಹಾಡುಗಳನ್ನು ಕಟ್ಟಿ ಹಾಡುವುದು ಜನಪದರ ಒಂದು ಸೃಜನಾತ್ಮಕ ಕಲೆ ಎಂದು ಹಳೆಯ ಕಾಲದ ಅನೇಕ ಜಾನಪದ ಗೀತೆಗಳು, ಜನಪದ ಒಗಟು, ಜಾನಪದ ಹಾಡಿನಲ್ಲಿಯೇ ಪ್ರಶ್ನೋತ್ತರ ಸ್ಪರ್ಧೆ ಮುಂತಾದವುಗಳ ಕುರಿತು ಹಾಡಿನ ಮೂಲಕವೇ ಹಾಡಿ ಎಲ್ಲರನ್ನೂ ಜನಪದ ಲೋಕದತ್ತ ಕರೆದುಕೊಂಡು ಹೋದರು. ಸಿದ್ದು ಭೂಸರೆಡ್ಡಿ ಸ್ವಾಗತಿಸಿದರು. ಬಿ. ಕೊಟ್ರೇಶ ನಿರೂಪಿಸಿದರು. ಎಂ.ಬಿ. ಹೆಬ್ಬಾಳ ವಂದಿಸಿದರು.ಗೋಷ್ಠಿಯ ಮಧ್ಯದಲ್ಲಿ ತುಮಕೂರು ಜಿಲ್ಲೆಯ ಪಾವಗಡದ ಶ್ರಿ ಹಣಮಂತ್ರಾಯ ತಂಡದವರಿಂದ ಹುಲಿವೇಷ ನೃತ್ಯ ಹಾಗೂ ಬಸವರಾಜ ಬಡಿಗೇರ ಹಾಗೂ ತಂಡದವರಿಂದ ಜನಪದ ಸಂಗಮ ಕಾರ್ಯಕ್ರಮವೂ ಜರುಗಿತು.

ಪ್ರತಿಕ್ರಿಯಿಸಿ (+)