ಭಾನುವಾರ, ಮೇ 16, 2021
27 °C
ಪಣಜಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಆರಂಭ

ಅಡ್ವಾಣಿ ಗೈರು, ಮೋದಿಗೆ ಜೈಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಗೋವಾ): ಗೋವಾ ರಾಜಧಾನಿ ಪಣಜಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಗೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಗೈರು ಹಾಜರಾಗುವ ಮೂಲಕ `ಕೇಸರಿ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ' ಎಂಬ ಸಂದೇಶವನ್ನು ಮತ್ತೊಮ್ಮೆ ರವಾನಿಸಿದರು. ಅಡ್ವಾಣಿ ಶನಿವಾರ ಮತ್ತು ಭಾನುವಾರದ ರಾಷ್ಟ್ರೀಯ ಕಾರ್ಯಕಾರಣಿಗೆ ಹಾಜರಾಗುವ ಕುರಿತು ಅನಿಶ್ಚಿತತೆ ತಲೆದೋರಿದೆ.ಆದರೆ, ಅಡ್ವಾಣಿ ಅವರ ಮನವೊಲಿಸಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಕರೆತರುವ ಪ್ರಯತ್ನವನ್ನು ಪಕ್ಷದ ಹಿರಿಯ ನಾಯಕರು ಮಾಡುತ್ತಿದ್ದಾರೆ.`ಬಿಜೆಪಿ ಕಾರ್ಯಕಾರಿಣಿಗೆ ಮಾಜಿ ಉಪ ಪ್ರಧಾನಿ ಅಡ್ವಾಣಿ ಅವರು ಗೈರು ಹಾಜರಾಗುವರು' ಎನ್ನುವ ಸುದ್ದಿ ಮೊದಲೇ ಪಕ್ಷದೊಳಗೆ ಹರಡಿತ್ತು. ಅದರಂತೆ ಪದಾಧಿಕಾರಿಗಳ ಸಭೆಗೆ ಬರದೆ ದೆಹಲಿಯಲ್ಲೇ ಉಳಿಯುವ ಮೂಲಕ ಅಡ್ವಾಣಿ ಪಕ್ಷದೊಳಗೆ `ಗುಂಪುಗಾರಿಕೆ- ಒಳಜಗಳ' ಇದೆ ಎನ್ನುವ ಸಂಗತಿಯನ್ನು ಮತ್ತೊಮ್ಮೆ ಯಶಸ್ವಿಯಾಗಿ ರವಾನಿಸಿದರು. ಆದರೆ, ಬಿಜೆಪಿ ಹಿರಿಯ ನಾಯಕರು ಅಡ್ವಾಣಿ ವೈಯಕ್ತಿಕ ಕಾರಣಕ್ಕೆ ಪದಾಧಿಕಾರಿಗಳ ಸಭೆಗೆ ಗೈರು ಹಾಜರಾಗಿದಾರೆಂದು ಬಿಂಬಿಸುವ ಕಸರತ್ತು ಮಾಡಿದರು.`ಹಿರಿಯ ನಾಯಕ ಅಡ್ವಾಣಿ ಅನಾರೋಗ್ಯದ ನಿಮಿತ್ತ ಪದಾಧಿಕಾರಿಗಳ ಸಭೆಗೆ ಬಂದಿಲ್ಲ. ನಾನೇ ಇಂದು ಬೇಡ, ನಾಳೆ ಬನ್ನಿ ಎಂದು ಹೇಳಿದ್ದೇನೆ. ಶನಿವಾರ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಗಮಿಸಲಿದ್ದಾರೆ' ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದರು. ಬಿಜೆಪಿ ಅಧ್ಯಕ್ಷರ ಜತೆ ರಾಜ್ಯಸಭೆ ಸದಸ್ಯ ವೆಂಕಯ್ಯ ನಾಯ್ಡು ದನಿಗೂಡಿಸಿದರು. `ಅಡ್ವಾಣಿ ಗೈರುಹಾಜರಿ ವಿಷಯವನ್ನು ನೀವು (ಮಾಧ್ಯಮದವರು) ದೊಡ್ಡದು ಮಾಡುತ್ತಿದ್ದೀರಿ' ಎಂದು ನಾಯ್ಡು ಟೀಕಿಸಿದರು.ಮಧ್ಯಾಹ್ನ 3ಕ್ಕೆ ಶುರುವಾಗಬೇಕಿದ್ದ  ಪದಾಧಿಕಾರಿಗಳ ಸಭೆ ಒಂದೂವರೆ ಗಂಟೆ ತಡವಾಯಿತು. ಅಡ್ವಾಣಿ ಅವರಿಗೆ ಆತ್ಮೀಯರಾಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮಧ್ಯಾಹ್ನ 2ಕ್ಕೆ ಪಣಜಿಗೆ ಆಗಮಿಸಿದರು. ನರೇಂದ್ರ ಮೋದಿ ಅವರಿಗೆ `ಪಟ್ಟ' ಕಟ್ಟುವುದನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಸುಷ್ಮಾ ಸ್ವರಾಜ್ `ಅಡ್ವಾಣಿ ಅವರನ್ನು ಪಕ್ಷ ಕಡೆಗಣಿಸುತ್ತಿದೆ' ಎಂದು ಅಸಮಾಧಾನ ಹೊರಹಾಕಿದರು. ಇದರಿಂದಾಗಿ ಪದಾಧಿಕಾರಿಗಳ ಸಭೆ ತಡವಾಯಿತು. ಅವರನ್ನು ಸಮಾಧಾನಪಡಿಸಿ ಸಭೆಗೆ ಕರೆದೊಯ್ಯಲು ಹಿರಿಯ ನಾಯಕರು ಪರದಾಡಿದರು.  ಸಭೆ ವಿಳಂಬಕ್ಕೆ ಬಿಜೆಪಿ ಮುಖಂಡ ಸುಧಾಂಶು ತ್ರಿವೇದಿ ಬೇರೆಯದೇ ಕಾರಣ ಕೊಟ್ಟರು. `ರಾಜಕೀಯ ಸಭೆಗಳು ತಡವಾಗುವುದು ಸಹಜ. ಈ ಸಭೆ ವಿಳಂಬಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.ಉಮಾ ಭಾರತಿ, ಶತ್ರುಘ್ನ ಸಿನ್ಹ, ರವಿಶಂಕರ್ ಪ್ರಸಾದ್, ವರುಣ್ ಗಾಂಧಿ, ಮೇನಕಾ ಗಾಂಧಿ, ಜಸ್ವಂತ್ ಸಿಂಗ್ ಒಳಗೊಂಡಂತೆ ಅನೇಕ ಮುಖಂಡರು ಶುಕ್ರವಾರದ ಸಭೆಯಿಂದ ಹೊರಗುಳಿದರು. ಅವರದೇ ವೈಯಕ್ತಿಕ ಕಾರಣಗಳಿಂದಾಗಿ ಸಭೆಗೆ ಬಂದಿಲ್ಲ ಎಂದು ತ್ರಿವೇದಿ ವಿವರಿಸಿದರು. ಮಧ್ಯಾಹ್ನವೇ ಬಹುತೇಕ  ಬಿಜೆಪಿ ನಾಯಕರು ಆಗಮಿಸಿದರು.ಮುಗಿಬಿದ್ದ ಕಾರ್ಯಕರ್ತರು: ಕಾರ್ಯಕಾರಿಣಿ ಕೇಂದ್ರ ಬಿಂದುವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಮುಗಿಬಿದ್ದರು.ಜೈಕಾರದ ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು. ಕಾರ್ಯಕರ್ತರಿಗೆ ಮೋದಿ ವಿಜಯೋತ್ಸವದ `ವಿ' ಚಿಹ್ನೆ ತೋರಿಸಿದರು. ಉಳಿದ ಯಾವ ನಾಯಕರಿಗೂ ಇವರಿಗೆ ಸಿಕ್ಕ ಅದ್ದೂರಿ ಸ್ವಾಗತ ದೊರೆಯಲಿಲ್ಲಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎನ್ನುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.ಪಕ್ಷದ ನಾಯಕರಾದ ಬಲಬೀರ್‌ಪುಂಜ್, ಸ್ಮೃತಿ ಇರಾನಿ ಮತ್ತು ಧರ್ಮೇಂದ್ರ ಪ್ರಧಾನ್ ಮೊದಲಾದವರು ಪರಿಕ್ಕರ್ ಒತ್ತಾಯಕ್ಕೆ ದನಿಗೂಡಿಸಿದರು. ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನರೇಂದ್ರ ಮೋದಿ ಅವರಿಗೆ ಪ್ರಚಾರ ಸಮಿತಿ ಚುಕ್ಕಾಣಿ ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದೊಳಗಿನ ಬೆಳವಣಿಗೆ ಕುರಿತು ಅಡ್ವಾಣಿ ಅಸಮಾಧಾನ ಹೊಂದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೋದಿ ಭವಿಷ್ಯ ನಿರ್ಧಾರವಾಗುವುದಿಲ್ಲ ಎಂದು ಪಕ್ಷದ ಮತ್ತೊಂದು ಗುಂಪು ಪ್ರತಿಪಾದಿಸುತ್ತಿದೆ. ಅಡ್ವಾಣಿ ಅವರ ವಿರೋಧವನ್ನು ಬದಿಗೊತ್ತಿ ತೀರ್ಮಾನ ಮಾಡುವುದು ಕಷ್ಟ ಎನ್ನುವುದು ಈ ಗುಂಪಿನ ನಿಲುವು.ಮೋದಿ ಅವರ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಅಡ್ವಾಣಿ ನವೆಂಬರ್ ಬಳಿಕ ನಡೆಯಲಿರುವ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ತಾನ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ನೇತೃತ್ವವನ್ನು ಪಕ್ಷದ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ವಹಿಸಬೇಕು ಎಂದು ಹೇಳಿದ್ದರು. ಅಡ್ವಾಣಿ ಅವರು ಇತ್ತೀಚೆಗಷ್ಟೇ ಛತ್ತೀಸಗಡ ಮುಖ್ಯಮಂತ್ರಿ ರಮಣ ಸಿಂಗ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಹೊಗಳಿದ್ದರು. ಚೌಹಾಣ್ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿದ್ದರು. ಗುಜರಾತಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಚೌಹಾಣ್ ಮಧ್ಯಪ್ರದೇಶದಲ್ಲಿ ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದರು.ಅಡ್ವಾಣಿ ಅವರ ಹೇಳಿಕೆಯಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸಿತು. ಅವರ ಹೇಳಿಕೆಯನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಕೆಲಸವನ್ನು ರಾಜನಾಥ್ ಸಿಂಗ್ ಮಾಡಿದರು. ಮೋದಿ ಅವರಿಗೆ ಪ್ರಚಾರ ಸಮಿತಿ ನೇತೃತ್ವ ವಹಿಸಬಾರದು ಎನ್ನುವುದು ಅಡ್ವಾಣಿ ನಿಲುವಾಗಿದೆ.

ಪದಾಧಿಕಾರಿಗಳ ಸಭೆಯಿಂದ ದೂರ ಉಳಿಯುವ ಮೂಲಕ ಅಡ್ವಾಣಿ ತಮ್ಮ ಸಂದೇಶವನ್ನು ರವಾನಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಬಹಿಷ್ಕರಿಸುವ ಮೂಲಕ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಕ್ಕಿಸುವ ಧೈರ್ಯ ಮಾಡಲಾರರು ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗತ್ತಿದೆ.ಪದಾಧಿಕಾರಿಗಳ ಸಭೆಯಲ್ಲೂ ಕೆಲವರು ಅಡ್ವಾಣಿ ಗೈರು ಕುರಿತು ಪ್ರಸ್ತಾಪಿಸಿದರು. ರಾಜ್‌ನಾಥ್ ಸಿಂಗ್ ಅವರು ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ಛತ್ತೀಸಗಡದ ನಕ್ಸಲ್ ದಾಳಿ ಕುರಿತು ಮಾತನಾಡಿದರು. ಇವೆರಡೂ ವಿಷಯಗಳ ಮೇಲೆ ಕಾರ್ಯಕಾರಿಣಿಯಲ್ಲಿ ನಿರ್ಣಯ ಅಂಗೀಕರಿಸಲಾಗುತ್ತದೆ.ಮೋದಿಗೆ ಪ್ರಚಾರ ಸಾರಥ್ಯ?

ನರೇಂದ್ರ ಮೋದಿ ಅವರನ್ನು ಭಾನುವಾರ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಘೋಷಿಸಲಾಗುವುದೆಂದು ಶುಕ್ರವಾರ ರಾತ್ರಿ ಮೂಲಗಳು ತಿಳಿಸಿವೆ.

ಗುಜರಾತ್ ಉಪ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಯಶಸ್ಸಿನಿಂದಾಗಿ ಅವರ ನಾಯಕತ್ವ ಗುಣ ಮತ್ತೊಮ್ಮೆ ಸಾಬೀತಾಗಿದೆ ಎಂಬ ಭಾವನೆ ಪಕ್ಷದ ಬಹುತೇಕ ಪ್ರಮುಖರು ಮತ್ತು ಕಾರ್ಯಕರ್ತರಲ್ಲಿ ಮೂಡಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.