ಅಡ್ವಾಣಿ ಜನಚೇತನ ಕಾರ್ಯಕ್ರಮ: ಗೊಂದಲಕ್ಕೆ ಕಾರಣವೇನು?

7

ಅಡ್ವಾಣಿ ಜನಚೇತನ ಕಾರ್ಯಕ್ರಮ: ಗೊಂದಲಕ್ಕೆ ಕಾರಣವೇನು?

Published:
Updated:

ಬೆಂಗಳೂರು: ಆರ್‌ಎಸ್‌ಎಸ್‌ನಲ್ಲಿರುವ ಕೆಲ ಯಡಿಯೂರಪ್ಪ ಬೆಂಬಲಿಗರು ಅಡ್ವಾಣಿ ಅವರ ಬೆಂಗಳೂರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಅದನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಆದರೆ, ಅದಕ್ಕೆ ಅಡ್ವಾಣಿ ಒಪ್ಪದ ಕಾರಣ ಯಥಾಪ್ರಕಾರ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.



ಅಡ್ವಾಣಿ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿಗೆ ಭೇಟಿ ನೀಡುವುದಾಗಿ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವುದಾಗಿಯೂ ಹೇಳಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸಭೆ ರದ್ದು ಇಲ್ಲ ಎಂದರು.



ಅವರ ಈ ಹೇಳಿಕೆ ನಂತರ ಬಿಜೆಪಿ ಸೇರಿದಂತೆ ಆರ್‌ಎಸ್‌ಎಸ್‌ನ ಎಲ್ಲರೂ ಮೌನಕ್ಕೆ ಶರಣಾಗಿ, ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ.



ಸಭೆ ರದ್ದು ಎಂಬ ವಿಚಾರ ತಮಗೆ ಗೊತ್ತಿರಲಿಲ್ಲ. ಸಭೆ ಮಾತ್ರ ಈ ಹಿಂದೆ ನಿಗದಿಯಂತೆ ಇದೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಈಶ್ವರಪ್ಪ ಕೂಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.



ಅಡ್ವಾಣಿ ಸಭೆ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಬರುತ್ತಿದ್ದು, ಪ್ರಮುಖರ ಸಭೆಗಳನ್ನು ನಡೆಸಲಿದ್ದಾರೆ.



ಬೆಳಿಗ್ಗೆ 11ಕ್ಕೆ ನಗರದ ಸಚಿವರು, ಸಂಸದರು ಮತ್ತು ಶಾಸಕರ ಸಭೆ ಕರೆದಿದ್ದಾರೆ. ಅದರ ನಂತರ ಮಧ್ಯಾಹ್ನ 1ಕ್ಕೆ ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಸಂಜೆ 5ಕ್ಕೆ ಬಿಬಿಎಂಪಿ ಸದಸ್ಯರ ಸಭೆ ಕರೆದಿದ್ದು, ಅಡ್ವಾಣಿ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಜನರನ್ನು ಸೇರಿಸುವ ಬಗ್ಗೆ ಚರ್ಚಿಸಲಿದ್ದಾರೆ.



ಯಡಿಯೂರಪ್ಪ ಅವರು ಜೈಲಿನಲ್ಲಿರುವ ಈ ಸಂದರ್ಭದಲ್ಲಿ ಅಡ್ವಾಣಿ ಬೆಂಗಳೂರಿಗೆ ಬರುವುದು ಬೇಡ ಎನ್ನುವುದು ಅವರ ಬೆಂಬಲಿಗರ ಅನಿಸಿಕೆ. ಅದರಂತೆ ಕೆಲ ಆರ್‌ಎಸ್‌ಎಸ್ ಮುಖಂಡರು ಕಾರ್ಯಕ್ರಮ ರದ್ದು ಮಾಡಲು ತೀರ್ಮಾನಿಸಿದ್ದರು ಎಂದು ಗೊತ್ತಾಗಿದೆ.



ಇದಕ್ಕೆ ಬಿಜೆಪಿಯ ರಾಷ್ಟ್ರೀಯ ಮುಖಂಡರು ಕೂಡ ಸಮ್ಮತಿಸಿದ್ದರು. ಆದರೆ, ಅಡ್ವಾಣಿ ಮಾತ್ರ ಈ ಯಾವ ಸಲಹೆಗಳಿಗೂ ಒಪ್ಪಲಿಲ್ಲ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry