ಅಡ್ವಾಣಿ ಬೆಂಗಳೂರು ಸಭೆ ಹಠಾತ್ ರದ್ದು

7

ಅಡ್ವಾಣಿ ಬೆಂಗಳೂರು ಸಭೆ ಹಠಾತ್ ರದ್ದು

Published:
Updated:

ಬೆಂಗಳೂರು: ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನೂ ಹಲವರು ಜೈಲು ಸೇರಿರುವ ಕಾರಣ ಅಡ್ವಾಣಿ ಅವರ `ಜನಚೇತನ ಯಾತ್ರೆ~ ಅಂಗವಾಗಿ ನಗರದಲ್ಲಿ ಇದೇ 30ರಂದು ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ರದ್ದು ಮಾಡಲಾಗಿದೆ.

ಯಡಿಯೂರಪ್ಪ ಅವರಲ್ಲದೆ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ನಗರದ ಜೈಲಿನಲ್ಲಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜಿ.ಜನಾರ್ದನ ರೆಡ್ಡಿ ಹೈದರಾಬಾದ್ ಜೈಲಿನಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಸಭೆ ಹಮ್ಮಿಕೊಳ್ಳುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಈ ನಡುವೆ ಗೃಹ ಸಚಿವ ಆರ್.ಅಶೋಕ ಅವರ ಹೆಸರು ಕೂಡ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕೇಳಿಬಂದಿದೆ. ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ಇನ್ನೂ ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲ ವಿದ್ಯಮಾನಗಳಿಂದ ಇರುಸು ಮುರುಸುಗೊಂಡಿರುವ ಅಡ್ವಾಣಿ ಅವರು ಬಹಿರಂಗ ಸಭೆಗೆ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಬೆಂಗಳೂರು ಕಾರ್ಯಕ್ರಮ ಹೊರತುಪಡಿಸಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಜನಚೇತನ ಯಾತ್ರೆ ಮತ್ತು ಸಾರ್ವಜನಿಕ ಸಭೆಗಳು ಪೂರ್ವನಿಗದಿಯಂತೆ ನಡೆಯಲಿವೆ.

ರಾಜ್ಯದಲ್ಲಿ ಈಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ  ಆರ್‌ಎಸ್‌ಎಸ್ ಮುಖಂಡರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ. ಸಮಾವೇಶ ರದ್ದುಗೊಂಡಿರುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ತನಿಖೆ ಆರಂಭ: ಗೃಹ ಸಚಿವ ಆರ್. ಅಶೋಕ ಅವರು ಬಿಡಿಎ ಸ್ವಾಧೀನದಲ್ಲಿದ್ದ ಭೂಮಿಯನ್ನು ಅಕ್ರಮವಾಗಿ ಖರೀದಿಸಿ, ನಂತರ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಶನಿವಾರ ತನಿಖೆ ಆರಂಭಿಸಿದ್ದಾರೆ.

ಲೊಟ್ಟೆಗೊಲ್ಲಹಳ್ಳಿಯ 23 ಗುಂಟೆ ಭೂಮಿ ಖರೀದಿಗೆ ಸಂಬಂಧಿಸಿದಂತೆ ಜಯಕುಮಾರ್ ಹಿರೇಮಠ ಎಂಬವರು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿ ನವೆಂಬರ್ 5ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅಶೋಕ ವಿರುದ್ಧ ಶುಕ್ರವಾರ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು.

ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗದ ಡಿವೈಎಸ್‌ಪಿ ಅಬ್ದುಲ್ ಅಹದ್ ಅವರನ್ನು ಅಶೋಕ ವಿರುದ್ಧದ ಪ್ರಕರಣದ ತನಿಖಾಧಿಕಾರಿಯಾಗಿ ಎಸ್‌ಪಿ ಪಿ.ಕೆ.ಶಿವಶಂಕರ್ ನೇಮಕ ಮಾಡಿದ್ದಾರೆ. ಶನಿವಾರವೇ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಡಿವೈಎಸ್‌ಪಿ, ದೂರು ಮತ್ತು ಅದರ ಜೊತೆಗಿರುವ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.

ತನಿಖೆ ನಂತರ ಅನುಮತಿ: ಈ ಪ್ರಕರಣದಲ್ಲಿ ಗೃಹ ಸಚಿವರ ವಿರುದ್ಧ ಖಾಸಗಿ ದೂರು ಸಲ್ಲಿಸುವ ಮುನ್ನ ರಾಜ್ಯಪಾಲರಿಂದ ಅನುಮತಿ ಪಡೆದಿಲ್ಲ. ಆದ್ದರಿಂದ, ಲೋಕಾಯುಕ್ತ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಮುನ್ನ ರಾಜ್ಯಪಾಲರ ಅನುಮತಿ ಪಡೆಯಬೇಕಾಗುತ್ತದೆ. ತನಿಖೆ ಪೂರ್ಣಗೊಂಡ ಬಳಿಕ ತನಿಖಾ ತಂಡ ಈ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry