ಗುರುವಾರ , ಮೇ 13, 2021
39 °C

ಅಡ್ವಾಣಿ ಮಾದರಿಯಲ್ಲಿ ರಥಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ದೇಶಾದ್ಯಂತ ನಡೆಸಲು ಉದ್ದೇಶಿಸಿರುವ ರಥಯಾತ್ರೆ ಮಾದರಿಯಲ್ಲಿಯೇ ತಾವು ಕೂಡಾ ರಾಜ್ಯದಲ್ಲಿ ರಥಯಾತ್ರೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯವನ್ನು ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ನಡೆಸುವ ರಥಯಾತ್ರೆ ಕುರಿತು ಅ. 10 ರಂದು ಶಾಸಕರ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಮುಂದಿನ 2 ವರ್ಷಗಳ ನಂತರ ಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶವಿಟ್ಟುಕೊಂಡು ಈ ರಥಯಾತ್ರೆ ನಡೆಸಲಾಗುತ್ತದೆ ಎಂದು ಹೇಳಿದರು.ತಮ್ಮ ಅವಧಿಯಲ್ಲಿ ಜಾರಿಗೆ ಬಂದ ಬಹಳಷ್ಟು ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಮಾಹಿತಿ ಹಾಗೂ ಪ್ರಚಾರದ ಕೊರತೆಯೇ ಇದಕ್ಕೆ ಕಾರಣ ಎಂದ ಅವರು, ತಾವು ಜಾರಿ ಮಾಡಿದ ಯೋಜನೆಗಳನ್ನು ರಾಜ್ಯದ ಜನತೆಗೆ ಈ ರಥಯಾತ್ರೆ ಮೂಲಕ ಮುಟ್ಟಿಸಲಾಗುವುದು. ಈ ರಥಯಾತ್ರೆ ರಾಜ್ಯಾದ್ಯಂತ 3 ತಿಂಗಳ ಕಾಲ ಸಂಚರಿಸಲಿದೆ ಎಂದರು.ಲೋಕಾಯುಕ್ತರ ತಾರತಮ್ಯ: ಲೋಕಾಯುಕ್ತರು ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರಿತ್ತು. ಆದರೆ ಅಂತಿಮ ವರದಿಯಲ್ಲಿ ಅವರ ಹೆಸರನ್ನು ತೆಗೆದುಹಾಕಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದರು.ಒಂದು ಕಣ್ಣಿಗೆ ಬಣ್ಣ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿ ಅನುಸರಿಸಿದ್ದಾರೆ.ಈ ಕುರಿತಂತೆ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಪುಸ್ತಕವೊಂದನ್ನು ಬರೆದಿದ್ದು, ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.