ಮಂಗಳವಾರ, ನವೆಂಬರ್ 12, 2019
24 °C

`ಅಡ್ವಾಣಿ ವಿರುದ್ಧ ಹೇಳಿಕೆಗೆ ಬದ್ಧ'

Published:
Updated:

ಮೈಸೂರು: 'ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ವಿರುದ್ಧ ನಾನು ಮಾಡಿರುವ ಆರೋಪಕ್ಕೆ ಈಗಲೂ ಬದ್ಧನಿದ್ದು, ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಬದಲಾಯಿಸುವುದಿಲ್ಲ' ಎಂದು ಕೆಜೆಪಿ ಮುಖಂಡ ವಿ.ಧನಂಜಯ್‌ಕುಮಾರ್ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು.ಪಕ್ಷದ ಅಭ್ಯರ್ಥಿ ಪರ ಮಂಗಳವಾರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಅಡ್ವಾಣಿ ವಿರುದ್ಧ ಮಾಡಿರುವ ಆರೋಪಗಳನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳುತ್ತಾರೆ. ಸಮಯ ಬಂದಾಗ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ನಾನು ಮಾಡಿರುವ ಆರೋಪಕ್ಕೆ ಅಡ್ವಾಣಿ ಅವರು ಪ್ರತಿಕ್ರಿಯೆ ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಇದ್ದೇನೆ. ಅವರ ಹೇಳಿಕೆ ಅನುಸರಿಸಿ ಮುಂದುವರಿಯುತ್ತೇನೆ' ಎಂದರು.'ಬಿಜೆಪಿಯ ಕೆಲವು ನಾಯಕರು ಬಿ.ಎಸ್.ಯಡಿಯೂರಪ್ಪ ಹಾಗೂ ಕೆಜೆಪಿ ವಿರುದ್ಧ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ನಾನು ಅಡ್ವಾಣಿ ಬಗ್ಗೆ ಆರೋಪ ಮಾಡಬೇಕಾಯಿತು. ನನ್ನ ಆರೋಪಕ್ಕೆ ಯಡಿಯೂರಪ್ಪ ಕ್ಷಮೆಯಾಚಿಸಿರುವುದು ಅವರ ದೊಡ್ಡಗುಣ. ಬಿಜೆಪಿ ಮುಖಂಡರು ಇದನ್ನು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)