ಅಣಕು ಪ್ರದರ್ಶನ ದುರ್ಘಟನೆ: ತನಿಖೆ

7

ಅಣಕು ಪ್ರದರ್ಶನ ದುರ್ಘಟನೆ: ತನಿಖೆ

Published:
Updated:

ಬೆಂಗಳೂರು: ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಶುಕ್ರವಾರ ನಡೆಸಿದ ಅಣಕು ಪ್ರದರ್ಶನದ ವೇಳೆ ನಡೆದ ದುರ್ಘಟನೆ ಸಂಬಂಧ ಆರ್.ಎಂ.ಸಿ ಯಾರ್ಡ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಗಳ ಡಿಜಿಪಿ ಎ.ಆರ್.ಇನ್ಫಂಟ್ ಮಾತನಾಡಿ `ಘಟನೆ  ತನಿಖೆ ನಡೆಸಲು ಇಲಾಖೆಗೆ ಆದೇಶಿಸಲಾಗಿದ್ದು, ಮಂಗಳೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ವರದರಾಜನ್ ಎಂಬುವವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ~ ಎಂದರು.ಅಗ್ನಿಶಾಮಕ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೋ, ಇಲ್ಲವೋ, ಘಟನೆ ಹೇಗೆ ನಡೆಯಿತು, ನಂತರ ನಳಿನಿಯನ್ನು ಆಸ್ಪತ್ರೆಗೆ ಹೇಗೆ ಕೊಂಡೊಯ್ಯಲಾಯಿತು, ಯಾವ ರೀತಿ ಚಿಕಿತ್ಸೆ ನೀಡಲಾಯಿತು, ಘಟನೆಯಲ್ಲಿ ಕಾರ್ಖಾನೆಯ ಪಾತ್ರವೇನು, ಅಗ್ನಿಶಾಮಕ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ನಡೆಯಿತೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ವರದರಾಜನ್ ಅವರಿಗೆ ಸೂಚಿಸಲಾಗಿದೆ ಎಂದರು.

ಘಟನೆ ಸಂಬಂಧ ಕಾರ್ಖಾನೆಯ ಕೆಲವು ಉದ್ಯೋಗಿಗಳ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಣಕು ಪ್ರದರ್ಶನವನ್ನು ಆಯೋಜಿಸಿದ್ದು ಯಾರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಅವರು ಹೇಳಿದರು.`ನಾವು ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಂಡಿದ್ದೆವು. ಆದರೂ ದುರಂತ ಸಂಭವಿಸಿರುವುದು ದುರದೃಷ್ಟಕರ. ಈ ಸಂಬಂಧ ನನ್ನ ಮೇಲಿನ ಅಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದು, ನತದೃಷ್ಟೆ ನಳಿನಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದೇವೆ ಎಂದು ಅಣಕು ಪ್ರದರ್ಶನದ ಉಸ್ತುವಾರಿ ವಹಿಸಿದ್ದ ಮುಖ್ಯ ಅಗ್ನಿಶಾಮಕ ಅಧಿಕಾರಿ ಎನ್.ಯು. ಈರಪ್ಪ ತಿಳಿಸಿದರು.ಅಣುಕು ಪ್ರದರ್ಶನಕ್ಕೆ ಏರ್ಪಡಿಸಿದ್ದ ರೂಪುರೇಷೆಯಲ್ಲಿ ಹಗ್ಗದಿಂದ ಕೆಳಗಿಳಿಯುವ ಪ್ರಾತ್ಯಕ್ಷಿಕೆ ಇರಲಿಲ್ಲ. ಉದ್ಯೋಗಿಗಳ ಒತ್ತಾಯಕ್ಕೆ ಮಣಿದು ಇದನ್ನು ಸೇರಿಸಿದ್ದು, ದೊಡ್ಡ ಪ್ರಮಾದವಾಯಿತು ಎಂದರು.`ನಳಿನಿ ಅವರ ಕುಟುಂಬ ಸದಸ್ಯರಿಗೆ ಪರಿಹಾರ ಹಣ ನೀಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry