ಗುರುವಾರ , ಆಗಸ್ಟ್ 22, 2019
27 °C
ಹರಪನಹಳ್ಳಿ ತಾಲ್ಲೂಕು: ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ

ಅಣಕು ಶವಯಾತ್ರೆ ನಡೆಸಿ ಆಕ್ರೋಶ

Published:
Updated:

ಹರಪನಹಳ್ಳಿ: ಹೈದರಾಬಾದ್- ಕರ್ನಾಟಕ ಪ್ರದೇಶದ 6ಜಿಲ್ಲೆಗಳಿಗೆ ಅನ್ವಯ ಆಗುವಂತೆ ಜಾರಿಗೊಳಿಸಲಾದ 371(ಜೆ) ಕಲಂ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ತಾಲ್ಲೂಕನ್ನು ಸೇರ್ಪಡೆಗೊಳಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಎಡ ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟದ ಕಾರ್ಯಕರ್ತರು ಗುರುವಾರ ಉಭಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಿ ಸುರಿಯುವ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು.ಹರಿಹರ ವೃತ್ತದಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಣಕು ಶವಗಳನ್ನು ಹೆಗಲ ಮೇಲೆ ಹೊತ್ತು, ಶಹನಾಯಿ ವಾದ್ಯಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಬಳಿಕ, ಹೊಸಪೇಟೆ ರಸ್ತೆ ಮಾರ್ಗವಾಗಿ ಪ್ರವಾಸಿಮಂದಿರ ವೃತ್ತಕ್ಕೆ ತೆರಳಿ ಅಣಕು ಶವಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಸಂಚಾಲಕ ಹೊಸಳ್ಳಿ ಮಲ್ಲೇಶ್ ಮಾತನಾಡಿ, ಹೈದರಾಬಾದ್- ಕರ್ನಾಟಕದ ಅವಿಭಾಜ್ಯ ಅಂಗವಾದ ಹಾಗೂ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಚಾರಿತ್ರಿಕ    ಪ್ರಾಮುಖ್ಯತೆ ಹೊಂದಿದ್ದ ತಾಲ್ಲೂಕನ್ನು ವಿಶೇಷ ಸ್ಥಾನಮಾನ ವ್ಯಾಪ್ತಿಯಿಂದ ಕೈಬಿಟ್ಟಿರುವುದು ತಾಲ್ಲೂಕಿನ ಜನತೆಗೆ ಬಗೆದ ದ್ರೋಹ.ಆಡಳಿತದ ಅನುಕೂಲ ಹಾಗೂ ರಾಜಕೀಯ ಸ್ವಹಿತಾಸಕ್ತಿಗಾಗಿ ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸುವ ಮೂಲಕ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಅಂಚೆ ಹಾಗೂ ದೂರವಾಣಿ ಇಲಾಖೆಗಳು ಈಗಲೂ ಬಳ್ಳಾರಿಯ ಕೇಂದ್ರ ಕಚೇರಿ ಅಧೀನದಲ್ಲಿಯೇ ಮುಂದುವರಿದಿವೆ.ವಿಧಾನ ಪರಿಷತ್‌ನ ಈಶಾನ್ಯ ಪದವೀಧರ ಹಾಗೂ ಬಳ್ಳಾರಿ ಜಿಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ನಾವೂ ಈಗಲೂ ಮತದಾನ ಮಾಡುತ್ತಿದ್ದೇವೆ. ಪರಿಸ್ಥತಿ ಈಗಿರುವಾಗ ಜಿಲ್ಲೆಯಿಂದ ಹೊರಹೋದ ಮಾತ್ರಕ್ಕೆ ತಾಲ್ಲೂಕನ್ನು ವಿಶೇಷ ಸ್ಥಾನಮಾನ ವ್ಯಾಪ್ತಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮ ಖಂಡನೀಯ. ಕೂಡಲೇ, ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಎಂದು ಒತ್ತಾಯಿಸಿದರು.ಸಿಪಿಐ(ಎಂಎಲ್) ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಇದ್ಲಿ ರಾಮಪ್ಪ, ಜೆಡಿಎಸ್ ಪಕ್ಷದ ಎ.ಜಿ. ವಿಶ್ವನಾಥ, ಶಿರಹಟ್ಟಿ ದಂಡ್ಯೆಪ್ಪ, ಸಿಪಿಐ(ಎಂಎಲ್) ಪಕ್ಷದ ದೊಡ್ಡಮನಿ ಪ್ರಸಾದ್, ಸಂದೇರ್ ಪರಶುರಾಮ್, ಸಾತವಾಡಿ ಮಂಜುನಾಥ, ರಾಘವೇಂದ್ರನಾಯ್ಕ, ಸಿಪಿಐ(ಎಂ) ಪಕ್ಷದ ವೆಂಕಟೇಶ್ ಬೇವಿನಹಳ್ಳಿ, ಸಿಪಿಐ ಪಕ್ಷದ ಗುಡಿಹಳ್ಳಿ ಹಾಲೇಶ್, ಮತ್ತಿಹಳ್ಳಿ ಬಸವರಾಜ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಕಲ್ಲಹಳ್ಳಿ ಮಂಜುನಾಥ, ಬೀರಪ್ಪ, ದೇವೇಂದ್ರಪ್ಪ, ಕರ್ನಾಟಕ ಪ್ರಾಂತರೈತ ಸಂಘದ ಎಚ್. ವೆಂಕಟೇಶ್ ಇತರರು  ಪಾಲ್ಗೊಂಡಿದ್ದರು.

Post Comments (+)