ಅಣುಕು ಪ್ರದರ್ಶನ ಪ್ರತಿಭಟನೆ

7

ಅಣುಕು ಪ್ರದರ್ಶನ ಪ್ರತಿಭಟನೆ

Published:
Updated:

ಬೆಂಗಳೂರು: ಬಿಜೆಪಿ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಸ್ತ್ರೀವಿರೋಧಿ ಕೃತ್ಯ ಮಾಡುತ್ತಿರುವುದರಿಂದ ಸರ್ಕಾರಕ್ಕೆ ದೋಷ ಅಂಟಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಶನಿವಾರ ನಗರದ ಆನಂದ್ ರಾವ್ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ಸಚಿವರು ಹೋಮ ಮಾಡಿಸುತ್ತಿರುವಂತೆ ಅಣುಕು ಪ್ರದರ್ಶನ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಸ್ತುತ ದಿನದವರೆಗೂ ಮಹಿಳೆಯರ ಮೇಲೆ ಅತ್ಯಚಾರ, ಕೊಲೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಸೇರಿದಂತೆ ಮಹಿಳಾ ವಿರೋಧಿ ನೀತಿಯನ್ನು ತಾಳಿದೆ. ಇದರಿಂದ ಪಕ್ಷಕ್ಕೆ ಈಗ ದೋಷ ಅಂಟಿಕೊಂಡಿದೆ ಎಂದರು.ಮಾಜಿ ಸಚಿವರು ವಿಧಾನ ಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದು ರಾಜ್ಯದ ಜನತೆಗೆ ಗೊತ್ತಾಗಿದೆ. ಆದರೂ ಸದನ ಸಮಿತಿ ರಚಿಸಿ ಅದರಲ್ಲಿ ಆಡಳಿತ ಪಕ್ಷದ ನಾಲ್ವರು ಸದಸ್ಯರನ್ನು ಹಾಗೂ ವಿರೋಧ ಪಕ್ಷದ ಮೂರು ಸದಸ್ಯರನ್ನು ನೇಮಿಸಲಾಗಿದೆ. ಈ ರೀತಿ ತಾರತಮ್ಯ ಮಾಡುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಮೊದಲ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಸಭೆಯ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅಶ್ಲೀಲ ದೃಶ್ಯ ವೀಕ್ಷಿಸಿದವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಸದನ ಸಮಿತಿ ರಚಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಅಲ್ಲದೇ ಈ ಸಣ್ಣ ಪ್ರಕರಣವನ್ನು ದೊಡ್ಡದು ಮಾಡಿ, ವಿರೋಧ ಪಕ್ಷದವರು ಲಾಭ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಿರುವುದು ನಾಚಿಕೆಗೇಡಿನ ವಿಷಯ ಎಂದರು.ಮಾಜಿ ಸಚಿವರು ಹಾಗೂ ಶಾಸಕರು ಈ ಎಲ್ಲಾ ಪ್ರಕರಣಗಳಿಂದ ಮುಕ್ತಿ ಪಡೆಯಲು ಹಾಗೂ ದೋಷ ನಿವಾರಣೆಗೆ ಹೋಮ ಮಾಡಿಸುತ್ತಿರುವಂತೆ ಪ್ರತಿಭಟನಾಕಾರರು ಅವರ ಮುಖವಾಡ ಧರಿಸಿ ಅಣುಕು ಪ್ರದರ್ಶನ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry