ಗುರುವಾರ , ಫೆಬ್ರವರಿ 25, 2021
26 °C
ಆರು ಸ್ಥಾವರ ಸ್ಥಾಪನೆಗೆ ಭಾರತ–ಫ್ರಾನ್ಸ್‌ ಒಪ್ಪಿಗೆ

ಅಣು ಸಹಕಾರ ಇನ್ನಷ್ಟು ವಿಸ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣು ಸಹಕಾರ ಇನ್ನಷ್ಟು ವಿಸ್ತಾರ

ನವದೆಹಲಿ (ಪಿಟಿಐ): ನಾಗರಿಕ ಪರಮಾಣು ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಣ ಸಹಕಾರ ಇನ್ನಷ್ಟು ವಿಸ್ತಾರಗೊಂಡಿದೆ. ಮಹಾರಾಷ್ಟ್ರದ ಜೈತಾಪುರದಲ್ಲಿ ಎರಡು ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಬದಲಿಗೆ ಆರು ಸ್ಥಾವರ ಸ್ಥಾಪಿಸಲು ಎರಡೂ ದೇಶಗಳು ನಿರ್ಧರಿಸಿವೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ನಡುವೆ ನಡೆದ ಮಾತುಕತೆಯಲ್ಲಿ ಈ ಅಣು ಸ್ಥಾವರಗಳಿಗೆ ನಿರಂತರವಾಗಿ ಪರಮಾಣು ಇಂಧನ ಪೂರೈಸುವ ಭರವಸೆಯನ್ನು ಒಲಾಂಡ್‌ ನೀಡಿದರು. ಈ ಸ್ಥಾವರಗಳ ಕಾರ್ಯನಿರ್ವಹಿಸುವಷ್ಟು ಕಾಲ ಇಂಧನ ಒದಗಿಸಲಾಗುವುದು ಎಂದು ಅವರು ಹೇಳಿದರು. ‘ಜೈತಾಪುರ ಅಣು ಸ್ಥಾವರ ಯೋಜನೆ 2017ರ ಹೊತ್ತಿಗೆ ಆರಂಭವಾಗಬೇಕು ಎಂದು ಇಬ್ಬರು ನಾಯಕರು ನಿರ್ಧರಿಸಿದ್ದಾರೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಗ್ರರ ವಿರುದ್ಧ ಕ್ರಮಕ್ಕೆ ಪಾಕ್‌ ಮೇಲೆ ಒತ್ತಡ: ಮುಂಬೈ ಮೇಲೆ 2008ರ ನವೆಂಬರ್‌ನಲ್ಲಿ ನಡೆದ ಉಗ್ರರ ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎರಡೂ ದೇಶಗಳು ಮತ್ತೆ ಪಾಕಿಸ್ತಾನವನ್ನು ಆಗ್ರಹಿಸಿವೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ಫ್ರಾನ್ಸ್‌ನ ಇಬ್ಬರು ಪ್ರಜೆಗಳೂ ಸೇರಿದ್ದರು.ಇಂತಹ ದಾಳಿ ಮುಂದೆ ನಡೆಯದಂತೆ ನೋಡಿಕೊಳ್ಳಬೇಕು ಎಂದೂ ಪ್ರಧಾನಿ ಮತ್ತು ಒಲಾಂಡ್‌ ನಡುವಣ ಮಾತುಕತೆ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ‘ಪ್ಯಾರಿಸ್‌ನಿಂದ ಪಠಾಣ್‌ಕೋಟ್‌ವರೆಗೆ ಭಯೋತ್ಪಾದನೆಯ ಕ್ರೌರ್ಯವನ್ನು ನಾವು ಕಂಡಿದ್ದೇವೆ.ಇದು ನಮ್ಮ ಮುಂದೆ ಇರುವ ಸಮಾನ ಸವಾಲು. ಅಧ್ಯಕ್ಷ ಒಲಾಂಡ್‌ ಮತ್ತು ನಾನು ಭಯೋತ್ಪಾದನೆ ತಡೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಒಪ್ಪಿಕೊಂಡಿದ್ದೇವೆ. ಭಯೋತ್ಪಾದನೆಯ ಬೆದರಿಕೆಯನ್ನು ಗಣನೀಯವಾಗಿ ತಗ್ಗಿಸಲು ನೆರವಾಗುವ ರೀತಿಯಲ್ಲಿ ಈ ಸಹಕಾರ ಇರಲಿದೆ’ ಎಂದು ಮೋದಿ ಹೇಳಿದ್ದಾರೆ.ರೈಲು ಎಂಜಿನ್‌ ತಯಾರಿ: ಅಂಬಾಲಾ ಮತ್ತು ಲುಧಿಯಾನದ ರೈಲು ನಿಲ್ದಾಣಗಳನ್ನು ಫ್ರಾನ್ಸ್‌ ಆಧುನೀಕರಣಗೊಳಿಸಲಿದೆ. ಜತೆಗೆ ಫ್ರಾನ್ಸ್‌ನ ಪ್ರಮುಖ ಕಂಪೆನಿ ಅಲ್‌ಸ್ಟಾಮ್‌ 800 ವಿದ್ಯುತ್‌ ಚಾಲಿತ ರೈಲು ಎಂಜಿನ್‌ಗಳನ್ನು ತಯಾರಿಸಲಿದೆ. ಇದು ಭಾರತದಲ್ಲಿ ಈಗ ತಯಾರಾಗುತ್ತಿರುವ ರೈಲ್ವೆ ಎಂಜಿನ್‌ಗಳಿಗಿಂತ ದುಪ್ಪಟ್ಟು ಅಶ್ವಶಕ್ತಿ ಸಾಮರ್ಥ್ಯ ಹೊಂದಿರಲಿದೆ. ಇದು ₹1,300 ಕೋಟಿ ವಿದೇಶಿ ಹೂಡಿಕೆಯ ಯೋಜನೆಯಾಗಿದೆ.ಅಲ್‌ಸ್ಟಾಮ್‌ ಮತ್ತು ಭಾರತೀಯ ರೈಲ್ವೆ ಒಪ್ಪಂದಕ್ಕೆ ಸಹಿ ಹಾಕಿವೆ. ಬಿಹಾರದ ಮಾಧೇಪುರದಲ್ಲಿ ರೈಲು ಎಂಜಿನ್‌ ತಯಾರಿಕೆ ನಡೆಯಲಿದೆ. 11 ವರ್ಷಗಳ ಅವಧಿಯಲ್ಲಿ ಈ 800 ಎಂಜಿನ್‌ಗಳನ್ನು ತಯಾರಿಸಲಾಗು ವುದು. ಈ ಎಂಜಿನ್‌ಗಳು 12 ಸಾವಿರ ಅಶ್ವಶಕ್ತಿ ಹೊಂದಿರಲಿವೆ. ಈಗ ಭಾರತದಲ್ಲಿ 6 ಸಾವಿರ ಅಶ್ವಶಕ್ತಿಯ ಎಂಜಿನ್‌ಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಹೊಸದಾಗಿ ತಯಾರಿಸಲಾಗುವ ರೈಲು ಎಂಜಿನ್‌ಗಳ ನಿರ್ವಹಣೆಯನ್ನು ಕೂಡ ಅಲ್‌ಸ್ಟಾಮ್‌ ಕಂಪೆನಿಯೇ ನೋಡಿಕೊಳ್ಳಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.