`ಅಣ್ಣ'ನ ತೊಟ್ಟಿಲ ಸೇವೆ, ನಾಮಕರಣ

7

`ಅಣ್ಣ'ನ ತೊಟ್ಟಿಲ ಸೇವೆ, ನಾಮಕರಣ

Published:
Updated:

ಸಿರುಗುಪ್ಪ: ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಮಹಾಂತೇಶ್ವರ ಮಠದಲ್ಲಿ ನಡೆಯುತ್ತಿರುವ ಬಸವಪುರಾಣ ಪ್ರವಚನದ 8ನೇ ದಿನದ ಬಸವಣ್ಣನವರ ತೊಟ್ಟಿಲ ಕಾರ್ಯಕ್ರಮದಲ್ಲಿ ಶನಿವಾರ ರಾತ್ರಿ ಅವಳಿ-ಜವಳಿ ಗಂಡು ಮಕ್ಕಳಿಗೆ ತಾಯಂದಿರು ಬಸವೇಶ್ವರ-ಮಹಾಂತೇಶ್ವರ ಎಂದು ನಾಮಕರಣ ಶಾಸ್ತ್ರ ಮಾಡಿ, ಜೋಗುಳ ಹಾಡಿಹರಸಿದ ಸನ್ನಿವೇಶ ಗಮನಸೆಳೆಯಿತು.ಬಸವ ಪುರಾಣದಲ್ಲಿನ ಸಂಪ್ರಾದಯದಂತೆ ಬಸವೇಶ್ವರರ ನಾಮಕರಣ ಸನ್ನಿವೇಶದಲ್ಲಿ ತಾಲ್ಲೂಕಿನ ಕೆ.ಸೂಗೂರು ಗ್ರಾಮದ ಎಚ್.ರುದ್ರಮುನಿಸ್ವಾಮಿ ಮತ್ತು ಎಚ್.ಕಾವ್ಯ ದಂಪತಿಗೆ ಜನಿಸಿದ್ದ ಅವಳಿ ಜವಳಿ ಮಕ್ಕಳಿಗೆ ಪುರಾಣದ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಾಮಕರಣ ಶಾಸ್ತ್ರ ಮಾಡಿಸಿಕೊಳ್ಳುವ ಸುಯೋಗ ಒದಗಿಬಂದಿತ್ತು.ಮನೆಯಲ್ಲಿ ನಡೆಯುವ ತೊಟ್ಟಿಲ ಸಂಭ್ರಮದಂತೆ ಮಠದ ಆವರಣದಲ್ಲಿ ಬಸವಣ್ಣನವರ ನಾಮಕರಣ ಆಚರಣೆಯನ್ನು ನೆರೆದ ನೂರಾರು ತಾಯಂದಿರ ಸಮ್ಮುಖದಲ್ಲಿ ಅಲಂಕೃತ ತೊಟ್ಟಿಲಲ್ಲಿ 16 ದಿನದ ಅವಳಿ-ಜವಳಿ ಗಂಡು ಮಕ್ಕಳಿಗೆ ಬಸವೇಶ್ವರ-ಮಹಾಂತೇಶ್ವರ ಎಂದು ಹೆಸರಿಟ್ಟು ಸಂಭ್ರಮಿಸಿದರು. ಹೆತ್ತತಾಯಿಗೆ ಉಡಿ ತುಂಬಿದರು, ನಾಮಕರಣ ಶಾಸ್ತ್ರಕ್ಕೆ ಬಂದವರಿಗೆಲ್ಲಾ ಅರಿಷಿಣ-ಕುಂಕುಮ ಕೊಟ್ಟು ಸ್ವಾಗತಿಸಿದರು. ಬಸವಣ್ಣ ಮತ್ತು ಮಹಾಂತೇಶ ಶಿವಯೋಗಿಯಂತೆ ಈ ಮಕ್ಕಳು ಶಿವಶರಣರಾಗಿ ಬಾಳಲಿ ಎಂದು ಮುತ್ತೈದೆಯರು ಜೋಗುಳ ಹಾಡಿ ಹರಿಸಿದರು.ಗ್ರಾಮದ ಜಾನಮ್ಮ, ನಾಗಮ್ಮ, ಬಸಮ್ಮ, ಶ್ರೀದೇವಿ, ಕರೂರಿನ ಓತೂರು ಲಕ್ಷ್ಮಿ ನಾಮಕರಣ ಶಾಸ್ತ್ರ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಸಂತಾನಭಾಗ್ಯಕ್ಕಾಗಿ ಮುತ್ತೈದೆಯರು ಉಡಿ ತುಂಬಿಸಿಕೊಂಡರು.ತೊಟ್ಟಿಲು ಜೀವನದ ಪ್ರಥಮ ಮೆಟ್ಟಿಲು ಇಂತಹ ಸಂಪ್ರದಾಯಗಳನ್ನು ಮನೆಗಳಲ್ಲಿ ಹಿರಿಯರು ಇಂದಿಗೂ ಆಚರಿಸುತ್ತಿರುವುದು ಭಾರತೀಯ ಸನಾತನ ಸಂಸ್ಕೃತಿಯ ಹಿರಿಮೆಯಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಹಾಲ್ವಿಯ ಶ್ರೀ ಮಹಾಂತ ಶ್ರೀಗಳು ಆಶೀರ್ವಚನ ನೀಡಿದರು.ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯನ್ನು ಬೆಳೆಸುವಲ್ಲಿ ಬಸವಣ್ಣನವರ ಆದರ್ಶ ಮತ್ತು ವಚನ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತವೆ, ಪ್ರತಿಯೊಬ್ಬರು ಬಸವಣ್ಣನವರ ಆದರ್ಶ ಮತ್ತು ಸಂದೇಶಗಳನ್ನು ಪಾಲನೆ ಮಾಡುವಂತೆ ಶ್ರೀಗಳು ಕರೆ ನೀಡಿದರು.ಮುದಗಲ್ ಮಹಾಂತ ಸ್ವಾಮೀಜಿ ಬಸವಪುರಾಣ ಪ್ರವಚನ ನಡೆಸಿಕೊಟ್ಟರು. ಶಿವರುದ್ರಸ್ವಾಮಿ ಗವಾಯಿ, ವಾಯಲಿನ್ ವಾದಕ ಹನುಮಂತಪ್ಪ, ತಬಲಾ ವಾದಕ  ಬಸವರಾಜ ಸಂಗೀತ ಸೇವೆ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry