ಅಣ್ಣಾಗೆ ಪೊಲೀಸ್ ಶರಣು

7

ಅಣ್ಣಾಗೆ ಪೊಲೀಸ್ ಶರಣು

Published:
Updated:
ಅಣ್ಣಾಗೆ ಪೊಲೀಸ್ ಶರಣು

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಅವರ ಬಂಧನದ ಬಳಿಕ ವ್ಯಕ್ತವಾದ ಸಾರ್ವಜನಿಕ  ಒತ್ತಡಕ್ಕೆ ಮಣಿದ ದೆಹಲಿ ಪೊಲೀಸರು  ಖ್ಯಾತ ಗಾಂಧಿವಾದಿ ಮತ್ತು ಅವರ ತಂಡಕ್ಕೆ ರಾಷ್ಟ್ರೀಯ ರಾಜಧಾನಿಯಲ್ಲಿ ನಿರಶನ ನಡೆಸಲು ಹಾಕಿದ ಎಲ್ಲ ಪೂರ್ವ ಷರತ್ತುಗಳನ್ನೂ ಬುಧವಾರ ಹಿಂತೆಗೆದುಕೊಂಡಿದ್ದಾರೆ.ಪ್ರತಿಭಟನೆಗೆ ರಾಮಲೀಲಾ ಮೈದಾನವನ್ನು ಒಪ್ಪಲು ತಾವು ಸಿದ್ಧರಿರುವುದಾಗಿ ಹಜಾರೆ ಇಂಗಿತ ವ್ಯಕ್ತ ಪಡಿಸಿದ ಬಳಿಕ ಪೊಲೀಸರು ಪ್ರತಿಭಟನಕಾರರ ಸಂಖ್ಯೆ ಸಂಬಂಧಿತ ಷರತ್ತುಗಳ ಬಗ್ಗೆ ಮರು ಸಮಾಲೋಚನೆ ಅವುಗಳನ್ನು ಹಿಂತೆಗೆದುಕೊಂಡು, ಆರಂಭದಲ್ಲಿ ಏಳುದಿನಗಳ ಅವಧಿಗೆ ಪ್ರತಿಭಟನೆ ನಡೆಸಲು ಒಪ್ಪಿದರು. ಈ ಅವಧಿಯನ್ನು ನಂತರ ಮುಂದುವರೆಸುವ ಬಗೆಗೂ ಒಪ್ಪುವ ಸೂಚನೆ ನೀಡಿದರು.ಹಜಾರೆ, ಅವರ ತಂಡ ಮತ್ತು ಪೊಲೀಸರ ಮಧ್ಯೆ ನಡೆದ ಸುದೀರ್ಘ ಮಾತುಕತೆಯ ಕಾಲದಲ್ಲಿ ಹೊಸ ಪ್ರಸ್ತಾವಗಳು ಚರ್ಚೆಗೆ ಬಂದವು. ಪ್ರಾರಂಭದಲ್ಲಿ ಐದು ದಿನಗಳ ಪ್ರತಿಭಟನೆಗೆ ಮಾತ್ರ ಅವಕಾಶ ನೀಡುವುದಾಗಿ ಪೊಲೀಸರು ಹೇಳಿದರು. ಅದನ್ನು ತಳ್ಳಿ ಹಾಕಿದ ಅಣ್ಣಾ ತಂಡ ಒಂದು ತಿಂಗಳ ಸತ್ಯಾಗ್ರಹಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿತು.ಮೂರು ದಿನದ ಪ್ರತಿಭಟನೆ ಮತ್ತು 5000ಕ್ಕಿಂತ ಒಳಗಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಇರಬೇಕೆಂಬ ಪೊಲೀಸರ ಷರತ್ತನ್ನು ಒಪ್ಪಲು ಹಜಾರೆ ಅವರು ನಿರಾಕರಿಸಿದ ಬಳಿಕ ಫಿರೋಜ್ ಷಾ ಕೋಟ್ಲಾ ಮೈದಾನ ಬಳಿಯ  ಜಯಪ್ರಕಾಶ ನಾರಾಯಣ ಮೈದಾನದಲ್ಲಿ ಅನಿರ್ದಿಷ್ಟ ಕಾಲದ ನಿರಶನ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು.ಮುಂದುವರೆದ ಬೆಂಬಲ: ಈ ಮಧ್ಯೆ ಅಣ್ಣಾ ಹಜಾರೆ ಮತ್ತು ಅವರ ~ಭ್ರಷ್ಟಾಚಾರ ವಿರುದ್ಧ ಭಾರತ~ ತಂಡದ ಹೋರಾಟಕ್ಕೆ ರಾಷ್ಟ್ರವ್ಯಾಪಿ ಬೆಂಬಲ ಅವ್ಯಾಹತವಾಗಿ ಮುಂದುವರೆದಿದೆ.ರಾಜಧಾನಿ ನವದೆಹಲಿಯಲ್ಲಿ ತಿಹಾರ್ ಸೆರೆಮನೆಯ ಮುಂದೆ ಮಂಗಳವಾರ ನಡುರಾತ್ರಿಯಲ್ಲೂ ಸೇರಿದ ಸಹಸ್ರಾರು ಮಂದಿ ಬೆಂಬಲಿಗರು ಕ್ಯಾಂಡಲ್ ಉರಿಸಿ ಜ್ಯೋತಿ ಬೆಳಗುವ ಮೂಲಕ ಅಣ್ಣಾ ಅವರಿಗೆ ಬೆಂಬಲ ವ್ಯಕ್ತ ಪಡಿಸಿದರು.ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪಕ್ಷಭೇದವಿಲ್ಲದ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ವಕೀಲರು, ವಿದ್ಯಾರ್ಥಿಗಳು ರಸ್ತೆಗಿಳಿದು ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಬೆಂಗಳೂರಿನಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕರೆಯ ಮೇರೆಗೆ ತರಗತಿಗಳನ್ನು ಬಹಿಷ್ಕರಿಸಿ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಹೋರಾಟದಲ್ಲಿ ಪಾಲ್ಗೊಂಡರು. ನಿವೃತ್ತ ಲೋಕಾಯುಕ್ತ ಹಾಗೂ ಲೋಕಾಯುಕ್ತ ಮಸೂದೆ ರಚನೆಯ ಜಂಟಿ ಸಮಿತಿ ಸದಸ್ಯರಾಗಿದ್ದ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರೂ ಈ ದಿನವೂ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry