ಅಣ್ಣಾವ್ರು ಪಾದ ತೊಳೆದಾಗ ಮಿಂಚು ಹೊಡೆದಂತಾಗಿತ್ತು

7
‘ಬೆಳ್ಳಿ ಹೆಜ್ಜೆ’ಯಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ರಾಮಕೃಷ್ಣ

ಅಣ್ಣಾವ್ರು ಪಾದ ತೊಳೆದಾಗ ಮಿಂಚು ಹೊಡೆದಂತಾಗಿತ್ತು

Published:
Updated:
ಅಣ್ಣಾವ್ರು ಪಾದ ತೊಳೆದಾಗ ಮಿಂಚು ಹೊಡೆದಂತಾಗಿತ್ತು

ಬೆಂಗಳೂರು: ‘ಡಾ.ರಾಜ್‌ಕುಮಾರ್‌ ಅಭಿನಯದ ‘ಸಂಧ್ಯಾರಾಗ’ ನನಗೆ ಸ್ಫೂರ್ತಿ ಕೊಟ್ಟ ಚಿತ್ರವಾಗಿತ್ತು’ ಎಂದು ನಟ ರಾಮಕೃಷ್ಣ ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿ  ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು.‘ಪುಟ್ಟಣ್ಣ ಕಣಗಾಲ್‌ ಅವರೊಂದಿಗಿನ ಒಡನಾಟ 8 ವರ್ಷಗಳದ್ದು. ಅವರೊಂದಿಗೆ 5 ಸಿನಿಮಾ  ಮಾಡುವ ಅವಕಾಶ ದೊರೆಯಿತು. ಅವರಿಂದ ಅನೇಕ ಕಲಾವಿದರು ಮೇಲೆ ಬರಲು ಸಾಧ್ಯವಾಯಿತು.  ಪುಟ್ಟಣ್ಣ ಅವರು ನನ್ನ ಜೀವನ ಕಡೆದ ಶಿಲ್ಪಿ’ ಎಂದರು.‘ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಉದ್ದ ಉದ್ದ ಸಂಭಾಷಣೆ ಹೇಳಲು ನಂಗೆ ಕಷ್ಟವಾಗುತ್ತಿತ್ತು. ಮಧ್ಯಾಹ್ನದವರೆಗೂ ಚಿತ್ರೀಕರಣ ನಡೆದರೂ ನನ್ನ ಸಂಭಾಷಣೆ ಸರಿ ಯಾಗಲಿಲ್ಲ. ಮಧ್ಯಾಹ್ನದ ಮೇಲಿನ  ಚಿತ್ರೀಕರಣದಲ್ಲಿ ಚಿತ್ರೀಕರಣ ಸುಸೂತ್ರ ವಾಗಿ ನಡೆಯಿತು. ಆಗ ಸಂತಸ ದಿಂದ ಪುಟ್ಟಣ್ಣ ಅವರು ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿ 10 ರೂಪಾಯಿ ನೋಟು ನೀಡಿದ್ದರು. ಅದಕ್ಕೆ ಅವರಿಂದ ಸಹಿ ಹಾಕಿಸಿ ಮನೆಯಲ್ಲಿ ಕಟ್ಟು ಗಾಜು ಹಾಕಿಸಿಇಟ್ಟಿದ್ದೇನೆ’ ಎಂದು ತಮ್ಮ ನೆನಪನ್ನು ಹಂಚಿಕೊಂಡರು.‘ಅಣ್ಣಾವ್ರ ಜತೆಗೆ ಮೊದಲ ಚಿತ್ರ ‘ಬಭ್ರು ವಾಹನ’. ಆಗ ಶ್ರೀಕೃಷ್ಣ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಲಾಗಿತ್ತು.ದ್ವಾರಕೆಯಲ್ಲಿ  ಕೃಷ್ಣನ ಪಾತ್ರ  ದಲ್ಲಿ ನಾನು  ನಡೆದುಕೊಂಡು  ಬರಬೇಕಿತ್ತು. ಆಗ ಡಾ.ರಾಜ್‌ಕುಮಾರ್‌ ಅವರು ನನ್ನ ಪಾದವನ್ನು ತೊಳೆಯುವ ದೃಶ್ಯವಿತ್ತು. ನನಗೆ ಒಂದು ತರಹ ಭಯ. ಅಣ್ಣಾವ್ರ ನನ್ನ ಕಾಲುಗಳನ್ನು ಮುಟ್ಟಿದ ಕೂಡಲೇ ನನಗೆ ಮಿಂಚು ಹೊಡೆದಂತಾಗಿತ್ತು’ ಎಂದು ಭಾವುಕರಾದರು.‘ಪುಟ್ಟಣ್ಣ ಕಣಗಾಲ್‌ ಅವರು ‘ಫಲಿತಾಂಶ’ ಚಿತ್ರಕ್ಕೆ ನಟರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದರು. ಆಗ ಅವರ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಆದರೆ, ನನಗೆ ಅಣ್ಣಾವ್ರ ಜತೆಗೆ ‘ಬಭ್ರುವಾಹನ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.  ಇದರಿಂದ, ಪುಟ್ಟಣ್ಣ ಅವರ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ’ ಎಂದರು.‘ಪುಟ್ಟಣ್ಣ ಅವರು ನಂತರ ನನಗೆ ಅವಕಾಶ ನೀಡಿದರು. ಅವರಿಂದ ಅನೇಕ ಕಲಾವಿದರು ಮೇಲೆ ಬಂದಿದ್ದಾರೆ. ನನ್ನ ಹೆಂಡತಿ ಮಂಗಳಾ, ಪುಟ್ಟಣ್ಣ ಅವರ ಮನೆಯ ಪಾತ್ರೆ ತೊಳೆಯುವ ಹುಡುಗಿ ಯಾಗಿದ್ದಳು. ಈಗ, ಅವಳು ನನ್ನ ಹೆಂಡತಿಯಾಗಿ ನನ್ನ ಸಂಸಾರವನ್ನು ಸರಿದೂಗಿ ಸುತ್ತಿದ್ದಾಳೆ’  ಎಂದು ತಮ್ಮ ಪತ್ನಿಯ ಬಗೆಗೆ ಹೇಳಿದರು.‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿ ಅನೇಕ ಅನುಭವಗಳಾದವು. ಅಲ್ಲಿ ಜೀವನಾನುಭವ ದೊರೆಯಿತು. ಅಲ್ಲದೇ, ಅದು ಒಂದು ಸಾಮಾಜಿಕ ಚಿತ್ರವಾಗಿತ್ತು’ ಎಂದು ಹೇಳಿದರು.‘ನಾನು ವಿದ್ಯಾರ್ಥಿಯಾಗಿದ್ದಾಗ ಅಷ್ಟೊಂದು ಬುದ್ಧಿವಂತ ವಿದ್ಯಾರ್ಥಿಯಾಗಿರಲಿಲ್ಲ. ಗಣಿತ  ಕಷ್ಟವಿತ್ತು. ಅನುತ್ತೀರ್ಣನಾಗ್ತೇನೆ ಎಂದು ಯೋಚಿಸಿದ್ದೆ. ಚಿಕ್ಕವನಿರುವಾಗಲೇ ತಂದೆ ತೀರಿಕೊಂಡಿದ್ದರು. ಹೀಗಾಗಿ ಚಿಕ್ಕಪ್ಪನೇ ಎಲ್ಲಾ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಹೇಗೋ ಬೆಳೆದೆ’ ಎಂದು ತಮ್ಮ ಬಾಲ್ಯದ ದಿನಗಳನ್ನು ಹೇಳಿದರು.‘ಊರಿನಲ್ಲಿ ಯಕ್ಷಗಾನ ಆಟ ನಡೆಯುತ್ತಿತ್ತು. ಅಲ್ಲಿಂದಲೇ ನಾಟಕದ ಪ್ರಭಾವವೂ ಆರಂಭವಾಯಿತು.

ಅದೇ ವೇಳೆಯಲ್ಲಿ ಗುಬ್ಬಿ ನಾಟಕ ಕಂಪೆನಿಯು ಶಿರಸಿಗೆ ಬಂದಿತ್ತು. ಆಗ, ಅಲ್ಲಿನ ದೊಡ್ಡ ಸೆಟ್‌, ತಾಂತ್ರಿಕತೆ,

ಅಲ್ಲಿನ ವೈಭವ ಮೂಕನನ್ನಾಗಿಸಿತ್ತು. ಇದರಿಂದ, ಗುಬ್ಬಿ ನಾಟಕ ಕಂಪೆನಿ ಸೇರಬೇಕು ಎಂದು ಅಂದೇ ನಿಶ್ಚಯಿಸಿದೆ’ ಎಂದು ನುಡಿದರು.‘ಒಂದು ದಿನ ಮಳೆ ಬರುತ್ತಿರುವ ಸಂದರ್ಭದಲ್ಲಿ ಯಾರೂ ಮಳೆಯಲ್ಲಿ ನೆನೆಯಬೇಡಿ. ಒಳಗೆ ಬನ್ನಿ ಎಂದು ಕರೆದ ಕೂಡಲೇ ನಾನು ಗುಬ್ಬಿ ನಾಟಕ ಕಂಪೆನಿಯ ಒಳಗಿದ್ದೆ. ಆಗ ಗುಬ್ಬಿ ವೀರಣ್ಣ ಅವರ ಮಗಳ ಸ್ವರ್ಣಮ್ಮ ನನ್ನ ಅತ್ಯಂತ ಪ್ರೀತಿಯಿಂದ ಕಂಡರು. ಆಗಿನಿಂದ ಅವರ ಸಂಪರ್ಕ ಬೆಳೆಯಿತು. ಅಂದಿನಿಂದ ಅವರೇ ನನಗೆ ಮಾರ್ಗದರ್ಶಕರಾದರು. ಅವರು ಗುಬ್ಬಿ ಕಂಪೆನಿಯಲ್ಲಿದ್ದ ಎಲ್ಲರ ಆಟೋಗ್ರಾಫ್‌ ಕಳುಹಿಸಿದ್ದರು. ಈಗಲೂ ಅದನ್ನು ಹಾಗೇ ಇಟ್ಟಿದ್ದೇನೆ. ಅವರು ನನಗೆ ಪತ್ರಗಳನ್ನು ಬರೆದು ಮಾರ್ಗದರ್ಶನ ನೀಡುತ್ತಿದ್ದರು.ನಾನು ಈ ಮಟ್ಟಕ್ಕೆ ಬರಲು ಅವರು ನನಗೆ ಸ್ಫೂರ್ತಿಯಾದರು’ ಎಂದು ರಾಮಕೃಷ್ಣ ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry