ಅಣ್ಣಾ ಆರೋಗ್ಯ ಕುರಿತು ಕೇಂದ್ರದ ನಿಷ್ಕಾಳಜಿ: ಬೇಡಿ

7

ಅಣ್ಣಾ ಆರೋಗ್ಯ ಕುರಿತು ಕೇಂದ್ರದ ನಿಷ್ಕಾಳಜಿ: ಬೇಡಿ

Published:
Updated:
ಅಣ್ಣಾ ಆರೋಗ್ಯ ಕುರಿತು ಕೇಂದ್ರದ ನಿಷ್ಕಾಳಜಿ: ಬೇಡಿ

ನವದೆಹಲಿ (ಪಿಟಿಐ): ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ 73 ರ ಹರೆಯದ ಗಾಂಧಿವಾದಿ ಅಣ್ಣಾ ಹಜಾರೆ ಅವರ ಸತ್ಯಾಗ್ರಹವು ಆರನೇಯ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಅವರ ಆರೋಗ್ಯ ಕುರಿತು ಕೇಂದ್ರ ಸರ್ಕಾರ ಕಾಳಜಿ ವಹಿಸಿಲ್ಲ ಎಂದು ಅಣ್ಣಾ ತಂಡದ ಕಾರ್ಯಕರ್ತೆ ಕಿರಣ್ ಬೇಡಿ ಭಾನುವಾರ ಆರೋಪಿಸಿದರು.‘ಅಣ್ಣಾ ಅವರು ಆರು ದಿನಗಳಿಂದ ಆಹಾರ ಸೇವಿಸಿಲ್ಲ ಆದರೆ ಯಾರೊಬ್ಬರು (ಕೇಂದ್ರ ಸರ್ಕಾರದಲ್ಲಿರುವವರು) ಈ ಕುರಿತು ಗಮನ ಹರಿಸಿಲ್ಲ. ಸಂಸದರು ಮತ್ತು ಕೇಂದ್ರ ಸರ್ಕಾರ ಅಣ್ಣಾ ಅವರು ನೀಡಿದ ಗಡುವಿನ ಒಳಗೆ ಮಸೂದೆ ಅಂಗೀಕರಿಸುವ ನಿಟ್ಟಿನಲ್ಲಿ ಸ್ಪಂದಿಸಬೇಕು’ ಎಂದು ಅವರು ಒತ್ತಾಯಿಸಿದರು.ಅಣ್ಣಾ ಹಜಾರೆ ಅವರು ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಜನ ಲೋಕಪಾಲ ಮಸೂದೆ ಅಂಗೀಕರಿಸಲು ಅಗಸ್ಟ್ 30ರ ಗಡುವು ನೀಡಿದ್ದು, ಗಡುವಿನ ಒಳಗೆ ಕೇಂದ್ರ ಮಸೂದೆ ಅಂಗೀಕರಿಸದಿದ್ದರೆ ತಾವು ‘ಕೊನೆ ಉಸಿರಿರುವರೆಗೂ’ ಉಪವಾಸ ನಿರಂತರ ಮುಂದುವರಿಸುವುದಾಗಿ ಹೇಳಿದ್ದಾರೆ.ಸರ್ಕಾರ ಮತ್ತು ಅಣ್ಣಾ ತಂಡದ ನಿರಂತರ ಪಟ್ಟಿನ ಹೊರತಾಗಿಯೂ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಯ ಅಗತ್ಯ ಎಂಬ ಅಭಿಪ್ರಾಯ ಶನಿವಾರ ಉಭಯ ಕಡೆಗಳಿಂದಲೂ ವ್ಯಕ್ತವಾಗಿತ್ತು.

ಪ್ರಧಾನಿ ಮನಮೋಹನ್ ಸಿಂಗ್ ಅವರು  ‘ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಕೊಡುಕೊಳ್ಳುವುದು ಸಾಕಷ್ಟಿರುವುದರಿಂದ ಸರ್ಕಾರ ಸಂಧಾನ ಚರ್ಚೆಗೆ ಮುಕ್ತ ಮನಸ್ಸು ಹೊಂದಿದೆ. ಆದರೆ ಪ್ರಬಲ ಮಸೂದೆ ಜಾರಿ ನಿಟ್ಟಿನಲ್ಲಿ ರಾಷ್ಟ್ರೀಯ ಒಮ್ಮತದ ಅಗತ್ಯವಿರುವುದರಿಂದ ಎಲ್ಲ ವರ್ಗದ ಜನರ ಅಭಿಪ್ರಾಯ ಮತ್ತು ಸಹಕಾರ ಪಡೆಯಲಾಗುವುದು’ ಎಂದು ಶನಿವಾರ ಹೇಳಿದ್ದರು.ಪ್ರಧಾನಿಯ ಈ ಹೇಳಿಕೆಯ ನಂತರ ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರು ‘ನಾವು ಮಾತುಕತೆಗೆ ಸಿದ್ಧ. ಆ ಕಡೆಯಿಂದ ಆಹ್ವಾನ ಬಂದಿಲ್ಲ. ಯಾರನ್ನು ಭೇಟಿ ಮಾಡಬೇಕು? ಯಾರು ಜತೆ ಮಾತನಾಡಬೇಕು?’ ಎಂದು ಕೇಳಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry