ಅಣ್ಣಾ ಕೂಗಿಗೆ ಸಾವಿರ ದನಿಗಳು...

7

ಅಣ್ಣಾ ಕೂಗಿಗೆ ಸಾವಿರ ದನಿಗಳು...

Published:
Updated:
ಅಣ್ಣಾ ಕೂಗಿಗೆ ಸಾವಿರ ದನಿಗಳು...

ಬೆಂಗಳೂರು: ಅಣ್ಣಾ ಹಜಾರೆ ಅವರ ಹೋರಾಟ ಬೆಂಬಲಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಧರಣಿಗೆ ಶನಿವಾರ ಜನಸಾಗರವೇ ಹರಿದುಬಂತು. ಐಟಿ-ಬಿಟಿ ಕಂಪೆನಿಗಳಿಗೆ ರಜೆ ಇದ್ದ ಪರಿಣಾಮ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದರು.ಯೂತ್ ಎಗೆನೆಸ್ಟ್ ಕರಪ್ಷನ್, ಶ್ರೀಗಂಧ ಕಾವಲ್ ಬಡಾವಣೆಯ ಸಂಕಲ್ಪ ಸೇವಾ ಟ್ರಸ್ಟ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸದಸ್ಯರು ವಿವಿಧೆಡೆ ರ‌್ಯಾಲಿಗಳನ್ನು ನಡೆಸಿದರು.ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗಳು ಮುಗಿದ ನಂತರ ಧರಣಿಯಲ್ಲಿ ಪಾಲ್ಗೊಂಡು ಹಜಾರೆ ಅವರಿಗೆ ಬೆಂಬಲ ಸೂಚಿಸಿದರು. ಜೈನ್ ಕಾಲೇಜು, ಸಿಂಧಿ ಕಾಲೇಜು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‌್ಯಾಲಿ ನಡೆಸಿದರು.ಕೆಲ ವಿದ್ಯಾರ್ಥಿಗಳು ತೆರೆದ ವಾಹನಗಳು ಹಾಗೂ ಬೈಕ್‌ಗಳಲ್ಲಿ ರ‌್ಯಾಲಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ದಕ್ಷಿಣ ಕನ್ನಡ ಕರಾವಳಿ ಮಿತ್ರ ಮಂಡಳಿ ಸದಸ್ಯರು ಯಕ್ಷಗಾನ ಪ್ರದರ್ಶಿಸಿ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು. ಬಾಗಲಕೋಟೆಯಿಂದ ಬೈಕ್ ರ‌್ಯಾಲಿ ಕೈಗೊಂಡಿದ್ದ ಅಂಗವಿಕಲರು ಬೆಳಿಗ್ಗೆ ಸ್ವಾತಂತ್ರ್ಯ ಉದ್ಯಾನ ತಲುಪಿದರು.ಚಲನಚಿತ್ರ ಸಹ ಕಲಾವಿದರ ಸಂಘದ ಸದಸ್ಯರು ನೃತ್ಯ ಮಾಡಿ ಧರಣಿ ನಿರತರನ್ನು ಹುರಿದುಂಬಿಸಿದರು. ಮಲ್ಲೇಶ್ವರ ಎಂಟನೇ ಮುಖ್ಯರಸ್ತೆ ನಿವಾಸಿಗಳು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಸಂಜೆ ಮಾನವ ಸರಪಳಿ ರಚಿಸಿ ಹಾಗೂ ಮೇಣದ ಬತ್ತಿ ಹಚ್ಚಿ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿದರು. ಹಿರಿಯ ಕಲಾವಿದರಾದ ಎಂ.ಬಿ.ಪಾಟೀಲ್ ಅವರು ಹಜಾರೆ ಅವರ ಹೋರಾಟ ಕುರಿತು 10 ಅಡಿ ಉದ್ದದ ಭಿತ್ತಿಚಿತ್ರ ರಚಿಸಿದರು.`ಹೋರಾಟಗಾರರು ವಿರಳ~ 

 `ದೇಶದ ಪ್ರತಿ ಪ್ರಜೆಯೂ ಹಜಾರೆ ಅವರ ಹೋರಾಟವನ್ನು ಬೆಂಬಲಿಸಬೇಕು. ಹಜಾರೆ ಅವರಂತಹ ಹೋರಾಟಗಾರರು ನಮಗೆ ಸಿಗುವುದಿಲ್ಲ. ಅವರ ಹೋರಾಟಕ್ಕೆ ಸಿಗುವ ಜನ ಬೆಂಬಲಕ್ಕೆ ಮಣಿದು ಕೇಂದ್ರ ಸರ್ಕಾರ ತಾನಾಗಿಯೇ ಪರಿಣಾಮಕಾರಿ ಜನಲೋಕಪಾಲ ಮಸೂದೆ ಜಾರಿ ಮಾಡುತ್ತದೆ~ ಎಂದು ನಟ ಉಪೇಂದ್ರ ಹೇಳಿದರು.`ಹಜಾರೆ ಅವರು ದೊಡ್ಡ ವ್ಯಕ್ತಿ. ಅವರ ಹೋರಾಟ ಬೆಂಬಲಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರುತ್ತಿರುವ ಜನರೇ ಇದಕ್ಕೆ ಸಾಕ್ಷಿ. ವೈಯಕ್ತಿಕ ಕಾರಣಗಳಿಂದ ಎಲ್ಲ ಜನರು ಹಜಾರೆ ಅವರ ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ ಆ ಜನರೆಲ್ಲ ಪರೋಕ್ಷವಾಗಿ ಹಜಾರೆ ಅವರ ಬೆಂಬಲಕ್ಕಿದ್ದಾರೆ. ಜನರು ಟಿ.ವಿ ಮುಂದೆ ಕುಳಿತು ಕಾಲಹರಣ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ದಯವಿಟ್ಟು ಬೆಂಬಲಿಸಿ~ ಎಂದು ಕರೆ ಕೊಟ್ಟರು.`ಯಥಾ ರಾಜ ತಥಾ ಪ್ರಜಾ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಯಥಾ ಪ್ರಜಾ ತಥಾ ರಾಜ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಪ್ರಜೆಯೂ ವೈಯಕ್ತಿಕವಾಗಿ ಸುಧಾರಣೆಗೊಂಡರೆ ಕಾನೂನಿನ ಅಗತ್ಯವೇ ಇರುವುದಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.ಭ್ರಷ್ಟಾಚಾರ ವಿರುದ್ಧದ ಹಜಾರೆ ಅವರ ಹೋರಾಟ ಕುರಿತು ರಚಿಸಿರುವ ಗೀತೆಯನ್ನು ಹಾಡುವ ಮೂಲಕ ಉಪೇಂದ್ರ ಅವರು ಧರಣಿ ನಿರತರನ್ನು ಹುರಿದುಂಬಿಸಿದರು.ಪ್ರತಿಜ್ಞಾ ವಿಧಿ

 `ಭಾರತದ ಪ್ರಜೆಯಾಗಿ, ಹಜಾರೆ ಮತ್ತು ಭ್ರಷ್ಟಾಚಾರ ವಿರುದ್ಧದ ಆಂದೋಲನದ ಬೆಂಬಲಿಗನಾಗಿ ಎಂದಿಗೂ ಲಂಚ ಪಡೆಯುವುದಿಲ್ಲ ಮತ್ತು ಲಂಚ ಕೊಡುವುದಿಲ್ಲ, ದೇಶದ ಎಲ್ಲ ಕಾನೂನುಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತೇನೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಗೂ ದೇಶವನ್ನು ಗೌರವಿಸುತ್ತೇನೆ, ಎಲ್ಲ ರೀತಿಯ ತೆರಿಗೆಪಾವತಿಸುತ್ತೇನೆ~ ಎಂದು ಸಂತೋಷ್ ಹೆಗ್ಡೆ ಅವರು ಧರಣಿ ನಿರತರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಭಾರಿ ಪಂಜಿನ ಮೆರವಣಿಗೆ

ಬೆಂಗಳೂರು:
ಪ್ರಬಲ ಜನಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ನೇತೃತ್ವದ ಚಳವಳಿ ಬೆಂಬಲಿಸಿ ಬನಶಂಕರಿ 3ನೇ ಹಂತ 2ನೇ ಘಟ್ಟದಲ್ಲಿ ಶನಿವಾರ ಸಂಜೆ ಭಾರಿ ಪಂಜಿನ ಮೆರವಣಿಗೆ ನಡೆಯಿತು.ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವತಿಯರು ಸೇರಿದಂತೆ ಎಲ್ಲ ವಯೋಮಾನದ ಜನ ಪಾಲ್ಗೊಂಡಿದ್ದರು. ಬ್ಯಾಂಡ್‌ಸೆಟ್ ಹಾಗೂ ತಾಳವಾದ್ಯಗಳ ನಡುವೆ ಶಕ್ತಿ ಗಣಪತಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭವಾಯಿತು.  ಸುತ್ತಮುತ್ತಲ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕತ್ತರಿಗುಪ್ಪೆ ನೀರಿನ ಟ್ಯಾಂಕ್ ಹಾದು ಪುನಃ ದೇವಾಲಯದ ಆವರಣದಲ್ಲಿ ಸಮಾಗಮಗೊಂಡಿತು. ಭ್ರಷ್ಟಾಚಾರ ವಿರುದ್ಧ ಹಾಗೂ ಜನಲೋಕಪಾಲ ಪರವಾಗಿ ಘೋಷಣೆಗಳು ಮೊಳಗಿದವು.ಇದೇ ವೇಳೆ ಸರ್ಕಾರ ಸಂಸತ್ತಿನಲ್ಲಿ ನಾಗರಿಕ ಸಮಿತಿಯ ಪ್ರಮುಖ ಮೂರು ಷರತ್ತುಗಳ ಬಗ್ಗೆ ಗೊತ್ತುವಳಿ ಅಂಗೀಕರಿಸಲು ಒಪ್ಪಿದ್ದರಿಂದ ಮೆರವಣಿಗೆ ಒಂದು ರೀತಿ ಹೋರಾಟದ ವಿಜಯೋತ್ಸವವಾಗಿಯೂ ಪರಿವರ್ತಿತವಾಯಿತು.ಬಿಎಸ್‌ಕೆ 3ನೇ ಹಂತ 2ನೇ ಘಟ್ಟದ ಕ್ಷೇಮಾಭಿವೃದ್ಧಿ ಸಂಘ, ಶಕ್ತಿ ಗಣಪತಿ ದೇವಸ್ಥಾನ ಟ್ರಸ್ಟ್, ಪುಷ್ಪಾಂಜಲಿ ನಗೆಕೂಟ, ಮಹಿಳಾ ಅಭ್ಯುದಯ ಸಂಘ, ಅಭಯ ಒಕ್ಕೂಟ ಸಂಘ, ಬನಶಂಕರಿ ಯುವಕ ಸಂಘ ಮತ್ತು ಯೋಗಶ್ರೀ ಸಂಘಟನೆಗಳ ಸಹಯೋಗದಲ್ಲಿ ರ‌್ಯಾಲಿ ನಡೆಯಿತು. 1500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.ಎಫ್‌ಕೆಸಿಸಿಐ ಕೃತಜ್ಞತೆ

ಬೆಂಗಳೂರು:
ಜನಲೋಕಪಾಲ ಮಸೂದೆ ಮಂಡನೆಗೆ ಸಂಸತ್ತಿನ ಉಭಯ ಸದನಗಳ ತಾತ್ವಿಕ ಒಪ್ಪಿಗೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ  ಹಜಾರೆ ಅವರ ಹೋರಾಟದ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಜೆ.ಆರ್.ಬಂಗೇರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.`ಹಜಾರೆ ಅವರ ಹೋರಾಟಕ್ಕೆ ಬೆಂಬಲ ನೀಡಿದ ಸಾರ್ವಜನಿಕರಿಗೂ ಧನ್ಯವಾದ ಸಲ್ಲಿಸುತ್ತೇನೆ. ಹಜಾರೆ ಹಾಗೂ ಬೆಂಬಲಿಗರು ಮುಂದೆಯೂ ಇಂತಹ ಜನಪರ ಹೋರಾಟಗಳನ್ನು ನಡೆಸಲಿ. ಅಂತಹ ಹೋರಾಟಗಳನ್ನು ಎಫ್‌ಕೆಸಿಸಿಐ ಸಂಪೂರ್ಣ ಬೆಂಬಲಿಸಲಿದೆ~ ಎಂದು ಅವರು ತಿಳಿಸಿದ್ದಾರೆ.ಅಣ್ಣಾಗೆ ಹೆಗ್ಡೆ ಗೌರವ

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, `ನಾನಿನ್ನೂ ಅಣ್ಣಾ ಟೀಮ್‌ನಲ್ಲೇ ಇದ್ದೇನೆ, ಹಜಾರೆ ಅವರ ಪ್ರತಿ ನಡೆಯನ್ನು ನಾನು ಗೌರವಿಸುತ್ತೇನೆ~ ಎಂದರು.`ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ಹಜಾರೆ ಅವರ ಆರೋಗ್ಯ ಹದಗೆಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಆರೋಗ್ಯದ ದೃಷ್ಟಿಯಿಂದ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದ್ದೇನೆ ಅಷ್ಟೇ. ಹಜಾರೆ ಗುಂಪಿನ ಸದಸ್ಯರಲ್ಲಿ ವಿಭಿನ್ನ  ಚರ್ಚೆ ನಡೆಯುವುದು ಸಹಜ. ಆದರೆ  ತಂಡದ ಸದಸ್ಯರ ನಿಲುವು ಒಂದೇ ಆಗಿದೆ~ ಎಂದು ತಿಳಿಸಿದರು.`ಭ್ರಷ್ಟರಿಗೆ ಚುನಾವಣೆಗಳಲ್ಲಿ  ಮತ ಹಾಕಬಾರದು.  ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳೇ  ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಬೇಕು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry