ಅಣ್ಣಾ ತಂಡದಲ್ಲಿ ಮತ್ತಷ್ಟು ಬಿರುಕು

7

ಅಣ್ಣಾ ತಂಡದಲ್ಲಿ ಮತ್ತಷ್ಟು ಬಿರುಕು

Published:
Updated:
ಅಣ್ಣಾ ತಂಡದಲ್ಲಿ ಮತ್ತಷ್ಟು ಬಿರುಕು

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ತಂಡವು ನಡೆಸುತ್ತಿರುವ ಆಂದೋಲನವು `ರಾಜಕೀಯ ತಿರುವು~ ಪಡೆದುಕೊಳ್ಳುತ್ತಿದೆ ಎಂದು ಮುನಿಸಿಕೊಂಡಿರುವ ಅಣ್ಣಾ ತಂಡದ ಕೇಂದ್ರ ಸಮಿತಿಯ ಪ್ರಮುಖ ಸದಸ್ಯರಾದ ಪಿ.ವಿ. ರಾಜಗೋಪಾಲ್ ಮತ್ತು ರಾಜೇಂದ್ರ ಸಿಂಗ್ ತಂಡದಿಂದ ಮಂಗಳವಾರ ಹೊರಬಂದಿದ್ದಾರೆ.

ಹರಿಯಾಣದ ಹಿಸ್ಸಾರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸುವ ನಿರ್ಧಾರವು ಕೇಂದ್ರ ಸಮಿತಿಯಲ್ಲಿ ಕೈಗೊಂಡ ತೀರ್ಮಾನವಲ್ಲ ಎಂದು ಅವರಿಬ್ಬರು ಹೇಳಿದ್ದಾರೆ.

`ಅಣ್ಣಾ ತಂಡದಿಂದ ದೂರವಾಗಲು ಹಿಸ್ಸಾರ್ ಉಪಚುನಾವಣೆಯಲ್ಲಿ ತಂಡ ನಡೆದುಕೊಂಡ ರೀತಿಯೂ ಒಂದು ಕಾರಣ~ ಎಂದಿರುವ ರಾಜಗೋಪಾಲ್, `ತಂಡದಿಂದ ಹೊರಹೋಗುವ ನಿರ್ಧಾರ ಕೈಗೊಳ್ಳಬೇಡಿ ಎಂಬ ಒತ್ತಡವನ್ನೂ ಹಾಕಲಾಗಿತ್ತು~ ಎಂದಿದ್ದಾರೆ.

ಭೂಮಿ ಹಕ್ಕು ಕುರಿತು ಅಣ್ಣಾ ತಂಡವು ಅಖಿಲ ಭಾರತ ಮಟ್ಟದಲ್ಲಿ ಕೈಗೊಂಡಿರುವ ಯಾತ್ರೆಯಲ್ಲಿ ಸಕ್ರಿಯವಾಗಿರುವ ರಾಜಗೋಪಾಲ್, ಸದ್ಯ ಕೇರಳದ ಅಟ್ಟಪ್ಪಾಡಿಯಲ್ಲಿದ್ದಾರೆ. ಅಲ್ಲಿಂದಲೇ ತಂಡದ ಕೇಂದ್ರ ಸಮಿತಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ತಾವು ಕೈಗೊಂಡಿರುವ ನಿರ್ಧಾರದ ಕುರಿತು ಪತ್ರ ಬರೆದಿದ್ದಾರೆ.

`ಅಣ್ಣಾ ತಂಡದಲ್ಲಿ ಹೊಂದಾಣಿಕೆಯ ಸಮಸ್ಯೆ ಇತ್ತು. ಎಲ್ಲರೂ ಮಾತನಾಡುತ್ತಿದ್ದರು. ನಂತರ ತಂಡದ ನಿರ್ಣಯ ಎನ್ನುತ್ತಿದ್ದರು. ಹಿಸ್ಸಾರ್ ಉಪಚುನಾವಣೆ ವಿಷಯದಲ್ಲೂ ಇದೇ ಆಗಿದ್ದು. ಹಿಸ್ಸಾರ್ ಉಪಚುನಾವಣೆ ಕುರಿತು ನಿರ್ಣಯ ತಂಡದ ಕೇಂದ್ರ ಸಮಿತಿಯಲ್ಲಿ ತೆಗೆದುಕೊಂಡಿದ್ದಲ್ಲ~ ಎಂದು ರಾಜಗೋಪಾಲ್ ಅಟ್ಟಪ್ಪಾಡಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

`ಅಣ್ಣಾ ತಂಡದ ಕಾರ್ಯಚಟುವಟಿಕೆಗಳು `ರಾಜಕೀಯ ತಿರುವು~ ಪಡೆದುಕೊಳ್ಳುತ್ತಿವೆ.

ಹಿಸ್ಸಾರ್ ಉಪಚುನಾವಣೆ ಕುರಿತ ಹೇಳಿಕೆಯೂ ಸೇರಿದಂತೆ ತಂಡದ ವತಿಯಿಂದ ಇತ್ತೀಚೆಗೆ ನೀಡಲಾಗುತ್ತಿರುವ ಹೇಳಿಕೆಗಳು ಇದನ್ನು ಸೂಚಿಸುತ್ತವೆ. ಆದ್ದರಿಂದ ನಾನು ಈ ತಂಡದಿಂದ ದೂರವಾಗಲು ಬಯಸಿದ್ದೇನೆ~ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

`ತಂಡ ತ್ಯಜಿಸುವ ಕುರಿತು ಯಾರಿಗೂ ಪತ್ರ ಬರೆದಿಲ್ಲ. ಅಂತಹ ಅಗತ್ಯವಿದೆ ಎಂದು ನನಗೆ ಅನ್ನಿಸಲಿಲ್ಲ. ನಾನೇನು ಮೊದಲ ಹಂತದಲ್ಲೇ  ತಂಡದಲ್ಲಿ ಸದಸ್ಯತ್ವ ಪಡೆದವನಲ್ಲ~ ಎಂದು ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಹೋರಾಟಗಾರ ಸಿಂಗ್ ತಿಳಿಸಿದ್ದಾರೆ.

ಅಣ್ಣಾ ತಂಡದ ಪ್ರಮುಖ ಸದಸ್ಯರಾದ ಪ್ರಶಾಂತ್ ಭೂಷಣ್ ಅವರನ್ನು ತಂಡದಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೇಂದ್ರ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ನಿಲುವು ಪ್ರಕಟಿಸಿದಾಗಲೇ ಅಣ್ಣಾ ತಂಡದಲ್ಲಿ ಬಿರುಕು ಮೂಡಿದ್ದು ಸ್ಪಷ್ಟವಾಗಿತ್ತು.

ಕಾಶ್ಮೀರದಲ್ಲಿ ಜನಮತ ಸಂಗ್ರಹ ನಡೆಯಬೇಕೆಂಬ ವಾದವನ್ನು ಬೆಂಬಲಿಸಿ ಮತ್ತು ಇದೇ ಕಾರಣಕ್ಕೆ ಹಲ್ಲೆಗೊಳಗಾದ ಪ್ರಶಾಂತ್ ಭೂಷಣ್ ವಿವಾದಕ್ಕೆ ಒಳಗಾಗಿದ್ದರು.

ಯುಪಿಎ ಸರ್ಕಾರ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪ್ರಬಲ ಲೋಕಪಾಲ ಮಸೂದೆಯನ್ನು ಮಂಡಿಸದಿದ್ದರೆ ಕಾಂಗ್ರೆಸ್ ವಿರುದ್ಧ ದೇಶವ್ಯಾಪಿ ಆಂದೋಲನ ನಡೆಸುವುದಾಗಿ ಅಣ್ಣಾ ಹಜಾರೆ ಹೇಳಿದ್ದರು.

ಇದರಿಂದಾಗಿ ಅಣ್ಣಾ ಹಜಾರೆ ತಂಡದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು  ವ್ಯಕ್ತವಾಗತೊಡಗಿವೆ.

ಪ್ರಶಾಂತ್ ಭೂಷಣ್ ವಿರುದ್ಧ ಹಜಾರೆ ಕಠಿಣ ಧೋರಣೆ

ಕಾಶ್ಮೀರ ಕಣಿವೆಯಲ್ಲಿ ಜನಮತ ಸಂಗ್ರಹಿಸುವ ಧೋರಣೆಗೆ ಬೆಂಬಲ ಸೂಚಿಸಿ ವಿವಾದಕ್ಕೆ ಸಿಲುಕಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕಠಿಣರಾಗುತ್ತಿರುವ ಅಣ್ಣಾ ಹಜಾರೆ, `ಕೆಲವರು ಕಾಶ್ಮೀರ ವಿಚಾರದಲ್ಲಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ~ ಎಂದು ಪರೋಕ್ಷವಾಗಿ ಪ್ರಶಾಂತ್ ಅವರನ್ನು ಟೀಕಿಸಿದ್ದಾರೆ.

`ಕಾಶ್ಮೀರಕ್ಕಾಗಿ ಏನು ಮಾಡಲಾಗದಿದ್ದರೂ ಈ ವಿಚಾರವಾಗಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಈಗೇನಾದರೂ ಪಾಕ್ ವಿರುದ್ಧ ಯುದ್ಧ ನಡೆದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ಧ~ ಎಂದು ಮೌನ ವ್ರತ ಮುಂದುವರಿಸಿರುವ ಅಣ್ಣಾ ಹಜಾರೆ ಅಂತರ್ಜಾಲದ ಬ್ಲಾಗ್‌ನಲ್ಲಿ ಮಂಗಳವಾರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry