ಬುಧವಾರ, ಜೂನ್ 23, 2021
29 °C

ಅಣ್ಣಾ ತಂಡ ನಕ್ಸಲರಂತೆ ನಡೆದುಕೊಳ್ಳುತ್ತಿದೆ: ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನಾಗಪುರ (ಪಿಟಿಐ): ಭ್ರಷ್ಟಾಚಾರ ನಿವಾರಣೆಯ ಬಗ್ಗೆ ತೀವ್ರ ಆಸಕ್ತಿ ತೋರದೇ, ಸಮಸ್ಯೆಯನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗುತ್ತಿರುವ ಅಣ್ಣಾ ತಂಡ ನಕ್ಸಲರಂತೆ ನಡೆದುಕೊಳ್ಳುತ್ತಿದೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ದೂರಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಣ್ಣಾ ಹಜಾರೆ ಭ್ರಷ್ಟಾಚಾರ ನಿವಾರಣೆಗಾಗಿ ಭ್ರಷ್ಟಾಚಾರ ವಿರೋಧಿ ಚಳವಳಿ ಹರಡಲು ಪ್ರಯತ್ನಿಸುತ್ತಿದ್ದರೆ, ಅಣ್ಣಾ ತಂಡದವರು ನಕ್ಸಲರಂತೆ ನಡೆದುಕೊಳ್ಳುತ್ತಿದ್ದಾರೆ.

~ಸದ್ಯದ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿರುವ ಅಣ್ಣಾ ತಂಡದವರು, ಸಮಸ್ಯೆಯ ಪರಿಹಾರಕ್ಕಿಂತ ಅದನ್ನು  ಮತ್ತಷ್ಟು ಮುಂದುವರಿಸುವುದರಲ್ಲಿ ಆಸಕ್ತಿ ತಳೆದಂತಿದೆ~ ಎಂದು ಅವರು ದೂರಿದ್ದಾರೆ.

ಅಣ್ಣಾ ತಂಡದ ಕಿರಣ್ ಬೇಡಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ, ~ಉಳಿದವರಿಗೆ ತಿಳಿವಳಿಕೆ ನೀಡಲು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರೇ ಬೇಕಿಲ್ಲ~ ಎಂದು ವ್ಯಂಗ್ಯವಾಡಿದ ಅವರು, ~ತರಂಗಾಂತರ ಹಗರಣದಲ್ಲಿ ಗೃಹ ಸಚಿವ ಪಿ ಚಿದಂಬರಂ ಅವರು ಶಾಮೀಲಾಗಿದ್ದಾರೆ ಎಂಬ ತಮ್ಮ ಆರೋಪದ ಅರ್ಜಿ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಶೇಕಡಾ 50 ರಷ್ಟು ಪ್ರಮಾಣದಲ್ಲಿ ತಮ್ಮ ಪರವಾದ ನಿಲುವು ತಳೆದಿದ್ದರೂ ಅದನ್ನು ತಳ್ಳಿಹಾಕಿತು~ ಎಂದರು.

ಭ್ರಷ್ಟಾಚಾರ ನಿಗ್ರಹ ಕಾನೂನು ಅರ್ಥೈಸುವಲ್ಲಿ ಕೆಳ ನ್ಯಾಯಾಲಯ ವಿಫಲಗೊಂಡಿದೆ, ಹೀಗಾಗಿ ತಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ ಸ್ವಾಮಿ ಅವರು, ಅಲ್ಲಿ ತಮಗೆ ನ್ಯಾಯ ದೊರೆಯುವ ಭರವಸೆ ಇದೆ, ಈ ಮೊದಲೂ ತಮಗೆ ಇಂಥ ಅನುಭವವಾಗಿದೆ ಎಂದರು.

ಈ ಸಾಲಿನ ರಾಷ್ಟ್ರಪತಿಗಳ ಚುನಾವಣೆಯ ನಂತರ ಯುಪಿಎ ಸರ್ಕಾರ ಕೆಳಗುರಳಲಿದ್ದು ಮಧ್ಯಂತರ ಚುನಾವಣೆ ಅನಿವಾರ್ಯವಾಗಲಿದೆ ಎಂದೂ ಭವಿಷ್ಯ ಅವರು ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತೃತೀಯ ರಂಗದ ರಚನೆಯ ಸಾಧ್ಯತೆಯನ್ನು ಅಲ್ಲಗಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.