ಅಣ್ಣಾ ದನಿಗೆ ಬಲ

7

ಅಣ್ಣಾ ದನಿಗೆ ಬಲ

Published:
Updated:
ಅಣ್ಣಾ ದನಿಗೆ ಬಲ

ನವದೆಹಲಿ (ಪಿಟಿಐ): ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಮೊಳಗಿಸಿರುವ ಜನಜಾಗೃತಿಯ ಕಹಳೆ ದೇಶದಾದ್ಯಂತ ಅನುರಣಿಸಲಾರಂಭಿಸಿದೆ. ಅವರ ಅನುಯಾಯಿಗಳು ವಿವಿಧ ಭಾಗಗಳಲ್ಲಿ ತಮ್ಮ ನಾಯಕನ ಬೆಂಬಲಾರ್ಥ ಸರದಿ ಉಪವಾಸ, ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸುವ ಮೂಲಕ, ಅನಿಷ್ಟ ಪಿಡುಗಿನ ‘ಆಕ್ಟೋಪಸ್ ಹಿಡಿತ’ದಿಂದ ದೇಶವನ್ನು ಹೊರತರುವ ಪ್ರಯತ್ನಕ್ಕೆ ಬಲ ತುಂಬತೊಡಗಿದ್ದಾರೆ.

ನಿರಶನ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನ ವಿಫಲಗೊಂಡಿದ್ದು, ಸತ್ಯಾಗ್ರಹ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದರ ಲಾಭ ಪಡೆಯಲು ಯತ್ನಿಸಿ ಹಜಾರೆ ಅವರನ್ನು ಕಾಣಲು ಜಂತರ್ ಮಂತರ್‌ಗೆ ಬಂದ ರಾಜಕಾರಣಿಗಳು ಬೆಂಬಲಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್, ಐಎನ್‌ಎಲ್‌ಡಿ ಅಧ್ಯಕ್ಷ ಓಂ ಪ್ರಕಾಶ್ ಚೌಟಾಲ ಮತ್ತು ಹಿಂದುತ್ವ ನಾಯಕಿ ಉಮಾ ಭಾರತಿ ಅವರನ್ನು ದೂರದಲ್ಲೇ ತಡೆದ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದರು. ಆಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅವರೆಲ್ಲ ಕೂಡಲೇ ಹಿಂದಿರುಗಬೇಕಾಯಿತು. ಆದರೆ ಬೆಂಬಲಿಗರ ಈ ನಡವಳಿಕೆಯಿಂದ ‘ಗಾಂಧಿವಾದಿ’ ಇರುಸುಮುರುಸುಗೊಂಡರು. ನಿರಶನವನ್ನು ಎರಡನೇ ಸತ್ಯಾಗ್ರಹ ಎಂದು ಕರೆದುಕೊಂಡ ಹಜಾರೆ, ಗಾಂಧಿ ಮಾರ್ಗದಲ್ಲಿ ಎಲ್ಲ ಸ್ತರದ ಜನರ ಅಭಿಪ್ರಾಯಗಳನ್ನೂ ಆಲಿಸಬೇಕಾಗುತ್ತದೆ.  ರಾಜಕಾರಣಿಗಳನ್ನು ತಡೆದದ್ದು ಸರಿಯಲ್ಲ ಎಂದು ತಾಕೀತು ಮಾಡಿದರು.

ಪ್ರಧಾನಿಗೆ ಪತ್ರ: ನಿರಶನ ಅಕಾಲಿಕ, ಅನಗತ್ಯವೆಂದು ಟೀಕಿಸಿರುವ  ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹಜಾರೆ, ಪ್ರಧಾನಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಭ್ರಷ್ಟಾಚಾರವನ್ನು ನೋಡುತ್ತಾ ಪ್ರಧಾನಿ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಸಮ್ಮಿಶ್ರ ರಾಜಕೀಯದ ಒತ್ತಡಕ್ಕೆ ಮಣಿಯದೆ ಅಭೂತಪೂರ್ವ ಕ್ರಮಗಳನ್ನು ಕೈಗೊಳ್ಳುವ ಸ್ಥೈರ್ಯ ತೋರಬೇಕು ಎಂದು ಆಹ್ವಾನಿಸಿದ್ದಾರೆ.

ಯಾರ ಪ್ರಚೋದನೆಯಿಂದಲೂ ನಾನು ನಿರಶನಕ್ಕೆ ಮುಂದಾಗಿಲ್ಲ. ಸ್ನೇಹಿತರು, ಆಪ್ತರಿಂದ ಸಲಹೆಗಳನ್ನು ಸ್ವೀಕರಿಸುತ್ತೇನಾದರೂ ನನಗೆ ಸರಿ ಅನಿಸಿದ್ದನ್ನಷ್ಟೇ ನಾನು ಮಾಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷ ದುರುದ್ದೇಶಪೂರಿತ ಹೇಳಿಕೆ ನೀಡುವ ಮೂಲಕ ನನ್ನನ್ನು ಅವಮಾನಿಸಿದೆ ಎಂದು ದೂರಿದ್ದಾರೆ.

ಲೋಕ್‌ಪಾಲ್ ಮಸೂದೆಗೆ ಸಂಬಂಧಿಸಿದಂತೆ ತಾವು ಸಿದ್ಧಪಡಿಸಿರುವ ಕರಡನ್ನೇ ಒಪ್ಪಿಕೊಳ್ಳಬೇಕೆಂದು ಕಾರ್ಯಕರ್ತರು ಪಟ್ಟುಹಿಡಿದಿಲ್ಲ. ಕರಡಿಗೆ ಸಂಬಂಧಿಸಿದ ಜಂಟಿ ಸಮಿತಿಯಲ್ಲಿ ಅರ್ಧದಷ್ಟು ನಾಗರಿಕರನ್ನು ಒಳಗೊಳ್ಳುವ ಮೂಲಕ ವಿಶ್ವಾಸಾರ್ಹ ವೇದಿಕೆ ಸೃಷ್ಟಿಯಾಗಬೇಕು ಎಂಬುದಷ್ಟೇ ನಮ್ಮ ಹಂಬಲ ಎಂದಿದ್ದಾರೆ.

ಅಧಿಕಾರ ಇಲ್ಲದ ಯಾವುದೇ ಸಮಿತಿ ನಿಷ್ಪ್ರಯೋಜಕ. ಹೀಗಾಗಿ ಸೋನಿಯಾ ಗಾಂಧಿ ಅವರನ್ನು ಒಳಗೊಂಡ ಜಂಟಿ ಸಮಿತಿಗೆ ಮಾತ್ರ ನಮ್ಮ ಸಹಮತ ಇದೆ. ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ನನ್ನನ್ನು ಕೋರಿದ್ದಾರೆ. ಆದರೆ ಈ ಸಭೆಗೆ ಸೋನಿಯಾ ಅವರು ಬಾರದ ಹೊರತು ನಾವು ಪಾಲ್ಗೊಳ್ಳುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲೇ ಮಸೂದೆಯನ್ನು ಜಾರಿಗೆ ತಂದರೆ ಅದು ಹಲ್ಲಿಲ್ಲದಂತಾಗುತ್ತದೆ. ಮಸೂದೆಯ ಕರಡು ರಚನೆಯಲ್ಲಿ ನಾಗರಿಕರನ್ನು ಒಳಗೊಳ್ಳಲು ಸರ್ಕಾರ ಒಪ್ಪುವವರೆಗೂ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಿಲ್ಲ ಎಂದಿರುವ ಅವರು, ಸಿಂಗ್  ಭ್ರಷ್ಟಾಚಾರದಿಂದ ಕಳಂಕಿತರಾಗಿಲ್ಲ. ಆದರೆ ರಿಮೋಟ್ ಕಂಟ್ರೋಲ್ ಕೆಲಸ ಮಾಡಲಾರಂಭಿಸಿದಾಗಷ್ಟೇ ಸಮಸ್ಯೆ ಉದ್ಭವವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ವ್ಯಾಪಕ ಬೆಂಬಲ: ಬಾಲಿವುಡ್ ಸಹ ಹಜಾರೆ ಅವರ ಬೆಂಬಲಕ್ಕೆ ನಿಂತಿದ್ದು, ಅಮೀರ್ ಖಾನ್, ರಾಹುಲ್ ಬೋಸ್, ದಿಯಾ ಮಿರ್ಜ, ಜೂಹಿ ಚಾವ್ಲ, ಮಧುರ್ ಭಂಡಾರ್ಕರ್ ಮುಂತಾದವರು ಅವರ ಪರವಾಗಿ ಹೇಳಿಕೆಗಳನ್ನು ನೀಡಿದ್ದಾರೆ.

ಮುಂಬೈನಲ್ಲಿ ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಸಂಘಟನೆಯ ಸದಸ್ಯರು ಹಾಗೂ ಹಜಾರೆ ಅವರ ಹುಟ್ಟೂರಾದ ಅಹಮದ್ ನಗರ ಜಿಲ್ಲೆಯ ರಾಲೆಗಾನ್ ಸಿದ್ಧಿ ಗ್ರಾಮದಲ್ಲಿ ಅವರ ಬೆಂಬಲಿಗರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. 70ರ ದಶಕದಲ್ಲಿ ನಡೆದ ಜೆಪಿ ಚಳವಳಿಯಲ್ಲಿ ಪಾಲ್ಗೊಂಡಿದ್ದವರು ರಾಂಚಿಯಲ್ಲಿ ಗುರುವಾರದಿಂದ ಸರದಿ ನಿರಶನ ಆರಂಭಿಸಲಿದ್ದಾರೆ. ಮುಂಬೈ ಸತ್ಯಾಗ್ರಹಿಗಳೊಂದಿಗೆ ಆರ್ಟ್ ಆಫ್ ಲಿವಿಂಗ್, ಮೇಧಾ ಪಾಟ್ಕರ್ ಅವರ ಘರ್ ಬಚಾವೊ ಘರ್ ಬನಾವೊ ಆಂದೋಲನ್‌ನಂತಹ ಸರ್ಕಾರೇತರ ಸಂಘಟನೆಗಳೂ ಕೈಜೋಡಿಸಿವೆ. ಒಡಿಶಾದಲ್ಲಿ ಸಭೆ ಸೇರಿದ ವಿವಿಧ ಕ್ಷೇತ್ರಗಳ ಗಣ್ಯರು, ಹಜಾರೆ ಅವರ ಸತ್ಯಾಗ್ರಹ ಪೂರ್ಣಗೊಳ್ಳುವವರೆಗೂ ಗುರುವಾರದಿಂದ ವಿಧಾನಸಭೆಯ ಎದುರು ಸರದಿ ಸಾಂಕೇತಿಕ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.

ಸರ್ಕಾರ ಮುಕ್ತ: ಈ ನಡುವೆ, ಲೋಕ್‌ಪಾಲ್ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಉತ್ಸುಕವಾಗಿರುವುದರ ನಡುವೆಯೂ ಹಜಾರೆ ಅವರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ ಎಂದು ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮಸೂದೆಯ ಕರಡು ಈಗಾಗಲೇ ಸಿದ್ಧಗೊಂಡಿದೆಯಾದರೂ ಸಂಸದೀಯ ಸ್ಥಾಯಿ ಸಮಿತಿಗೆ ಹೋಗುವವರೆಗೂ ಅದು ಅಂತಿಮವಾಗುವುದಿಲ್ಲ. ಸ್ಥಾಯಿ ಸಮಿತಿಯು ಎಲ್ಲರೊಂದಿಗೂ ಚರ್ಚಿಸುತ್ತದೆ. ಯಾವ ಮಸೂದೆಯನ್ನೂ ಕದ್ದುಮುಚ್ಚಿ ಮಂಡಿಸುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಡುಗಡೆ ಮಾಡಿ: ಅಣ್ಣಾ ಹಜಾರೆ ಅವರಿಂದ ಟೀಕೆಗೆ ಒಳಗಾಗಿರುವ ಕೃಷಿ ಸಚಿವ ಶರದ್ ಪವಾರ್, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಚಿವರ ತಂಡದಿಂದ ತಮ್ಮನ್ನು ಬಿಡುಗಡೆ ಮಾಡಿದರೆ ತಮಗೆ ಸಂತಸವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಭೂ ಹಗರಣದಲ್ಲಿ ಸಿಲುಕಿರುವ ಪವಾರ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕೆ ಹಜಾರೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry