ಅಣ್ಣಾ ಬೆಂಬಲಕ್ಕೆ ಬಂದ ಮಾಜಿ ಪ್ರಧಾನಿ ಗುಜ್ರಾಲ್

7

ಅಣ್ಣಾ ಬೆಂಬಲಕ್ಕೆ ಬಂದ ಮಾಜಿ ಪ್ರಧಾನಿ ಗುಜ್ರಾಲ್

Published:
Updated:
ಅಣ್ಣಾ ಬೆಂಬಲಕ್ಕೆ ಬಂದ ಮಾಜಿ ಪ್ರಧಾನಿ ಗುಜ್ರಾಲ್

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಮಂಗಳವಾರ ಅಣ್ಣಾ ಹಜಾರೆ ಅವರ ಬೆಂಬಲಕ್ಕೆ ಬಂದಿದ್ದು, ಭ್ರಷ್ಟಾಚಾರದ ವಿರುದ್ಧ ಗಾಂಧಿವಾದಿ ನಡೆಸುತ್ತಿರುವ ಚಳವಳಿಯು ಅವರು ಸಮಾಜದಲ್ಲಿ ಬದಲಾವಣೆಯ ಹರಿಕಾರನಾಗಬಹುದು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿದೆ ಎಂದು ಹೇಳಿದ್ದಾರೆ.ಹಜಾರೆ ಅವರಿಗೆ ಪತ್ರವೊಂದನ್ನು ಬರೆದಿರುವ ಮಾಜಿ ಪ್ರಧಾನಿ, ಭ್ರಷ್ಟಾಚಾರ ವಿರುದ್ಧದ ಏಕೈಕ ಹೋರಾಟದ ಮೂಲಕ ಇಡೀ ರಾಷ್ಟ್ರವನ್ನೇ ಒಗ್ಗೂಡಿಸಿರುವ ಅಣ್ಣಾ ಯತ್ನಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಭ್ರಷ್ಟಾಚಾರ ಕ್ಯಾನ್ಸರ್ ರೋಗದಂತೆ ಸಮಾಜದ ಪ್ರತಿಯೊಂದು ಅಂಗಕ್ಕೂ ವ್ಯಾಪಿಸಿದೆ ಎಂದು ಅವರು ಹೇಳಿದ್ದಾರೆ.~ನಿಮ್ಮ ಕರೆ ಇಡೀ ರಾಷ್ಟ್ರದಲ್ಲಿ ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಕಾಲದಲ್ಲಿ ಮೂಡಿದ್ದಂತಹ ಸಂಚಲನವನ್ನು ಸೃಷ್ಟಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು, ವೃದ್ಧರು, ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಎಲ್ಲರೂ ಸ್ವಾರ್ಥರಹಿತರಾಗಿ ಚಳವಳಿಯ ಯಶಸ್ಸಿಗೆ ದುಡಿದಿದ್ದರು. ಆ ಹೋರಾಟವೇ ನಮ್ಮ ಭವಿಷ್ಯವನ್ನು ರೂಪಿಸಿತ್ತು~ ಎಂದು ಗುಜ್ರಾಲ್ ಹೇಳಿದ್ದಾರೆ.ಭ್ರಷ್ಟರಾಷ್ಟ್ರ ಯಾವುದೇ ಕಾಲದಲ್ಲೂ ಮಹಾನ್ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ. ಇದು ನಿರ್ಣಾಯಕ ಕಾಲಘಟ್ಟ. ನಮ್ಮ ಸಂಸತ್ತು ಈಗ ಸ್ಪಂದಿಸದಿದ್ದರೆ, ಸ್ವರ್ಣಾವಕಾಶವನ್ನು ಕಳೆದುಕೊಂಡದ್ದಕ್ಕಾಗಿ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಇಂತಹುದೇ ಮನವಿಯನ್ನು ನಾನು 14 ವರ್ಷಗಳ ಹಿಂದೆ ಕೆಂಪುಕೋಟೆಯ ಮೇಲೆ ನಿಂತು ಮಾಡಿದ ಭಾಷಣದಲ್ಲಿ ಮಾಡಿದ್ದೆ ಎಂದು ನೆನಪಿಸಿರುವ ಗುಜ್ರಾಲ್ ~ಒಬ್ಬ ಪ್ರಧಾನಿ ಮಾಡಲಾಗದೇ ಇದ್ದ ಕಾರ್ಯವನ್ನು ಒಬ್ಬ ಸಾಮಾನ್ಯ ಗಾಂಧಿವಾದಿ ಮಾಡಲು ಸಾಧ್ಯವಾದದ್ದು ಈ ದೇಶದ ಮಹಾನತೆಯ ಸಂಕೇತ~ ಎಂದೂ ಗುಜ್ರಾಲ್ ಬಣ್ಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry