ಅಣ್ಣಾ ಬೆಂಬಲಿಸಿ ಬೃಹತ್ ರ್ಯಾಲಿ

7

ಅಣ್ಣಾ ಬೆಂಬಲಿಸಿ ಬೃಹತ್ ರ್ಯಾಲಿ

Published:
Updated:
ಅಣ್ಣಾ ಬೆಂಬಲಿಸಿ ಬೃಹತ್ ರ್ಯಾಲಿ

ರಾಯಚೂರು: ಜನ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಹೋರಾಟ ಬೆಂಬಲಿಸಿ ನಗರದಲ್ಲಿ ಹಲವಾರು ಸಂಘಟನೆಗಳು ಶುಕ್ರವಾರ ಸಭೆ, ಸಮಾವೇಶ, ಬೃಹತ್ ರ್ಯಾಲಿ ನಡೆಸುವ ಮೂಲಕ ಭಾರಿ ಬೆಂಬಲ ವ್ಯಕ್ತಪಡಿಸಿದವು.ಭ್ರಷ್ಟಾಚಾರದ ವಿರುದ್ಧ ಹರಿಹಾಯುತ್ತಿದ್ದ ಜನಸಮೂಹವು ಬೆಳಿಗ್ಗೆಯಿಂದಲೇ ಸ್ವಯಂ ಪ್ರೇರಣೆಯಿಂದ ನಗರದ ಪ್ರಮುಖ ವೃತ್ತ, ಕ್ರೀಡಾಂಗಣ, ಜಿಲ್ಲಾಧಿಕಾರಿ ಕಚೇರಿ ಆವರಣ ಹೀಗೆ ಹಲವಾರು ಕಡೆ ಗುಂಪು ಗುಂಪಾಗಿ ಸೇರಿದರು. ಘೋಷಣೆ, ಭಾಷಣದ ಮೂಲಕ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಕ್ರೀಡಾಂಗಣದ ಆವರಣದಲ್ಲಿನ ಮಹಾತ್ಮಗಾಂಧೀಜಿ ಪುತ್ಥಳಿ ಹತ್ತಿರ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯು ಏರ್ಪಡಿಸಿದ್ದ ಬೃಹತ್ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ, ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಕುಷ್ಟಗಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಣ್ಣ ಹವಳೆ, ಡಾ.ರವಿರಾಜ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮತ್ತಿತರ ಪ್ರಮುಖರು ಮಾತನಾಡಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಯುವ ಸಮೂಹ, ಮಹಿಳೆಯರು, ಜನಸಮೂಹ, ಸಂಘ ಸಂಸ್ಥೆಗಳು ಅನುಸರಿಸಬೇಕಾದ ಧೋರಣೆಗಳ ಬಗ್ಗೆ ವಿವರಿಸಿದರು. ಹಜಾರೆಯವರ ನಿಸ್ವಾರ್ಥ ಹೋರಾಟ ಬೆಂಬಲಿಸಬೇಕಾದ್ದು ಪ್ರತಿಯೊಬ್ಬ ದೇಶಪ್ರೇಮಿಯ ಕರ್ತವ್ಯ ಎಂದು ತಿಳಿಸಿದರು.ಮಧ್ಯಾಹ್ನ ಮಹಾತ್ಮ ಗಾಂಧೀಜಿ ಪುತ್ಥಳಿಯಿಂದ ಬೃಹತ್ ರ್ಯಾಲಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿತು. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry