ಅಣ್ಣಾ ಮಾರ್ಗ ಅಪಾಯಕಾರಿ: ಸಂಸತ್ತಿನಲ್ಲಿ ಪ್ರಧಾನಿ

7

ಅಣ್ಣಾ ಮಾರ್ಗ ಅಪಾಯಕಾರಿ: ಸಂಸತ್ತಿನಲ್ಲಿ ಪ್ರಧಾನಿ

Published:
Updated:
ಅಣ್ಣಾ ಮಾರ್ಗ ಅಪಾಯಕಾರಿ: ಸಂಸತ್ತಿನಲ್ಲಿ ಪ್ರಧಾನಿ

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಅವರು ತಮಗೆ ಸರಿ ಎನಿಸುವ ಲೋಕಪಾಲ ಮಸೂದೆಯನ್ನು ರಾಷ್ಟ್ರದ ಮೇಲೆ ಹೇರಲು ಹೊರಟಿದ್ದಾರೆ. ಸಂಪೂರ್ಣ ತಪ್ಪು ಕಲ್ಪನೆಗಳಿಂದ ತುಂಬಿರುವ ಅವರ ಮಾರ್ಗವು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ಬುಧವಾರ ಹೇಳಿದರು.ಅಣ್ಣಾ ಹಜಾರೆ ಹೋರಾಟದ ಪರ ರಾಷ್ಟ್ರದೆಲ್ಲೆಡೆ ವ್ಯಕ್ತವಾದ ಬೆಂಬಲ ಹಾಗೂ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ಅಣ್ಣಾ ಬಂಧನಕ್ಕೆ ಕಾರಣವಾದ ಸಂಗತಿಗಳ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿ ಅವರು ಹೀಗೆ ಹೇಳಿದರು.ಶಾಂತಿಯುತ ಪ್ರತಿಭಟನೆ ನಡೆಸಲು ನಾಗರಿಕರಿಗೆ ಇರುವ ಹಕ್ಕನ್ನು ಸರ್ಕಾರ ಗೌರವಿಸುತ್ತದೆ. ಸೂಕ್ತ ಷರತ್ತುಗಳನ್ನು ವಿಧಿಸಿ ಅದಕ್ಕೆ ಅನುಮತಿ ಕೂಡ ನೀಡಲು ಕಾನೂನು ಅವಕಾಶವಿದೆ.ಆದರೆ ಶಾಂತಿಗೆ ಭಂಗವಾಗುತ್ತದೆಂದು ಭಾವಿಸಿ ಅಣ್ಣಾ ಹಾಗೂ ಅವರ ಆರು ಸಹವರ್ತಿಗಳನ್ನು ಮಂಗಳವಾರ ಬಂಧಿಸಲಾಯಿತು ಎಂದು ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.ಹಜಾರೆ ಮತ್ತು ಬಳಗದವರು ಪೊಲೀಸರ ನಿಬಂಧನೆಗಳಿಗೆ ಒಳಪಡಲು ನಿರಾಕರಿಸಿದ್ದರಿಂದ ಪೊಲೀಸರು ಅವರಿಗೆ ಅನುಮತಿ ನೀಡಲಿಲ್ಲ. ಹಜಾರೆ ಮತ್ತು ಸರ್ಕಾರದ ನಡುವಿನ ವ್ಯತ್ಯಾಸ ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದಂತೆ ಭಿನ್ನ ಧೋರಣೆಯದ್ದು ಮಾತ್ರವಲ್ಲ. ನಾಗರಿಕ ಸಮಿತಿ ಚಳವಳಿಗಾರರು, ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಸಂಸತ್ತಿನಲ್ಲಿ ತಮ್ಮ ಕೆಲಸ ಮಾಡಲು ಅವಕಾಶ ನೀಡಬೇಕಾಗಿದೆ ಎಂದರು.ಹಜಾರೆ ತಮ್ಮ ಹೋರಾಟಕ್ಕಾಗಿ ಉನ್ನತ ಆದರ್ಶಗಳಿಂದ ಪ್ರೇರಿತರಾಗಿರಬಹುದು; ಆದರೆ ಅದಕ್ಕಾಗಿ ಅವರು ಹಿಡಿದಿರುವ ಮಾರ್ಗದಲ್ಲಿ ದೋಷವಿದೆ ಎಂದ ಅವರು, ಸರ್ಕಾರದ ಪ್ರಕ್ರಿಯೆಗಳು ಮತ್ತು ಸಂಸತ್ ಕಲಾಪಗಳು ಸುಗಮ ಹಾಗೂ ಪರಿಣಾಮಕಾರಿಯಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.ಮಂಗಳವಾರದ ವಿದ್ಯಮಾನಗಳ ಬಗ್ಗೆ ಹೇಳುವುದಾದರೆ, ಸಕ್ರಿಯ ಪ್ರಜಾಪ್ರಭುತ್ವದಲ್ಲಿ ಭಿನ್ನ ಧ್ವನಿಗಳನ್ನು ವ್ಯಕ್ತಪಡಿಸಲು ಅವಕಾಶ ಇರಬೇಕು; ಆದರೆ ಭಿನಾಭಿಪ್ರಾಯಗಳನ್ನು ಚರ್ಚೆ ಮತ್ತು ಒಮ್ಮತದಿಂದ ಬಗೆಹರಿಸಿಕೊಳ್ಳಬೇಕು. ತಮ್ಮದೇ ಧ್ವನಿ ಮಾತ್ರ ರಾಷ್ಟ್ರದ 120 ಕೋಟಿ ಜನರನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸುವವರು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾಗರಿಕ ಸಮಿತಿ ಮುಂದಾಳು ಹಜಾರೆ ಅವರಿಗೆ ಪರೋಕ್ಷ ಸಲಹೆ ನೀಡಿದರು.`ಶಾಸನಗಳನ್ನು ರಚಿಸುವ ವಿಶೇಷಾಧಿಕಾರವನ್ನು ಸಂಸತ್ತು ಮಾತ್ರ ಹೊಂದಿದೆ. ಸರ್ಕಾರ ಹಿಂದಿನಿಂದ ಅನುಸರಿಸುತ್ತಿರುವ ತತ್ವಗಳಿಗೆ ಅನುಗುಣವಾಗಿಯೇ ನಡೆಯುತ್ತಿದೆ. ಲೋಕಪಾಲ ಮಸೂದೆ ಶೀಘ್ರವೇ ಜಾರಿಯಾಗಬೇಕೆಂಬುದನ್ನು ಎಲ್ಲ ಸಂಸತ್ ಸದಸ್ಯರೂ ಒಪ್ಪುತ್ತಾರೆ. ಆದರೆ ಶಾಸನ ರಚಿಸುವವರು ಯಾರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ನನಗೆ ಗೊತ್ತಿರುವಂತೆ, ಕಾರ್ಯಾಂಗ ಮಸೂದೆ ಸಿದ್ಧಪಡಿಸಿ ಅದನ್ನು ಸಂಸತ್ತಿನ ಮುಂದಿಡುತ್ತದೆ. ಸಂಸತ್ತು ಆ ಕುರಿತು ಚರ್ಚಿಸಿ ಅಗತ್ಯಬಿದ್ದರೆ ತಿದ್ದುಪಡಿಗಳೊಡನೆ ಅದನ್ನು ಜಾರಿಗೊಳಿಸುತ್ತದೆ~ ಎಂದರು.ಶಾಸನ ರಚಿಸಲು ಸಂಸತ್ತು ಹೊಂದಿರುವ ಈ ವಿಶೇಷಾಧಿಕಾರವನ್ನು ಪ್ರಶ್ನಿಸಲು ಸಂವಿಧಾನದ ಯಾವ ಸಿದ್ಧಾಂತ ಅಥವಾ ತತ್ವ ಅವಕಾಶ ಕಲ್ಪಿಸಿದೆ ಎಂಬುದು ತಮಗೆ ಗೊತ್ತಿಲ್ಲ. ಲೋಕಪಾಲ ಮಸೂದೆಯ ಕರಡು ರಚಿಸುವಾಗ ಸರ್ಕಾರ ಹಿಂದಿನಿಂದ ನಡೆದುಬಂದ ತತ್ವಗಳಿಗೆ ನಿಷ್ಠವಾಗಿ ನಡೆದುಕೊಂಡಿದೆ. ಆದರೆ ಹಜಾರೆ ಅವರು ಈ ತತ್ವಗಳನ್ನೇ ಪ್ರಶ್ನಿಸುವ ಜತೆಗೆ ತಮ್ಮ ಮಸೂದೆಯನ್ನು ಸಂಸತ್ತಿನ ಮೇಲೆ ಹೇರಲು ಹೊರಟಿದ್ದಾರೆ ಎಂದು ಅವರು ದೂಷಿಸಿದರು.ಸಮಾಜದ ಯಾವುದೇ ಸಮೂಹದ ಜತೆ ಸಂಘರ್ಷಕ್ಕಿಳಿಯುವ ಇರಾದೆ ಸರ್ಕಾರಕ್ಕೆ ಇಲ್ಲ. ಆದರೆ ಕೆಲವು ಸಮೂಹಗಳು ಉದ್ದೇಶಪೂರ್ವಕವಾಗಿ ಸರ್ಕಾರ ಮತ್ತು ಸಂಸತ್ತಿನ ವಿಶೇಷಾಧಿಕಾರಕ್ಕೆ ಸವಾಲು ಎಸೆದಾಗ, ಶಾಂತಿ-ಸುವ್ಯವಸ್ಥೆ ಸಂರಕ್ಷಿಸುವುದು ಸರ್ಕಾರದ ಬದ್ಧ ಜವಾಬ್ದಾರಿ. ಯಾರಿಗಾದರೂ ಸರ್ಕಾರದ ನೀತಿ ಒಪ್ಪಿಗೆಯಾಗದಿದ್ದರೆ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವರಿಗೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಸಿಂಗ್ ಹೇಳಿದರು.ವಿರೋಧ ಪಕ್ಷಗಳು ಒಕ್ಕರೊಲಿನಿಂದ ಒತ್ತಾಯಿಸಿ ಕೋಲಾಹಲವೆಬ್ಬಿಸಿದ್ದರಿಂದ ಮಣಿದ ಪ್ರಧಾನಿ, ಸಂಸತ್ತಿನ ಎರಡೂ ಸದನಗಳಲ್ಲಿ ಒಂದೇ ರೀತಿಯ ಹೇಳಿಕೆ ನೀಡಿದರು. ಆದರೆ ಅವರು ಪೊಲೀಸರನ್ನು ಸಮರ್ಥಿಸಿಕೊಂಡದ್ದನ್ನು ಪ್ರತಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ಸರ್ಕಾರ ಸೊಕ್ಕಿನಿಂದ ವರ್ತಿಸುವ ಜತೆಗೆ ಬ್ರಿಟಿಷರ ದಮನಕಾರಿ ನೀತಿಯನ್ನೇ ಅನುಸರಿಸುತ್ತಿದೆ ಎಂದು ಖಂಡಿಸಿದರು.ಜಗತ್ತಿನಲ್ಲಿ ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮುನ್ನಡೆಯುವುದು ಕೆಲವು ಶಕ್ತಿಗಳಿಗೆ ಬೇಕಾಗಿಲ್ಲ. ಆಂತರಿಕ ಭಿನ್ನಾಭಿಪ್ರಾಯದಿಂದ ಆರ್ಥಿಕ ಪ್ರಗತಿಗೆ ಹೊಡೆತ ಬೀಳುವಂತಹ ಸನ್ನಿವೇಶವನ್ನು ನಾವು ಸೃಷ್ಟಿಸಬಾರದು. ಜನಸಾಮಾನ್ಯರ ಉನ್ನತಿಗಾಗಿ ಆರ್ಥಿಕ ಪ್ರಗತಿ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ನಾವು ಮುನ್ನಡಿ ಇಡಬೇಕು.ಭ್ರಷ್ಟಾಚಾರದ ಕ್ಯಾನ್ಸರ್‌ನ್ನು ನಿರ್ಮೂಲನೆ ಮಾಡಲು ತಾವು ಬದ್ಧ ಎಂದು ಘೋಷಿಸಿದ ಅವರು, ಪಾರದರ್ಶಕ, ಉತ್ತರದಾಯತ್ವ ಹಾಗೂ ಸ್ಪಂದನಶೀಲ ಆಡಳಿತ ನೀಡುವುದಕ್ಕೆ ಸರ್ಕಾರ ಯಾವತ್ತೂ ಬದ್ಧವಾಗಿರುತ್ತದೆ. ಆದರೆ ಭ್ರಷ್ಟಾಚಾರದ ಪಿಡುಗನ್ನು ಒಂದೇ ಬಾರಿಗೆ ಹೊಡೆದೋಡಿಸುವಂತಹ ಯಾವ ಮಂತ್ರದಂಡವೂ ನಮ್ಮಲ್ಲಿ ಇಲ್ಲ ಎಂದು ನುಡಿದರು.ವಿರೋಧ ಪಕ್ಷಗಳು ಪ್ರಧಾನಿಯವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದವು. ಬ್ರಿಟಿಷ್ ಆಡಳಿತದಲ್ಲಿ ಕೂಡ ಇಲ್ಲದಿದ್ದ ರೀತಿಯಲ್ಲಿ ನಾಗರಿಕರ ಪ್ರತಿಭಟನೆ ಹತ್ತಿಕ್ಕಿದ್ದು ಎಷ್ಟು ಸರಿ ಎಂದು ಅವು ಪ್ರಶ್ನಿಸಿದವು.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮಾತನಾಡಿ, ಪ್ರಧಾನಿಯವರ ಹೇಳಿಕೆ ಹತಾಶೆ ಮೂಡಿಸಿದ್ದು, ವ್ಯವಸ್ಥೆ ಬಗ್ಗೆ ವಿಶ್ವಾಸ ತುಂಬುವಲ್ಲಿ ವಿಫಲವಾಗಿದೆ; ಯುಪಿಎ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಜನರನ್ನು ಉಸಿರುಗಟ್ಟಿಸಿರುವುದರಿಂದ ಜನ ಈಗ ಬೀದಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.ಹಲವಾರು ವಕೀಲರು ಪ್ರಧಾನಿಯವರಿಗೆ ಸಲಹೆ ನೀಡುತ್ತಿರುವುದೇ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ರಾಜಕೀಯ ಸಮಸ್ಯೆಗಳನ್ನು ರಾಜಕೀಯವಾಗಿಯೇ ಬಗೆಹರಿಸಬೇಕೇ ಹೊರತು ಅದನ್ನು ಪೊಲೀಸ್ ಬಲಪ್ರಯೋಗದಿಂದ ಮಾಡಬಾರದು. ದುರದೃಷ್ಟವಶಾತ್ ಸರ್ಕಾರದಲ್ಲಿರುವ ಯಾರಿಗೂ ಇದು ಮನವರಿಕೆಯಾಗಿಲ್ಲ ಎಂದು ಹೇಳಿದರು.ಅಣ್ಣಾ ಬಳಗಕ್ಕೆ ಪ್ರತಿಭಟನಾಕಾರರ ಸಂಖ್ಯೆ ಸೀಮಿತಗೊಳಿಸಿ, ದಿನಗಳ ಸಂಖ್ಯೆ ಮೇಲೆ ಮಿತಿ ಹೇರಿ, ವಾಹನಗಳ ಸಂಖ್ಯೆಗೆ ನಿಬಂಧನೆ ಹೇರಿದ್ದು ಸರಿಯಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿದರೆ 5000ಕ್ಕಿಂತ ಹೆಚ್ಚು ಜನ ಸೇರಿಸುವುದಿಲ್ಲ ಎಂಬುದಕ್ಕೆ ಬದ್ಧವಾಗಿರಲಿದೆಯೇ?- ಎಂದೂ ಅವರು ಸವಾಲು ಎಸೆದರು. ವಿಷಯದ ಗಂಭೀರತೆಯನ್ನು ಹಾಗೂ ಹಜಾರೆ ಪರ ಇರುವ ಜನಬೆಂಬಲದ ಪ್ರಮಾಣವನ್ನು ಗ್ರಹಿಸುವಲ್ಲಿ ಸರ್ಕಾರದ ಸಲಹೆಗಾರರು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry