ಅಣ್ಣಾ ಸತ್ಯಾಗ್ರಹ ಬೆಂಬಲಿಸಿ ವಿಶ್ವ ಸಂಸ್ಥೆ ಎದುರು ಮತಪ್ರದರ್ಶನ

7

ಅಣ್ಣಾ ಸತ್ಯಾಗ್ರಹ ಬೆಂಬಲಿಸಿ ವಿಶ್ವ ಸಂಸ್ಥೆ ಎದುರು ಮತಪ್ರದರ್ಶನ

Published:
Updated:
ಅಣ್ಣಾ ಸತ್ಯಾಗ್ರಹ ಬೆಂಬಲಿಸಿ ವಿಶ್ವ ಸಂಸ್ಥೆ ಎದುರು ಮತಪ್ರದರ್ಶನ

ನ್ಯೂಯಾರ್ಕ್ (ಪಿಟಿಐ): ಅಣ್ಣಾ ಹಜಾರೆ ಅವರು, ಪರಿಣಾಮಕಾರಿ ಲೋಕಪಾಲ ಮಸೂದೆಗೆ ಒತ್ತಾಯಿಸಿ ಇನ್ನೆರಡು ದಿನಗಳಲ್ಲಿ ಆರಂಭಿಸಲಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ~ಭ್ರಷ್ಟಾಚಾರ ವಿರೋಧಿ ಭಾರತ~ ಸಂಘಟನೆಯ ಸದಸ್ಯರು ವಿಶ್ವ ಸಂಸ್ಥೆಯ ಎದುರು ಶನಿವಾರ ಮತಪ್ರದರ್ಶನ ನಡೆಸಿದರು.

~ಈಗ ಕೇಂದ್ರ ಸರ್ಕಾರದ ಸಚಿವ ಸಂಪುಟ ಅನುಮೋದಿಸಿರುವ ಲೋಕಪಾಲ ಕರಡು ಮಸೂದೆ ಒಂದು ದೊಡ್ಡ ಹಾಸ್ಯ, ಏಕೆಂದರೆ, ಈ ಮಸೂದೆ ಭ್ರಷ್ಟಾಚಾರವನ್ನು ನಿಗ್ರಹಿಸುವುದಿಲ್ಲ, ಬದಲು ಭ್ರಷ್ಟಾಚಾರವನ್ನು ರಕ್ಷಿಸುವಂತಿದೆ~ ಎಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ.

ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದಿದ್ದ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ನಲ್ವತ್ತಕ್ಕೂ ಅಧಿಕ ~ಭ್ರಷ್ಟಾಚಾರ ವಿರೋಧಿ ಭಾರತ~ ಸಂಘಟನೆಯ ಸದಸ್ಯರು, ಈ ಮತಪ್ರದರ್ಶನದಲ್ಲಿ ಭಾಗವಹಿಸಿದ್ದರು.

~ಲೋಕಪಾಲ ಜೋಕಪಾಲ್, ಅಧಿಕಾರ ದುರುಪಯೋಗ ನಿಲ್ಲಲಿ, ಭ್ರಷ್ಟರನ್ನು ಜೈಲಿಗೆ ತಳ್ಳಿ~ ಎಂಬ ಬರಹದ ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರದರ್ಶನಕಾರರು, ಸರ್ಕಾರ ಸಿದ್ಧಪಡಿಸಿದ ಲೋಕಪಾಲ ಮಸುದೆಯ ಪ್ರತಿಗಳನ್ನು ಹರಿದುಹಾಕಿದರು. ಜೊತೆಗೆ ಈ ಪ್ರತಿಭಟನಾಕಾರರು ಭ್ರಷ್ಟಾಚಾರ ವಿರೋಧದ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಅಂತರ್ ರಾಷ್ಟ್ರೀಯ ಸಮುದಾಯ ಬೆಂಬಲಿಸಬೇಕೆಂದು ಕೋರಿದರು. 

ಮೇ ತಿಂಗಳಲ್ಲಿ ವಿಶ್ವ ಸಂಸ್ಥೆ ಏರ್ಪಡಿಸಿದ್ದ ಭ್ರಷ್ಟಾಚಾರ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತ ಭ್ರಷ್ಟಚಾರ ನಿಗ್ರಹಕ್ಕೆ ಒಪ್ಪಿಕೊಂಡಿದ್ದರೂ, ಭಾರತ  ಒಪ್ಪಂದದಲ್ಲಿನ ಪ್ರಾಥಮಿಕ ಅಂಶಗಳನ್ನೂ ಪಾಲಿಸುತ್ತಿಲ್ಲ ಎಂಬುದನ್ನು ವಿಶ್ವಸಂಸ್ಥೆ ಗಮನಿಸಬೇಕು ಎಂದು ~ಭ್ರಷ್ಟಾಚಾರ ವಿರೋಧಿ ಭಾರತ~ ಸಂಘಟನೆಯ ಕಾರ್ಯಕರ್ತ ಆಷಿಮ್ ಜೈನ್ ಆಗ್ರಹಪಡಿಸಿದ್ದಾರೆ.

ಲಂಚ ನಿಡುವುದು, ಪಡೆಯುವದಷ್ಟೇ ಭ್ರಷ್ಟಾಚಾರವಲ್ಲ, ಭ್ರಷ್ಟಾಚಾರದ ಕಾರಣ ಬಡತನ ನಿರ್ಮೂಲನೆ, ಆರೋಗ್ಯ ಸುಧಾರಣಾ ಕ್ರಮಗಳ ಜಾರಿ, ಶಿಕ್ಷಣ ಒದಗಿಸುವುದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ನಿಗದಿಯಾಗಿದ್ದ ಹಣ ಸರ್ಕಾರಿ ಅಧಿಕಾರಿಗಳ ಮತ್ತು ನೇತಾರರ ಜೇಬುಗಳಿಗೆ ಸೋರಿಹೋಗಿ ರಾಷ್ಟ್ರೀಯ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಜೈನ್  ಅವರು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry