ಅಣ್ಣಾ ಹಜಾರೆ ಬೆಂಬಲಿಗರ ವಿಜಯೋತ್ಸವ

7

ಅಣ್ಣಾ ಹಜಾರೆ ಬೆಂಬಲಿಗರ ವಿಜಯೋತ್ಸವ

Published:
Updated:
ಅಣ್ಣಾ ಹಜಾರೆ ಬೆಂಬಲಿಗರ ವಿಜಯೋತ್ಸವ

ಬೆಂಗಳೂರು: ಅಣ್ಣಾ ಹಜಾರೆ ಅವರು ನಿರಶನ ಅಂತ್ಯಗೊಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹವನ್ನು ಶನಿವಾರ ಕೊನೆಗೊಳಿಸಿದರು. ವಿಜಯೋತ್ಸವ ಆಚರಿಸಿದರು. ಸಾವಿರಾರು ಜನರ ಪಾಲ್ಗೊಳ್ಳುವಿಕೆಯಿಂದ ಹೋರಾಟದ ಸ್ಥಳವಾಗಿ ಮಾರ್ಪಟ್ಟಿದ್ದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಅಂದುಕೊಂಡಿದ್ದನ್ನು ಸಾಧಿಸಿದ ಸಾರ್ಥಕ ಭಾವನೆ ಹೋರಾಟಗಾರರಲ್ಲಿತ್ತು. ಐದು ದಿನಗಳಿಂದ ಉಪವಾಸ ಮಾಡುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿ ಉಪವಾಸ ಅಂತ್ಯಗೊಳಿಸಿ ಹಣ್ಣಿನ ರಸ ಕುಡಿದರು.ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಜಾರೆ ಅವರು ಮಾಡಿದ ಉಪವಾಸ ಸತ್ಯಾಗ್ರಹ ಫಲಪ್ರದವಾಗಿದೆ. ಸರ್ಕಾರ ಕೂಡಲೇ ಮಸೂದೆ ರಚಿಸಿ ಅದಕ್ಕೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆದು ಜಾರಿಗೆ ತರುತ್ತದೆ ಎಂಬ ನಂಬಿಕೆ ಇದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡಿದರೆ ಮತ್ತೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ಧ್ಯೇಯ ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಹೋರಾಟಗಾರರು ಹೇಳಿದರು.ಜಾತಿ, ಮತ ಧರ್ಮಗಳ ಭೇದವಿಲ್ಲದೆ ಪಾಲ್ಗೊಂಡಿದ್ದ ಜನರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಸಮಾಜಮುಖಿ ಹೋರಾಟಗಳಲ್ಲಿ ಭೇದಭಾವ ಮರೆತೂ ಎಲ್ಲರೂ ಪಾಲ್ಗೊಳ್ಳೋಣ ಎಂದು ಅವರು ಹೇಳಿದರು. ಮೊದಲು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ಬೃಹತ್ ಬ್ಯಾನರ್ ಕಟ್ಟಲು ಮುಂದಾದ ಸಂಘಟನೆಯೊಂದರ ಸದಸ್ಯರನ್ನು ಸತ್ಯಾಗ್ರಹಿಗಳು ತಡೆದ ಹಿನ್ನೆಲೆಯಲ್ಲಿ ಪರಸ್ಪರರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಜನರು ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಿರುವ ಸತ್ಯಾಗ್ರಹ ಸ್ಥಳದಲ್ಲಿ ಯಾವ ಸಂಘಟನೆಯು ಬ್ಯಾನರ್‌ಗಳನ್ನು ಕಟ್ಟಬಾರದು ಎಂದು ಹೋರಾಟಗಾರರು ಹೇಳಿದರು. ಆ ನಂತರ ಬ್ಯಾನರ್‌ಗಳನ್ನು ವಾಪಸ್ ತೆಗೆದುಕೊಂಡು ಹೋದರು.ಸ್ವಾತಂತ್ರ್ಯ ಉದ್ಯಾನಕ್ಕೆ ಭೇಟಿ ನೀಡಿದ ಇನ್ಫೊಸಿಸ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋಹನ್‌ದಾಸ್ ಪೈ ಅವರು ಮಾತನಾಡಿ, ‘ಇದು ಹೋರಾಟದ ಆರಂಭವಾಗಬೇಕೆ ಹೊರತು ಅಂತ್ಯವಾಗಬಾರದು. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಬೇಕು. ಸಂಸತ್ತಿನಲ್ಲಿ ಜನ ಲೋಕಪಾಲ್ ಮಸೂದೆ ಮಂಡಿಸಿ ಜಾರಿಗೆ ತರುವವರೆಗೂ ರಾಜ್ಯದಲ್ಲಿರುವ ಲೋಕಾಯುಕ್ತ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು’ ಎಂದರು.ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry