ಅಣ್ಣಾ ಹಜಾರೆ, ರಾಮ್‌ದೇವ್ ಅವರಿಂದ ಒಂದು ದಿನದ ಉಪವಾಸ:ಕಪ್ಪು ಹಣ: ಕೇಂದ್ರ ಸರ್ಕಾರಕ್ಕೆ ಗಡುವು

7

ಅಣ್ಣಾ ಹಜಾರೆ, ರಾಮ್‌ದೇವ್ ಅವರಿಂದ ಒಂದು ದಿನದ ಉಪವಾಸ:ಕಪ್ಪು ಹಣ: ಕೇಂದ್ರ ಸರ್ಕಾರಕ್ಕೆ ಗಡುವು

Published:
Updated:
ಅಣ್ಣಾ ಹಜಾರೆ, ರಾಮ್‌ದೇವ್ ಅವರಿಂದ ಒಂದು ದಿನದ ಉಪವಾಸ:ಕಪ್ಪು ಹಣ: ಕೇಂದ್ರ ಸರ್ಕಾರಕ್ಕೆ ಗಡುವು

ನವದೆಹಲಿ (ಪಿಟಿಐ/ಐಎಎನ್‌ಎಸ್): ಕಪ್ಪುಹಣ ಮತ್ತು ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಸರ್ಕಾರ ಆಗಸ್ಟ್ ಒಳಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರಲು ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ರಾಮ್‌ದೇವ್, ಭಾನುವಾರ ಇಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.ಜಂತರ್- ಮಂತರ್ ಬಳಿ ನಡೆದ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುವ ಮೂಲಕ ಚಾಲನೆ ನೀಡಿದ ರಾಮ್‌ದೇವ್, `ಬರುವ ಆಗಸ್ಟ್ ಹೊತ್ತಿಗೆ ಅಂತಿಮ ನಿರ್ಧಾರ ಆಗಲೇ ಬೇಕು. ಈ ಗುರಿಯನ್ನು ಇಟ್ಟುಕೊಂಡೇ ಹೋರಾಟ ಮಾಡುತ್ತೇವೆ~ ಎಂದು ಗುಡುಗಿದರು.ಸಚಿವ ಸಂಪುಟವನ್ನು ಭ್ರಷ್ಟಾಚಾರದಿಂದ ಮುಕ್ತವಾಗಿರಿಸಿ ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದ ಅವರು, `ನೀವು (ಪ್ರಧಾನಿ) ವೈಯಕ್ತಿಕವಾಗಿ ಪ್ರಾಮಾಣಿಕರು. ಜೊತೆಗೆ ರಾಜಕೀಯ ಪ್ರಾಮಾಣಿಕತೆಯೂ ಅವಶ್ಯ.  ನಿಮ್ಮ ಸಂಪುಟವೂ ಪ್ರಾಮಾಣಿಕವಾಗಿರುವಂತೆ ನೋಡಿಕೊಳ್ಳುವ ಹೊಣೆ ನಿಮ್ಮ ಮೇಲಿದೆ~ ಎಂದರು.`ಅಣ್ಣಾ ತಂಡದ ಸದಸ್ಯರ ಚಾರಿತ್ರ್ಯಕ್ಕೆ ಮಸಿ ಹಚ್ಚಿ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ನೋಡಿತು. ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆದಾಗಲೆಲ್ಲಾ ಕಾನೂನನ್ನು ಬೀದಿಯಲ್ಲಿ ರೂಪಿಸಲಾಗದು ಎಂದು ಸರ್ಕಾರದ ಪ್ರಮುಖರು ಬೊಬ್ಬೆಹೊಡೆದರು. ಆದರೆ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಯಾರ ಬಗ್ಗೆಯೂ ಹಗೆತನ ಇಲ್ಲ~ ಎಂದರು.ಉಪವಾಸ ಸತ್ಯಾಗ್ರಹಕ್ಕೆ ಕೂರುವುದಕ್ಕೂ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಮ್‌ದೇವ್ , `ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ವಾಪಸು ತಂದರೆ  ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ~ ಎಂದರು.`ಹೋರಾಟದ ಮುಂದಿನ ಭಾಗವಾಗಿ ದೇಶದಾದ್ಯಂತ ಗ್ರಾಮಗಳಲ್ಲಿ ಸಹಿ ಸಂಗ್ರಹ ಚಳವಳಿಯನ್ನು ನಾಳೆಯಿಂದ ಆರಂಭಿಸುತ್ತೇವೆ~ ಎಂದ ಅವರು, `ಜನರ ಈ ಅಭಿಪ್ರಾಯವನ್ನು ಆಗಸ್ಟ್ 9ರಂದು ಸರ್ಕಾರಕ್ಕೆ ತಲುಪಿಸಲಾಗುವುದು ನಂತರ ಮುಂದಿನ ಹಂತದ ಚಳವಳಿಯನ್ನು ರೂಪಿಸಲಾಗುವುದು~ ಎಂದರು.ಭ್ರಷ್ಟಾಚಾರದ ಆರೋಪಕ್ಕೆ ಸ್ವಯಂ ಗುರಿಯಾಗಿರುವ ರಾಮ್‌ದೇವ್ ಜೊತೆಗೆ ಚಳವಳಿ ನಡೆಸುವುದಕ್ಕೆ ಅಣ್ಣಾ ತಂಡ ಕೆಲವರು ವಿರೋಧವಿದ್ದರೂ  ಇಂದಿನ ಸತ್ಯಾಗ್ರಹದಲ್ಲಿ ಅಣ್ಣಾ ತಂಡದ ಪ್ರಮುಖ ಸದಸ್ಯರಾದ ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ಮನಿಶ್ ಸಿಸೋಡಿಯಾ ಇತರರು ಹಾಜರಿದ್ದರು.ಸತ್ಯಾಗ್ರಹ ಆರಂಭಿಸುವುದಕ್ಕೂ ಮೊದಲು ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳ `ರಾಜ್‌ಘಾಟ್~ಗೆ ಹಜಾರೆ ಮತ್ತು ರಾಮ್‌ದೇವ್ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry