ಅಣ್ಣಾ ಹೋರಾಟಕ್ಕೆ ಜೈ ಹೋ...

7

ಅಣ್ಣಾ ಹೋರಾಟಕ್ಕೆ ಜೈ ಹೋ...

Published:
Updated:
ಅಣ್ಣಾ ಹೋರಾಟಕ್ಕೆ ಜೈ ಹೋ...

ಮೈಸೂರು: ಜನಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ, ಭ್ರಷ್ಟಾಚಾರ ವಿರುದ್ಧ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಸಾಂಸ್ಕೃತಿಕ ನಗರಿಯ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿ ಯರು ಗುರುವಾರವೂ ತರಗತಿಗಳನ್ನು ಬಹಿಷ್ಕರಿಸಿ ರ‌್ಯಾಲಿ, ಪ್ರತಿಭಟನೆಗಳನ್ನು ಮಾಡಿದರು.

 

ಗಾಂಧಿ ಚೌಕದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ನಡೆಯುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಎಬಿವಿಪಿ ಕಾರ್ಯಕರ್ತರು ಎರಡನೇ ದಿನವು ಕಾಲೇಜುಗಳಿಗೆ ತೆರಳಿ ತರಗತಿಗಳನ್ನು ಬಹಿಷ್ಕರಿಸಿ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವಿದ್ಯಾರ್ಥಿಗಳು ತರಗತಿಗಳಿಂದ ಹೊರನಡೆದು ಬೈಕ್ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮತ್ತು ಗಾಂಧಿಚೌಕದಲ್ಲಿ ಜಮಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ಮತ್ತು ಗಾಂಧಿ ಚೌಕದಲ್ಲಿ ವಿದ್ಯಾರ್ಥಿಗಳು ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ಘೋಷಣೆಗಳನ್ನು ಮೊಳಗಿಸಿದರು.ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಾಂಧಿಚೌಕದಲ್ಲಿ ಬಂದು ಸೇರಿದಂತೆ ಭ್ರಷ್ಟಾಚಾರ ವಿರುದ್ಧ ದನಿ ಮೊಳಗಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದಂತೆ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಗಾಂಧಿಚೌಕದ ಸುತ್ತಲೂ ವಾಹನಗಳ ಸಂಚಾರವನ್ನು ನಿಷೇಧಿಸಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು.ಹಜಾರೆ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಖಂಡನೀಯ. ದೇಶದಲ್ಲಿ ನಡೆದ 2ಜಿ ಸ್ಪ್ರೆಕ್ಟ್ರಂ, ಕಾಮನ್‌ವೆಲ್ತ್ ಕ್ರೀಡೆ ಹಗರಣಗಳು ಪ್ರಪಂಚದಲ್ಲಿ ಭಾರತದ ಗೌರವ ಮಣ್ಣುಪಾಲಾಗುವಂತೆ ಮಾಡಿದೆ. ಭ್ರಷ್ಟಾಚಾರ ವಿರುದ್ಧ ಹಜಾರೆ ಅವರು ದನಿ ಎತ್ತಿ ಹೋರಾಟಕ್ಕೆ ಇಳಿದಿರುವುದನ್ನು ಕೇಂದ್ರ ಸರ್ಕಾರ ಹತ್ತಿಕ್ಕಲು ಯತ್ನಿಸುತ್ತಿದೆ. ಇದರಿಂದ ದೇಶದಲ್ಲಿ  ಮತ್ತೊಂದು ತುರ್ತು ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ.ಹಜಾರೆ ಅವರ ಹೋರಾಟವನ್ನು ಹತ್ತಿಕ್ಕಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಹಾರಾಜ, ಮಹಾ ರಾಣಿ ಜೂನಿ ಯರ್ ಕಾಲೇಜು, ಮಹಾರಾಣಿ ಪದವಿ ಕಾಲೇಜು, ಮರಿಮಲ್ಲಪ್ಪ, ಸದ್ವಿದ್ಯಾ ಕಾಲೇ ಜಿನ ನೂರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಗಾಂಧಿ ಪ್ರತಿಮೆ ಮುಂಭಾಗ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಪ್ರೊ.ಆರ್.ಬಾಲಸುಬ್ರಹ್ಮಣ್ಯಂ, ಪ್ರೊ.ಶಶಿಕಲಾ, ಎಸ್.ಜೆ.ಒಂಬತ್ಕೆರೆ ಮೈಸೂರು ಮಠ್ ಸೇರಿದಂತೆ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.ಎಬಿವಿಪಿ ಜಿಲ್ಲಾ ಸಂಚಾಲಕ ರಾಕೇಶ್, ನಗರ ಕಾರ್ಯದರ್ಶಿ ಡಿ.ಎಸ್.ನಿರುತ, ಸುಮನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಭರತ್, ರಾಘವೇಂದ್ರ, ಮಧು, ಪ್ರವೀಣ್, ಮಂಜುನಾಥ್, ಚಂದ್ರಶೇಖರಯ್ಯ, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಸಿಪಿಐ: ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ನ್ಯಾಯ ಮಂಡಳಿ ಕಾರ್ಯಕರ್ತರು ನಗರದ ನ್ಯಾಯಾಲಯದ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದರು.ಜೆ.ಪಿ. ಪಾರ್ಕ್‌ನಲ್ಲಿ ಹಜಾರೆ ಉಪವಾಸ ಮಾಡಲು ಅವಕಾಶ ನೀಡಬೇಕು. ಪ್ರಧಾನಿ ಮನಮೋಹನಸಿಂಗ್ ಜನರ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಭ್ರಷ್ಟಾಚಾರಿ ವಿರೋಧಿ ಆಂದೋಲನ: ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ಭ್ರಷ್ಟಾಚಾರಿ ವಿರೋಧಿ ಆಂದೋಲನ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿದರು.  ಭ್ರಷ್ಟಾಚಾರ ನಿಗ್ರಹಕ್ಕೆ ಬಲಿಷ್ಠ ಜನಲೋಕಪಾಲ್ ಮಸೂದೆ ಅಗತ್ಯ. ಭ್ರಷ್ಟರನ್ನು ಜೈಲಿಗೆ ಹಾಕಬೇಕು. ಹೋರಾಟವನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರ್ಕಾರ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಸೇರಿದಂತೆ ಇತರರು ಧರಣಿಯಲ್ಲಿ ಭಾಗವಹಿಸಿದ್ದರು. 

ಎಬಿವಿಪಿ ಕಾರ್ಯಕರ್ತನ ಬಂಧನ: ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ಮಾಡುತ್ತಿರುವ ನಡುವೆ ಎಬಿವಿಪಿ ಕಾರ್ಯಕರ್ತ ಸಂಗಮೇಶ್‌ನನ್ನು ಪೊಲೀಸರು ಬಂಧಿಸಿದರು. ಇದರಿಂದ ವಿದ್ಯಾರ್ಥಿಗಳ ಗುಂಪು ಪೊಲೀಸರನ್ನೇ ದಿಟ್ಟಿಸಿ ನೋಡಿತು.ಬಂಧಿತನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

ಕೊನೆಗೆ ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಪೊಲೀಸರು ಸಂಗಮೇಶ್‌ನನ್ನು ಬಿಡುಗಡೆ ಮಾಡಿದರು.ಹುರುಪು ತುಂಬಿದ `ಬಾಲು~

ತರಗತಿಗಳನ್ನು ಬಹಿಷ್ಕರಿಸಿ ಗಾಂಧಿಚೌಕಕ್ಕೆ ಬಂದು ಸೇರುತ್ತಿದ್ದ ವಿದ್ಯಾರ್ಥಿಗಳ ಗುಂಪನ್ನು ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಬಾಲಸುಬ್ರಹ್ಮಣ್ಯಂ ಅವರು ಹುರಿದುಂಬಿಸಿದರು.ಪ್ರತಿ ಗುಂಪಿಗೆ ತೆರಳಿ ವಿದ್ಯಾರ್ಥಿಳೊಂದಿಗೆ ಮಾತನಾಡಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಅಗತ್ಯವಿರುವ ಕುರಿತು ಮನವರಿಕೆ ಮಾಡಿಕೊಟ್ಟರು. ಇವರ ಮಾತುಗಳಿಂದ ಪ್ರೇರೇಪಿತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಉತ್ಸಾಹದಿಂದ ಘೋಷಣೆಗಳನ್ನು ಕೂಗಿ ಹೋರಾಟಕ್ಕೆ ಜೀವ ತುಂಬಿದರು.ಪೊಲೀಸ್ ಬಂದೋಬಸ್ತ್

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಗಾಂಧಿ ಚೌಕದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry