ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

7

ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

Published:
Updated:
ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

ಶಿವಮೊಗ್ಗ: ಅಣ್ಣಾ ಹಜಾರೆ ಅವರು ಆರಂಭಿಸಿರುವ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಹೋರಾಟಕ್ಕೆ ದನಿಗೂಡಿಸಿದರು. ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಸಹ್ಯಾದ್ರಿ ಸ್ನೇಹ ಸಂಘ ಮತ್ತಿತರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ‘ಜನ ಲೋಕಪಾಲ್ ಮಸೂದೆ’ ಜಾರಿಗೆ ಆಗ್ರಹಿಸಿ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ನಡೆಸಿದರು.ಬಿ.ಎಚ್. ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು. 44 ವರ್ಷಗಳಿಂದ ಸುದ್ದಿಯಲ್ಲಿರುವ ಲೋಕಪಾಲ್ ಮಸೂದೆಗೆ ಇದೀಗ ಚಾಲನೆ ದೊರಕಿದೆ. ಈವರೆಗೆ ಮಸೂದೆ ಮಂಡನೆಯಾದರೂ ಅನುಮೋದನೆಗೊಂಡಿರಲಿಲ್ಲ. ಈಗ ಕಾಲ ಸನ್ನಿಹಿತವಾಗಿದೆ. ಕೂಡಲೇ, ‘ಜನ ಲೋಕಪಾಲ್ ಮಸೂದೆ’ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲ ವರ್ಗದ ನಾಗರಿಕರು, ಯುವಕರು ಜಾಗೃತರಾಗಬೇಕು. ಮಸೂದೆ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಡಾ.ಎ. ಸತೀಶ್‌ಕುಮಾರ್ ಶೆಟ್ಟಿ, ಓಂಕಾರ್ ಸತೀಶ್, ಬಿ.ಎಸ್. ನಾಗರಾಜ್, ಈಸೂರು ಲೋಕೇಶ್, ದಿವಾಕರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.ಅದೇ ರೀತಿ, ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಹಾವೀರ ವೃತ್ತದಲ್ಲಿ ರಸ್ತೆತಡೆ ನಡೆಸಿ, ಬೆಂಬಲ ಸೂಚಿಸಿದರು.ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಸಾಮಾಜಿಕ ನೈತಿಕತೆಯೇ ಅಧಃಪತನವಾಗುತ್ತಿದೆ. ಈ ಕೆಟ್ಟ ವ್ಯವಸ್ಥೆಗೆ ಇತಿಶ್ರೀ ಹಾಡಲೇಬೇಕು. ಈ ನಿಟ್ಟಿನಲ್ಲಿ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ‘ಭ್ರಷ್ಟಾಚಾರ ವಿರೋಧ ಆಂದೋಲನ’ಕ್ಕೆ ಪ್ರತಿಯೊಬ್ಬ ನಾಗರಿಕರು ಬಲ ತುಂಬಬೇಕು ಎಂದು ಮನವಿ ಮಾಡಿದರು. ಅದೇ ರೀತಿ, ಜಿಲ್ಲಾ ವಕೀಲರ ಸಂಘ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿತು. ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತೀಯ ಕಿಸಾನ್ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಎರಡನೇ ದಿನವೂ ಮುಂದುವರಿದಿದೆ.ಅಲ್ಲದೇ, ರಾಷ್ಟ್ರೀಯ ಶಿಕ್ಷಣ ಸಮಿತಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಸದಸ್ಯರು ನ್ಯಾಷನಲ್ ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.ಕನ್ನಡ ಸೈನ್ಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಜಯ, ‘ಜನ ಲೋಕಪಾಲ್ ಮಸೂದೆ’ ಜಾರಿಗೆ ರಕ್ತಪತ್ರ ಚಳವಳಿ ನಡೆಸಲಿದ್ದಾರೆ.ಉಪವಾಸ ಸತ್ಯಾಗ್ರಹ 

ಸಾಗರ:
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿರುವ ಲೋಕಪಾಲ್ ಮಸೂದೆ ಜಾರಿಗೆ ಅಡ್ಡಿಯಾಗಿರುವ ಭ್ರಷ್ಟ ರಾಜಕಾರಣಿಗಳೇ ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಸಾಹಿತಿ ಡಾ.ನಾ. ಡಿಸೋಜಾ ಹೇಳಿದರು.ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.ಇಂದು ರಾಜಕಾರಣಿ ಅಧಿಕಾರಿಗಳು ಮಾತ್ರವಲ್ಲದೇ ವೈದ್ಯ, ಎಂಜಿನಿಯರ್, ಪತ್ರಕರ್ತರಲ್ಲೂ ಭ್ರಷ್ಟರನ್ನು ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಬಂದು ನಮ್ಮನ್ನೆ ನಾವು ಆಳಿಕೊಳ್ಳುತ್ತಿದ್ದರೂ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಾಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಹಾಗೆ ನೋಡಿದರೆ ಬ್ರಿಟಿಷರ ಕಾಲದಲ್ಲೇ ಭ್ರಷ್ಟಾಚಾರ ಕಡಿಮೆ ಇತ್ತು ಎಂಬುದು ನಮ್ಮನ್ನಾಳುವವರಿಗೆ ನಾಚಿಕೆ ತರುವ ಸಂಗತಿ ಎಂದರು.ಒಬ್ಬ ನಡೆಸುವ ಭ್ರಷ್ಟಾಚಾರ ಇನ್ನೊಬ್ಬನ ಭ್ರಷ್ಟಾಚಾರಕ್ಕೆ ಸಮರ್ಥನೆಯಲ್ಲ. ಅಣ್ಣಾ ಹಜಾರೆ ಒಬ್ಬರಿಂದ ಭ್ರಷ್ಟಾಚಾರ ತೊಲಗಲು ಸಾಧ್ಯವಿಲ್ಲ. ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅದನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.ರಂಗಕರ್ಮಿ ಪ್ರಸನ್ನ ಮಾತನಾಡಿ, ಅಣ್ಣಾ ಹಜಾರೆ ಅವರು ನೈತಿಕವಾಗಿ ಶುದ್ಧತೆಯನ್ನು ಕಾಪಾಡಿಕೊಂಡಿರುವ ಕಾರಣಕ್ಕೆ ಅವರ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅವರ ವ್ಯಕ್ತಿತ್ವ ಹಾಗೂ ಸರಳತೆ ನಮಗೆ ಮಾದರಿಯಾಗಬೇಕು. ನಮ್ಮ ಬದುಕಿನಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳದೇ ಇದ್ದರೆ ನಾವು ಭ್ರಷ್ಟಾಚಾರದಲ್ಲಿ ಭಾಗಿಯಾಗುವುದು ಅನಿವಾರ್ಯವಾಗುತ್ತದೆ. ರಾಜಕೀಯ ಅಧಿಕಾರ ವಿಕೇಂದ್ರೀಕರಣಗೊಳ್ಳದೆ ಭ್ರಷ್ಟಾಚಾರ ತೊಲಗಲು ಸಾಧ್ಯವಿಲ್ಲ ಎಂದರು.ಹಿರಿಯ ವಕೀಲ ಈಶ್ವರಪ್ಪ ನಾಯ್ಕಾ ಮಾತನಾಡಿ, ಮೇಲ್ಮಟ್ಟದಲ್ಲಿ ಭ್ರಷ್ಟಾಚಾರ ತೊಲಗಿದರೆ ಕೆಳಹಂತದಲ್ಲೂ ಅದು ನಿಯಂತ್ರಣಕ್ಕೆ ಬರುತ್ತದೆ. ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಕನಿಷ್ಠ ಒಂದು ವರ್ಷ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ಪ್ರಮಾಣ ಮಾಡಿ ನಿರ್ಣಯ ಸ್ವೀಕರಿಸಬೇಕು ಎಂದು ಹೇಳಿದರು.ಅಣ್ಣಾ ಹಜಾರೆ ಅವರು ಉಪವಾಸವನ್ನು ನಿಲ್ಲಿಸುವ ತನಕ ತಾವೂ ಉಪವಾಸ ಕೈಗೊಳ್ಳುವುದಾಗಿ ನಿರ್ಧರಿಸಿರುವ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪತ್ರಕರ್ತ ಎಚ್.ಬಿ. ರಾಘವೇಂದ್ರ, ಸಾಮಾಜಿಕ ಕಾರ್ಯಕರ್ತ ಶಂಭುಲಿಂಗ,ಗುಡ್ಡೆಮನೆ ನಾಗರಾಜ್ ಮಾತನಾಡಿ ಆಹೋರಾತ್ರಿ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದರು.ಬರಹಗಾರ ವಿಲಿಯಂ, ಬಳಕೆದಾರ ವೇದಿಕೆಯ ಅ.ರಾ. ಲಂಬೋದರ್, ಕೆ.ಎನ್. ವೆಂಕಟಗಿರಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ಮುರುಳೀಧರ್, ಪುರಸಭೆ ಮಾಜಿ ಉಪಾಧ್ಯಕ್ಷ ಮಹಮದ್ ಖಾಸಿಂ, ವಕೀಲರ ಸಂಘದ ಕಾರ್ಯದರ್ಶಿ ಕೆ.ಎಲ್. ಭೋಜರಾಜ್, ನಗರಸಭಾ ಸದಸ್ಯ ಐ.ಎನ್. ಸುರೇಶ್‌ಬಾಬು, ಸುಂದರ್‌ಸಿಂಗ್, ಡಿಎಸ್‌ಎಸ್‌ನ ಪರಮೇಶ್ವರ ದೂಗೂರು, ವಿಶ್ವನಾಥಗೌಡ ಅದರಂತೆ, ಪರಮೇಶ್ವರ ಹೊಸಕೊಪ್ಪ,ಗಣಪತಿ ಸುಳಗೋಡು ಮೊದಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry