ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

7

ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

Published:
Updated:
ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

ರಾಮನಗರ: ಭ್ರಷ್ಟಾಚಾರ ಹತ್ತಿಕ್ಕಲು ಪ್ರಬಲ ಲೋಕಪಾಲ್ ಮಸೂದೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ರಾಮನಗರದ ವಿದ್ಯಾರ್ಥಿಗಳು, ವಕೀಲರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿ ಬುಧವಾರ ಬೀದಿಗಿಳಿದು ಹೋರಾಟ ನಡೆಸಿದರು.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ನೇತೃತ್ವ ಬುಧವಾರ ಬೆಳಿಗ್ಗೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಹೊರಬಂದರು. ರಾಮನಗರದ ಪಿಡಬ್ಲ್ಯು ಕ್ವಾಟ್ರಸ್ ವೃತ್ತದ ಬಳಿ ವಿದ್ಯಾರ್ಥಿಗಳು ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ನಿಮಿಷಗಳ ಕಾಲ ತಡೆದು ಪ್ರತಿಭಟಿಸಿದರು.ಅಣ್ಣಾ ಹಜಾರೆ ಅವರನ್ನು ಬಂಧಿಸಿದ ಕೇಂದ್ರ ಹಾಗೂ ದೆಹಲಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ವಕೀಲರ ಸಾಥ್:  ಜ್ಲ್ಲಿಲಾ ಕೇಂದ್ರದ ವಕೀಲರು ಕೂಡ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ, ನ್ಯಾಯಾಲಯದ ಕಲಾಪಗಳನ್ನು ತೊರೆದು ಪ್ರತಿಭಟನಾ ರ‌್ಯಾಲಿ ನಡೆಸಿದರು. ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವಕೀಲರು ಮಿನಿ ವಿಧಾನಸೌಧದವರೆಗೆ ಮೆರವಣಿಗೆ ಹೋದರು. ಕೇಂದ್ರ ಸರ್ಕಾರದ ವರ್ತನೆಯನ್ನು ಖಂಡಿಸಿ ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ, ಉಪಾಧ್ಯಕ್ಷ ಆರ್.ವಿ.ದೇವರಾಜು, ಕಾರ್ಯದರ್ಶಿ ವಿ.ಎಂ.ಶ್ರೀವತ್ಸ, ಖಜಾಂಚಿ ಅಶೋಕ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಸಂಘ- ಸಂಸ್ಥೆಗಳ ಧರಣಿ: ಜಯ ಕರ್ನಾಟಕ, ರೈತ ಸಂಘ ಮತ್ತು ಹಸಿರು ಸೇನೆ, ಭಾರತ ವಿಕಾಸ ಪರಿಷದ್ ಮತ್ತು ಜಿಲ್ಲೆಯ ವಿವಿಧ ಸಂಘಟನೆಗಳು, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಸಾರ್ವಜನಿಕರು ಅಣ್ಣಾ ಅವರ ಬಂಧನ ವಿರೋಧಿಸಿ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಅಣ್ಣಾ ಅವರನ್ನು ಬಂಧಿಸಿ ತಿಹಾರ್ ಸೆರೆಮನೆಗೆ ಕಳುಹಿಸಿದ ಕೇಂದ್ರ ಸರ್ಕಾರದ ವರ್ತನೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನಪಿಸುತ್ತದೆ. ದೇಶದ ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಅನಾಗರಿಕವಾಗಿ ವರ್ತಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ದೂರಿದರು.ಸಂಘದ ಮುಖಂಡ ಪ್ರಕಾಶ್ ರೈ, ಜಿಲ್ಲಾಧ್ಯಕ್ಷ ಡಿ.ಜಿ.ಕುಮಾರ್, ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಶಿವನಂಜಯ್ಯ, ಭಾರತ ವಿಕಾಸ ಪರಿಷದ್ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.ಅಣ್ಣಾ ಬೆಂಬಲಕ್ಕೆ ವಕೀಲರು, ವಿದ್ಯಾರ್ಥಿಗಳು

ಚನ್ನಪಟ್ಟಣ: ಗಾಂಧಿವಾದಿ ಅಣ್ಣಾ ಹಜಾರೆ ಮತ್ತು ತಂಡ ಸಿದ್ಧಪಡಿಸಿರುವ ಪ್ರಬಲ ಲೋಕಪಾಲ ಮಸೂದೆಯನ್ನು ಯಾವುದೇ ಬದಲಾವಣೆ ಮಾಡದೇ  ಜಾರಿಗೆ ತರಬೇಕು ಎಂದು ಒತ್ತಾಯಿಸಿ  ಪಟ್ಟಣದ ವಕೀಲರ ಸಂಘ ಬುಧವಾರ ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣಪ್ರಭ ಅವರಿಗೆ ಮನವಿ ಸಲ್ಲಿಸಿತು.ಬಿಜೆಪಿ ಪ್ರತಿಭಟನೆ: ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿರುವ ಅಣ್ಣಾ ಹಜಾರೆ ವಿರುದ್ಧ ಕಳಂಕ ಹೊರಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿರುವ ಕಾಂಗ್ರೆಸ್ ಕುಹಕ ನೀತಿ ಸರಿಯಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ, ಪಟ್ಟಣದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.ಸಂದರ್ಭದಲ್ಲಿ ಜಿಲ್ಲಾ ಕಾರ‌್ಯಾಧ್ಯಕ್ಷ ಎಸ್ ರಾಮಗಿರಿ, ಅಭಿಲಾಷ್,ಎಂ.ಕೆ. ತಿಮ್ಮರಾಜು, ಲೋಕೇಶ್, ಮಂಜೇಶ್, ನಿತಿನ್ ಹಾಗೂ ಗೋಂವಿಧರಾಜು ಪ್ರತಿಭಟನೆ ನೇತೃತ್ವ ವಹಿಸಿದ್ದರು.ಅಣ್ಣಾ ಬಂಧನಕ್ಕೆ ವಿರೋಧ

ಮಾಗಡಿ: ಸಶಕ್ತ  ಲೋಕಪಾಲ್ ಮಸೂದೆ ಜಾರಿ ಮತ್ತು  ಗಾಂಧಿವಾದಿ ಅಣ್ಣಾ ಹಜಾರೆ  ಬಂಧನದ ವಿರುದ್ಧ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ತಾಲ್ಲೂಕು ಕನ್ನಡ ಸೇನೆ ಹಾಗೂ ಸೇನೆಯ ವಿದ್ಯಾರ್ಥಿ ಘಟಕ, ಎ.ಬಿ.ವಿ.ಪಿ ಘಟಕಗಳ ಸಹಯೋಗದಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಕನ್ನಡ ಸೇನೆಯ ಕಾರ್ಯಾಧ್ಯಕ್ಷ ಆನಂದ್ ಮಾತನಾಡಿ, ಅಣ್ಣಾ ಹಜಾರೆಯವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಅಧ್ಯಕ್ಷ ಸೂರಪ್ಪ, ಭ್ರಷ್ಟಾಚಾರ ನಿರ್ಮೂಲನೆಗೆ ಸಂಘಟಿತ ಹೋರಾಟ ಮಾಡುವುದಾಗಿ ತಿಳಿಸಿದರು. ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಭಾರತೀಯ ಶ್ರೀಮಂತರ ಕಪ್ಪುಹಣವನ್ನು ತಕ್ಷಣ ಭಾರತಕ್ಕೆ ತರುವಂತೆ ಶಂಕರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry