ಅಣ್ಣಿಗೇರಿ: ಡಬ್ಬಿ ಅಂಗಡಿಗಳ ತೆರವು

7

ಅಣ್ಣಿಗೇರಿ: ಡಬ್ಬಿ ಅಂಗಡಿಗಳ ತೆರವು

Published:
Updated:
ಅಣ್ಣಿಗೇರಿ: ಡಬ್ಬಿ ಅಂಗಡಿಗಳ ತೆರವು

ಅಣ್ಣಿಗೇರಿ: ಕಳೆದ ಸುಮಾರು 30 ವರ್ಷಗಳಿಂದ ಇಲ್ಲಿಯ ಬಸ್ ನಿಲ್ದಾಣದ ಎದುರು ಅನಧಿಕೃತವಾಗಿ ಇಡಲಾಗಿದ್ದ ಡಬ್ಬಿ ಅಂಗಡಿಗಳ ವಿರುದ್ಧ ಮಂಗಳವಾರ ಮುಂಜಾನೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಅವುಗಳನ್ನು ತೆರವುಗೊಳಿಸಿದರು. ಇದರಿಂದ ಆ ಪ್ರದೇಶ ಡಬ್ಬಿ ಅಂಗಡಿಗಳಿಂದ ಮುಕ್ತಗೊಂಡಿತು.ಲೋಕೋಪಯೋಗಿ ಇಲಾಖೆ, ಪುರಸಭೆ, ಹೆಸ್ಕಾಂ ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಜಂಟಿಯಾಗಿ ಮುಂಜಾನೆ 9 ಗಂಟೆಗೆ ಆರಂಭಿಸಿದ ಕಾರ್ಯಾಚರಣೆಯಲ್ಲಿ 60ಕ್ಕೂ ಹೆಚ್ಚು ಡಬ್ಬಿ ಅಂಗಡಿಗಳು ತೆರವುಗೊಂಡವು.ಈ ಕಾರ್ಯಾಚರಣೆ ಬಿಸಿ ಇಲ್ಲಿಯ ಅಂಬಿಗೇರಿ, ಎಪಿಎಂಸಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿದ್ದ 40ಕ್ಕೂ ಹೆಚ್ಚು ಡಬ್ಬಿ ಅಂಗಡಿಕಾರರಿಗೂ ತಟ್ಟಿ ಅವರೂ ಸಹ ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ತೆರವು ಮಾಡಿದರು.

 

ಡಬ್ಬಿ ಅಂಗಡಿಗಳನ್ನೇ ನಂಬಿ ಉಪಜೀವನ ಸಾಗಿಸುತ್ತಿದ್ದ ನೂರಾರು ಕುಟುಂಬಗಳಿಗೆ ಕಾರ್ಯಾಚರಣೆಯಿಂದ ಆಕಾಶವೇ ಕಳಚಿ ಬಿದ್ದಂತಾದರೆ, ಡಬ್ಬಿ ಅಂಗಡಿಗಳಿಂದ ಬಸ್ ನಿಲ್ದಾಣದ ಪ್ರದೇಶವನ್ನು ಮುಕ್ತಗೊಳಿಸಿದ್ದಕ್ಕೆ ಪಟ್ಟಣದ ಬಹಳಷ್ಟು ಜನ ಹರ್ಷ ವ್ಯಕ್ತಪಡಿಸಿದರು.ರೂ 36 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದ ನವೀಕರಣ ಕೈಗೆತ್ತಿಕೊಂಡಿದ್ದ ಸಾರಿಗೆ ಸಂಸ್ಥೆ ನಿಲ್ದಾಣದ ಆಸುಪಾಸಿನಲ್ಲಿ ಬೀಡುಬಿಟ್ಟಿದ್ದ ಡಬ್ಬಿ ಅಂಗಡಿಗಳನ್ನು ತೆರವು ಮಾಡಿಕೊಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಕೋರಿತ್ತು.ನವಲಗುಂದ ತಹಶೀಲ್ದಾರ ವಿನಾಯಕ ಪಾಲನಕರ ನೇತೃತ್ವದಲ್ಲಿ ಸೇರಿದ ಸಭೆ ಡಬ್ಬಿ ಅಂಗಡಿಗಳನ್ನು ತೆರವು ಮಾಡುವಂತೆ ಅವುಗಳ ಮಾಲೀಕರಿಗೆ ಗಡುವು ನೀಡಿ ಮೌಖಿಕ ಆದೇಶ ನೀಡಿತ್ತು.`ಗಡುವು ಮೀರಿ ಕೆಲ ದಿನಗಳು ಕಳೆದರೂ ತೆರವುಗೊಳಿಸದೇ ಇದ್ದುದರಿಂದ ಅನಿವಾರ್ಯ ವಾಗಿ ಈ ಕಾರ್ಯಾಚರಣೆ ನಡೆಸಬೇಕಾಯಿತು~ ಎಂದು ಅಧಿಕಾರಿಗಳು ಹೇಳಿದರು. ಈ ನಡುವೆ ಕೆಲವರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.ಈ ಸಂದರ್ಭದಲ್ಲಿ ಪ್ರಜಾವಾಣಿ ಜತೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮಾಪತಿ, ಅಣ್ಣಿಗೇರಿಯಿಂದ ನವಲಗುಂದವರೆಗೆ ಇಂಟರ್‌ಲಿಂಕ್ ಹೈವೇ ನಿರ್ಮಿಸುವ ಉದ್ದೇಶ ಇಲಾಖೆಗಿದೆ ಎಂದರು.

 

ಅಂಬಿಗೇರಿ ಕ್ರಾಸ್‌ನಿಂದ ರೇಲ್ವೆ ಗೇಟ್‌ವರೆಗೆ ಬಸ್ ನಿಲ್ದಾಣದ ಎದುರಿಗಿನ ರಸ್ತೆ ಮಧ್ಯಭಾಗದಿಂದ 25 ಮೀಟರ್ ಅಗಲ ಹೊಂದಿದೆ. ರೇಲ್ವೆ ಗೇಟ್‌ನಿಂದ ನವಲಗುಂದ ವರೆಗೆ 15-18 ಮೀಟರ್ ಅಗಲವಿದೆ. ಈ ರಸ್ತೆಯನ್ನು ಕ್ರಮವಾಗಿ 5.5 ಮೀಟರ್ ಹಾಗೂ 3.5 ಮೀಟರ್‌ನಂತೆ ದುರಸ್ತಿಗೊಳಿಸಲು ಸರಕಾರಕ್ಕೆ 7 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಕಾರ್ಯಾಚರಣೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗದಿದ್ದರೂ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು. ನವಲಗುಂದ ಸಿಪಿಐ ಎಸ್.ಎಸ್.ಪಡೋಲ್ಕರ್, ಅಣ್ಣಿಗೇರಿ ಪಿಎಸ್‌ಐ ಎಂ.ಎಚ್.ಬಿದರಿ ಹಾಜರಿದ್ದರು.ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮಾಪತಿ, ಸಹಾಯಕ ಎಂಜಿನಿಯರಾದ ಗೌಡರ, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಆರ್.ಸಿ.ಹುರಕಡ್ಲಿ, ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ಎ.ಎಂ.ಅಗಡಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry