ಮಂಗಳವಾರ, ಮೇ 11, 2021
24 °C

ಅಣ್ಣ ಬಸವಣ್ಣನನ್ನೂ ಬಿಡದ ರಾಜಕೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಆಚರಣೆಯಲ್ಲಿ ಪಕ್ಷ ರಾಜಕೀಯ, ಭಿನ್ನಮತ, ದ್ವೇಷ ರಾಜಕಾರಣ ರಾರಾಜಿಸಿತು.ಶಾಸಕ ವೀರಣ್ಣ ಚರಂತಿಮಠ ಮತ್ತು  ಸಕಲ ಸಮಾಜ ಮಹಾಪುರುಷರ ಜಯಂತ್ಯುತ್ಸವ ಸಮಿತಿಯ ಪದಾಧಿಕಾರಿಗಳ ನಡುವಿನ ವೈಮನಸ್ಸು ಬಸವ ಜಯಂತಿ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನಗರದ ಜನತೆ ನಾಚಿಕೆಪಡುವಂತಾಯಿತು.ಜಿಲ್ಲಾಡಳಿತದ ಜೊತೆಗೂಡಿ ಬಸವ ಜಯಂತಿ ಆಚರಿಸಬೇಕೆಂಬ ಸಕಲ ಸಮಾಜ ಮಹಾಪುರುಷರ ಜಯಂತ್ಯು ತ್ಸವ ಸಮಿತಿಯ ಪದಾಧಿಕಾರಿಗಳ ಆಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಶಾಸಕ ವೀರಣ್ಣ ಚರಂತಿಮಠ ತಣ್ಣೀರೆರಚಿದರು.ಬಿವಿವಿ ಸಂಘದ ಆವರಣದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ಬರುತ್ತಿದ್ದಂತೆ ನಿಗದಿತ ಮೆರವಣಿಗೆ ಮಾರ್ಗವನ್ನು ಬಿಟ್ಟು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದತ್ತ ಸಾಗಿತು.ಆರಂಭದಲ್ಲಿ ನಿಗದಿಯಾದ ಮಾರ್ಗದಲ್ಲೇ ಸಕಲ ಸಮಾಜ ಮಹಾಪುರುಷರ ಜಯಂತೋತ್ಸವ ಸಮಿತಿಯ ಮೆರವಣಿಗೆ ಸಾಗಿತು.ಎರಡೂ ಮೆರವಣಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಪರಸ್ಪರ ಒಂದಾದಾಗ ಮುಖಂಡರ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆಯಿತು. ಈ ನಡುವೆ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಸಮಾದಾನ ಪಡಿಸಿದರು.ಪ್ರತೇಕವಾಗಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದ್ದ ಕಾರಣ  ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದರು.ಮೆರವಣಿಗೆಗಳು ಒಂದಾಗಿ ಸಾಗುವ ಮೂಲಕ ಮುಖಂಡರ ನಡುವಿನ ಭಿನ್ನಾಭಿಪ್ರಾಯವನ್ನು ಶಮನ ಮಾಡ ಬೇಕೆಂಬ ಬಹುಜನರ ಆಶಯ ಈಡೇ ರದೇ ಬೇಸರಕ್ಕೆ ಕಾರಣವಾಯಿತು.ಸಚಿವರ ರಾಜಕೀಯ: ಬಸವಣ್ಣನ ಹೆಸರಿನಲ್ಲಿ ಅದೂ ಬಸವನ ನಾಡಿನಲ್ಲಿ ಬಸವ ಜಯಂತಿಯಂದು ನಡೆದ ರಾಜಕೀಯದ ಬಗ್ಗೆ ಸಚಿವ ಗೋವಿಂದ ಕಾರಜೋಳ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಯಾವುದೇ ರಾಜಕೀಯ ನಡೆಯುತ್ತಿಲ್ಲ, ಪತ್ರಕರ್ತರೇ ರಾಜಕೀಯ ಮಾಡುತ್ತಿದ್ದೀರಿ ಎಂದು ಹೇಳುವ ಮೂಲಕ ಆಶ್ವರ್ಯ ಮೂಡಿಸಿದರು.ತೀವ್ರ ಖಂಡನೆ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ವೈ. ಮೇಟಿ ಮತ್ತು ಡಾ.ಎಂ.ಪಿ. ನಾಡಗೌಡ ಅವರು, ಸ್ಥಳೀಯ ಶಾಸಕರು ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡು ಅಣ್ಣನ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ, ಅಲ್ಲದೇ ಸಮಾಜದಲ್ಲಿ ಎಲ್ಲರನ್ನು ಒಂದುಗೂಡಿಸುವ ಬದಲು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಎಲ್ಲ ಸಮಾಜ, ಸಂಘಟನೆ ಮತ್ತು ಜನರನ್ನು ಒಂದುಗೂಡಿಸಿಕೊಂಡು ಬಸವ ಜಯಂತಿ ಆಚರಿಸಬೇಕಾಗಿದ್ದ ಜಿಲ್ಲಾಡಳಿತವು ಶಾಸಕ ಚರಂತಿಮಠ ಮತ್ತು ಸಚಿವ ಕಾರಜೋಳ ಅವರ ಕೈಗೊಂಬೆಯಂತೆ ವರ್ತಿಸಿರುವುದು ಬೇಸರ ತರಿಸಿದೆ ಎಂದರು.

ಒಂದಾದ ವಿರೋಧಿಗಳು: ಶಾಸಕ ವೀರಣ್ಣ ಚರಂತಿಮಠ ರಾಜಕೀಯ ವಿರೋಧಿಗಳೆಲ್ಲರೂ ಸಕಲ ಸಮಾಜದ ಮಹಾಪುರುಷರ ಜಯಂತ್ಯುತ್ಸವ ಸಮಿತಿ ಹೆಸರಿನಲ್ಲಿ ಒಂದಾಗುವ ಮೂಲಕ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸ್ಪಷ್ಟ ಸಂದೇಶ ರವಾನಿಸಿದರು. ವಿರೋಧಿಗಳ ಗುಂಪಿನಲ್ಲಿ ಕಾಂಗ್ರೆಸ್, ಜೆಡಿಎಸ್, ಜೆಡಿಯು ಮತ್ತು ಇತರೆ ಸಂಘಟನೆಗಳ ಮುಖಂಡರು ಪ್ರಧಾನವಾಗಿ ಇರುವುದು ವಿಶೇಷವಾಗಿತ್ತು.ರಾರಾಜಿಸಿದ ಬ್ಯಾನರ್: ಜಿಲ್ಲೆಯ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪರಸ್ಪರ ಸ್ಪರ್ಧೆಗೆ ಇಳಿದವರಂತೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಮತ್ತು ಶಿವಾಜಿ ಜಯಂತಿಗೆ ಶುಭಕೋರಿ ಬ್ಯಾನರ್ ಮತ್ತು ಬಟ್ಟಿಂಗ್ಸ್‌ಗಳನ್ನು ವಾರದ ಮೊದಲೇ ನೇತುಹಾಕಿದ್ದರು.ಶಿವಾಜಿ, ಬಸವಣ್ಣ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕಿಂತ ಆಕರ್ಷದಾಯಕ ಭಾವಚಿತ್ರಗಳನ್ನು ಮುದ್ರಿಸಿ ಮಹಾನ್ ಪುರುಷರಿಗೆ ಅವಮಾನ ಮಾಡುವಂತೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳು ಬೀದಿ ಮೇಲಿನ ಬ್ಯಾನರ್‌ಗಳಲ್ಲಿ ಕಂಡುಬರುವ ಮೂಲಕ ಸಣ್ಣವರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.