ಅತಿಕ್ರಮಣದಾರರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ
ಶಿರಸಿ: `ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅತಿಕ್ರಮಣದಾರರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅತಿಕ್ರಮಣದಾರರ ಪರವಾಗಿ ಮಾತನಾಡುವವರು ಪಕ್ಷ ಬಿಟ್ಟು ಹೊರಬಂದು ಮಾತನಾಡಲಿ; ಇಲ್ಲವಾದಲ್ಲಿ ಅತಿಕ್ರಮಣದಾರರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ~ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು.
ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಅವರು ಮಾತನಾಡಿದರು. `ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪರಿಶಿಷ್ಟ ಪಂಗಡ ಮತ್ತು ಇತರೇ ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕು ಮಾನ್ಯತಾ ಕಾಯಿದೆ ಪ್ರಕಾರ ಹಕ್ಕು ಪಡೆಯಲು ಅತಿಕ್ರಮಣದಾರರಿಗೆ ಮೂರು ತಲೆಮಾರುಗಳ ಸಾಕ್ಷ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕಾಯಿದೆ ತಿದ್ದುಪಡಿ ತರುವಂತೆ ಜೆಡಿಎಸ್ ಒತ್ತಡ ತರುತ್ತಿದ್ದರೂ ಕಾಂಗ್ರೆಸ್ ಗಮನ ವಹಿಸುತ್ತಿಲ್ಲ. ಬಿಜೆಪಿ ಕಾನೂನಿನ ಪ್ರಕಾರ ಗ್ರಾಮ ಮಟ್ಟದ ಸಮಿತಿ ರಚಿಸಲು ಹಿಂದೆ ಬಿದ್ದಿದ್ದು, ಲಕ್ಷಾಂತರ ಅರ್ಜಿಗಳು ಸರ್ಕಾರಿ ಕಚೇರಿಗಳಲ್ಲಿ ಕೊಳೆಯುತ್ತಿವೆ~ ಎಂದು ಆರೋಪಿಸಿದರು.
`ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುತ್ತಿದ್ದು, ಇದೇ 18ರಂದು ಜಾನ್ಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರ, ಇದೇ 24 ರಂದು ನಗರಸಭೆ ವ್ಯಾಪ್ತಿಯಲ್ಲಿ ನ. 24 ರಂದು ಗಾಂಧಿನಗರದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ~ ಎಂದರು.
ಸಚಿವರು ನಿಷ್ಕ್ರಿಯರು: `ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧಿಕಾರಿಗಳು, ಆಡಳಿತದ ಮೇಲೆ ನಿಯಂತ್ರಣವಿಲ್ಲ. ಶಿಕ್ಷಣ ಸಚಿವರಾಗಿ ಅವರ ಕಾರ್ಯ ಮುಜುಗರ ಹುಟ್ಟಿಸುವಂತಿದೆ. ವಿದ್ಯಾರ್ಥಿ ಸಂಘಟನೆಯಿಂದ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಉತ್ತಮ ಕಾರ್ಯನಿರ್ವಹಿಸಬಹುದೆಂಬ ಭರವಸೆ ಇತ್ತು. ಆದರೆ ಎಲ್ಲರಿಗೂ ಭ್ರಮನಿರಸನವಾಗಿದೆ~ ಎಂದು ಮಾಜಿ ಸಚಿವ ಪ್ರೇಮಾನಂದ ಜೈವಂತ ಆರೋಪಿಸಿದರು.
ಆಕಾಂಕ್ಷಿ ಅಲ್ಲ: `ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ನಾನಲ್ಲ. ಟಿಕೆಟ್ ಆಕಾಂಕ್ಷಿಯಾಗಿ ಜೆಡಿಎಸ್ ಸೇರ್ಪಡೆಯಾಗಿಲ್ಲ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುವೆ~ ಎಂದು ಮಾಜಿ ಶಾಸಕ ವಿವೇಕಾನಂದ ವೈದ್ಯ ಹೇಳಿದರು. ರಾಜೇಶ್ವರಿ ಹೆಗಡೆ, ನಾಗರಾಜ ಮುರ್ಡೇಶ್ವರ, ಸುಭಾಸ ಮಂಡೂರ, ಎಂ.ಜಿ.ನಾಯ್ಕ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.