ಅತಿಕ್ರಮಣವಾದ ಡಿ.ಸಿ. ಮನ್ನಾ ಭೂಮಿ ಸರ್ಕಾರದ ಸ್ವಾಧೀನಕ್ಕೆ

7

ಅತಿಕ್ರಮಣವಾದ ಡಿ.ಸಿ. ಮನ್ನಾ ಭೂಮಿ ಸರ್ಕಾರದ ಸ್ವಾಧೀನಕ್ಕೆ

Published:
Updated:
ಅತಿಕ್ರಮಣವಾದ ಡಿ.ಸಿ. ಮನ್ನಾ ಭೂಮಿ ಸರ್ಕಾರದ ಸ್ವಾಧೀನಕ್ಕೆ

ಕಡಬ (ಉಪ್ಪಿನಂಗಡಿ): 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಎಂಬಲ್ಲಿ ಅತಿಕ್ರಮಣವಾಗಿದ್ದ ಡಿ.ಸಿ. ಮನ್ನಾ ಭೂಮಿಯನ್ನು ಕಡಬ ವಿಶೇಷ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಸ್ವಾಧೀನ ಪಡಿಸಿಕೊಂಡು ಪ್ರಕರಣ ದಾಖಲಿಸಿದೆ.ಕರ್ಮಾಯಿ ಎಂಬಲ್ಲಿ ಎ.ಪಿ. ಚೆರಿಯನ್ ಅವರ ಸ್ವಾಧೀನದಲ್ಲಿದ್ದ, ಕೃಷಿ ತೋಟ 0.46 ಎಕ್ರೆ ಭೂಮಿಯನ್ನು ಹೈಕೋರ್ಟ್ ಆದೇಶದಂತೆ, ದ.ಕ.ಜಿಲ್ಲಾಧಿಕಾರಿ ನಿರ್ದೇಶನದಂತೆ ಎ.ಪಿ. ಚೆರಿಯನ್ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಶೇಷ ತಹಸೀಲ್ದಾರ್ ಬಿ.ಸಿ. ಶಿವಪ್ಪ ಹಾಗೂ ಕಂದಾಯ ಅಧಿಕಾರಿಗಳ ತಂಡದವರು ಸರ್ಕಾರದ ವಶಕ್ಕೆ ಪಡೆದುಕೊಂಡರು.ಕರ್ಮಾಯಿ ಎಂಬಲ್ಲಿ ಹಲವರು ಡಿ.ಸಿ. ಮನ್ನಾ ಭೂಮಿ ಅತಿಕ್ರಮಿಸಿದ್ದರು. ಇವರ ಪೈಕಿ ಎ.ಪಿ. ಚೆರಿಯನ್ ಎಂಬವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸರ್ಕಾರದ ವಶಕ್ಕೆ ಈ ಹಿಂದೆಯೇ ಒಪ್ಪಿಸಿದ್ದರು. ಚೆರಿಯನ್ ಭೂಮಿ ಬಿಟ್ಟುಕೊಡದೆ ಕಾನೂನು ಹೋರಾಟ ನಡೆಸುತ್ತಿದ್ದರು.ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸುತ್ತಾ ಬಂದಿತ್ತು. ಈಚೆಗೆ ನಡೆದ ಬೆಳವಣಿಗೆಯಲ್ಲಿ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅತಿಕ್ರಮಿತ ಭೂಮಿಯನ್ನು ಶುಕ್ರವಾರದ ಒಳಗಾಗಿ ತೆರವು ಮಾಡಬೇಕು ಎಂದು ಕಡಬ ವಿಶೇಷ ತಹಸೀಲ್ದಾರ್ ಶಿವಪ್ಪ ಎ.ಪಿ.ಚೆರಿಯನ್ ಅವರಿಗೆ ಅಂತಿಮ ಸೂಚನಾ ಪತ್ರ ನೀಡಿದ್ದರು. ಆದರೆ ತೆರವು ಕಾರ್ಯ ನಡೆದಿರಲಿಲ್ಲ.ಈ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಅಧಿಕಾರಿಗಳ ತಂಡ ತೆರವು ಕಾರ್ಯಕ್ಕೆ ಮುಂದಾದರು. ಪ್ರಕರಣ ನ್ಯಾಯಲಯದಲ್ಲಿ ಇರುವುದರಿಂದ ತೆರವು ಕಾರ್ಯ ಸಾಧ್ಯವಿಲ್ಲ ಎಂದು ಎ.ಪಿ. ಚೆರಿಯನ್ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಲೆಕ್ಕಿಸದ ತಹಸೀಲ್ದಾರ್ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದರು.ಚೆರಿಯನ್ ಉಪಸ್ಥಿತಿಯಲ್ಲಿ ಗಡಿ ಗುರುತು ಮಾಡಲಾಗಿ, ಅಡಕೆ, ಕೊಕ್ಕೊ ಇರುವ ಸಮೃದ್ಧ ಕೃಷಿ, ನೀರಾವರಿ ಪಂಪು ಇದ್ದ ಅತಿಕ್ರಮಿತ ಭೂಮಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.`ಪ್ರಜಾವಾಣಿ' ಜತೆ ಮಾತನಾಡಿದ ತಹಸೀಲ್ದಾರ್ ಬಿ.ಸಿ.ಶಿವಪ್ಪ `ನಾವು ಹೈಕೋರ್ಟ್ ಆದೇಶ ಹಾಗೂ ಜಿಲ್ಲಾಧಿಕಾರಿ ನಿರ್ದೇಶನ ಪಾಲಿಸಿದ್ದೇವೆ.  ಕಾರ್ಯಾಚರಣೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.ಕಾರ್ಯಾಚರಣೆ ವೇಳೆ ಕಂದಾಯ ನಿರೀಕ್ಷಕ ಕೊರಪ್ಪ ಹೆಗಡೆ, ಕಂದಾಯ ಅಧಿಕಾರಿಗಳಾದ ಚರಣ್, ಜಗದೀಶ್, ಶಿವಶಂಕರ್ ಜಾದವ್ ಇದ್ದರು.ಹೋರಾಟ ಮುಂದುವರಿಸುವೆ: ಸುದ್ದಿಗಾರರೊಂದಿಗೆ ಮಾತನಾಡಿದ ಎ.ಪಿ. ಚೆರಿಯನ್ `ಪ್ರಕರಣ ನ್ಯಾಯಾಲಯದಲ್ಲಿದೆ. ಮುಂದಿನ ಆದೇಶ ತನಕ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೂ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಪೊಲೀಸರೊಂದಿಗೆ ನನ್ನ ವಶದಲ್ಲಿದ್ದ ಭೂಮಿಗೆ ಅಕ್ರಮ ಪ್ರವೇಶ ಮಾಡಿ ಗಡಿಗುರುತು ಮಾಡಿ ಸರ್ಕಾರದ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಹೋರಾಟ ಮುಂದುವರಿಸಲಾಗುವುದು' ಎಂದು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry