ಗುರುವಾರ , ಜುಲೈ 16, 2020
22 °C

ಅತಿಕ್ರಮಣ ತೆರವಿಗೆ ಕ್ರಿಯಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿಕ್ರಮಣ ತೆರವಿಗೆ ಕ್ರಿಯಾ ಯೋಜನೆ

ಹುಬ್ಬಳ್ಳಿ: ಕಟ್ಟಡಗಳ ಅತಿಕ್ರಮಣವನ್ನು ತೆರವುಗೊಳಿಸಲು ಮುಂದಿನ ವಾರ ಯಾವುದೇ ಕ್ಷಣದಲ್ಲಿ ಮಹಾನಗರ ಪಾಲಿಕೆ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ಅದಕ್ಕಾಗಿ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದಾರೆ.ಕಾರ್ಯಾಚರಣೆಯ ರೂಪು-ರೇಷೆಗಳನ್ನು ನಿರ್ಧರಿಸಲು ಗುರುವಾರ ನಡೆದ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಈ ಮಾಹಿತಿಯನ್ನು ನೀಡಿದರು.`ನಿಯಮಾವಳಿ ಮೀರಿ ಕಟ್ಟಿದ 45 ಕಟ್ಟಡಗಳನ್ನು ಹುಬ್ಬಳ್ಳಿಯಲ್ಲಿ ಗುರುತಿಸಲಾಗಿದ್ದು, ಸ್ವಯಂಪ್ರೇರಣೆಯಿಂದ ಈಗಾಗಲೇ 14 ಕಟ್ಟಡಗಳ ಅತಿಕ್ರಮಣ ತೆರವುಗೊಳಿಸಲಾಗಿದೆ. ಮಿಕ್ಕ 31 ಕಟ್ಟಡಗಳ ಅತಿಕ್ರಮಣ ತೆರವಿಗೆ ನೀಡಿದ್ದ ನೋಟಿಸ್ ಅವಧಿ ಜೂನ್ 5ರಂದು ಕೊನೆಗೊಳ್ಳಲಿದೆ. ನಂತರ ಯಾವುದೇ ಸಂದರ್ಭದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಬಹುದು~ ಎಂದು ಅವರು ವಿವರಿಸಿದರು.`ಕಾರ್ಯಾಚರಣೆಗೆ ಬೇಕಾದ ಸಿಬ್ಬಂದಿ ಮತ್ತು ಸಲಕರಣೆಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು, ರಾಜಕೀಯ ಒತ್ತಡ ಸೇರಿದಂತೆ ಯಾವುದೇ ರೀತಿಯ ಅಡೆತಡೆಗಳನ್ನು ಲೆಕ್ಕಿಸದೆ ಯೋಜನಾಬದ್ಧವಾಗಿ ಅತಿಕ್ರಮಣ ತೆರವು ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಾಚರಣೆ ದಿನ ನಿಗದಿಗೆ ಶೀಘ್ರವೇ ಇನ್ನೊಂದು ಸಭೆಯನ್ನು ಕರೆಯಲಾಗುವುದು~ ಎಂದು ಅವರು ಹೇಳಿದರು.`ಆಯಾ ವಲಯ ಕಚೇರಿ ವ್ಯಾಪ್ತಿಯಲ್ಲಿರುವ ನಿಯಮಾವಳಿ ಮೀರಿದ ಕಟ್ಟಡಗಳು, ಅವುಗಳ ಎಲ್ಲ ದಾಖಲೆಗಳು, ಅತಿಕ್ರಮಣಗೊಂಡ ಪ್ರದೇಶ, ಕಾರ್ಯಾಚರಣೆಗೆ ಬೇಕಾದ ಸಿಬ್ಬಂದಿ ಮತ್ತು ಸಲಕರಣೆ ಕುರಿತಂತೆ ಶನಿವಾರದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ವರದಿಯನ್ನು ಸಲ್ಲಿಸಬೇಕು~ ಎಂದು ಅವರು ಎಲ್ಲ ವಲಯ ಅಧಿಕಾರಿಗಳಿಗೆ ಆದೇಶ ನೀಡಿದರು.`ಅತಿಕ್ರಮಣ ತೆರವು ಕಾರ್ಯಾಚರಣೆ ಬಹಳ ಸಂಕೀರ್ಣವಾದ ಕೆಲಸವಾಗಿದ್ದು, ಎಲ್ಲಿ ಹೋಗಿ ನಿಲ್ಲುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಗಟ್ಟಿ ನಿರ್ಧಾರ ಮಾಡಿ, ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿದರೆ ನಗರದ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸಲು ಸಾಧ್ಯವಿದೆ. ಕಾರ್ಯಾಚರಣೆಗೆ ಬೇಕಾದ ಪೊಲೀಸ್ ಬಲವನ್ನು ಒದಗಿಸಲು ನಮ್ಮ ಇಲಾಖೆ ಸಿದ್ಧವಿದೆ~ ಎಂದು ಪೊಲೀಸ್ ಆಯುಕ್ತ ಡಾ.ಕೆ. ರಾಮಚಂದ್ರರಾವ್ ತಿಳಿಸಿದರು.`ಕಾರ್ಯಾಚರಣೆಗೆ ಹೊರಡುವ ಮುನ್ನ ಪೂರಕ ದಾಖಲೆಗಳು, ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳು ನಿಮ್ಮ ಬಳಿ ಇವೆ ಎಂಬುದನ್ನು ಖಚಿತಪಡಿಸಿಕೊಂಡು ಬರಬೇಕು. ಅಗತ್ಯ ಹೋಂ ವರ್ಕ್ ಮಾಡಿಕೊಳ್ಳದೆ ಬಂದರೆ ನಿಯಮಾವಳಿ ಉಲ್ಲಂಘನೆ ಮಾಡಿದವರ ಮುಂದೆ ನಾವು ಜೋಕರ್‌ಗಳ ತರಹ ಕಾಣಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಕಾರ್ಯಾಚರಣೆಗೆ ಅಡಿಯಿಟ್ಟರೆ ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಶ್ನೆಯೇ ಬರಬಾರದು~ ಎಂದು ಅವರು ಸಲಹೆ ನೀಡಿದರು.`ಬೆಳಗಿನ ಆರು ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಆರಂಭವಾದರೆ ಒಳ್ಳೆಯದು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗದು. ಅಲ್ಲದೆ ಅಧಿಕ ಜನ ಸೇರಿ ಗೊಂದಲ ನಿರ್ಮಾಣವಾಗಲು ಅವಕಾಶವೂ ಇರುವುದಿಲ್ಲ~ ಎಂದು ಎಸಿಪಿಗಳಾದ ಎನ್.ಎಸ್. ಪಾಟೀಲ ಮತ್ತು ಶ್ರೀನಾಥ ಜೋಶಿ ಅಭಿಪ್ರಾಯಪಟ್ಟರು.

 

`2-3 ಕಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆದರೆ ಒಂದೇ ಪ್ರಕರಣದ ಕಡೆ ಕೇಂದ್ರೀಕರಣ ತಪ್ಪಿ ಗಲಾಟೆ ಆಗದಂತೆ ತಡೆಯಬಹುದು~ ಎಂದು ಅವರು ಹೇಳಿದರು.`ಹುಬ್ಬಳ್ಳಿಯ ದುರ್ಗದಬೈಲ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪಾರ್ಕಿಂಗ್ ಪ್ರದೇಶವನ್ನು ಬೀದಿಬದಿಯ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದು, ಆ ಪ್ರದೇಶದ ತೆರವು ಕಾರ್ಯಾಚರಣೆಯೂ ನಡೆಯಬೇಕು. ಒಮ್ಮೆ ತೆರವುಗೊಳಿಸಿದ ಪ್ರದೇಶದ ಕಡೆ ಮತ್ತೆ ಅತಿಕ್ರಮಣ ಆಗದಂತೆ ನಿಗಾ ಇಡಬೇಕು~ ಎಂದು ಎಸಿಪಿ (ಸಂಚಾರ) ಸಂಜೀವ ಪಾಟೀಲ ತಿಳಿಸಿದರು. ಡಿಸಿಪಿ ಪಿ.ಆರ್. ಬಟಕುರ್ಕಿ, ಪಾಲಿಕೆ ಮುಖ್ಯ ಎಂಜಿನಿಯರ್ ಎಲ್.ಆರ್. ನಾಯಕ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ಮೊಬೈಲ್‌ಗಳನ್ನು ಬಿಟ್ಟು ಬನ್ನಿ

ನಿಯಮಾವಳಿ ಉಲ್ಲಂಘನೆ ಮಾಡಿದ ಕಟ್ಟಡಗಳ ಮಾಲೀಕರು ರಾಜಕೀಯ ಒತ್ತಡ ಹಾಕಿಸಿ, ಕಾರ್ಯಾಚರಣೆಗೆ ತಡೆಯೊಡ್ಡುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆ ಸಮಯದಲ್ಲಿ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ ಮನೆಯಲ್ಲಿಯೇ ಬಿಟ್ಟು ಬರಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು.ಪ್ರಭಾವಿ ವ್ಯಕ್ತಿಗಳಿಂದ ಕರೆಬಂದ ಮಾತ್ರಕ್ಕೆ ಕಾನೂನುಬಾಹಿರವಾದ ಕಟ್ಟಡ ಕಾನೂನುಬದ್ಧ ಆಗುವುದಿಲ್ಲ. ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು ಎಂಬ ಸೂಚನೆ ಸಹ ಬಂತು. ಜಾತಿ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಒತ್ತಡವನ್ನು ಯಾರೂ ಗಣನೆಗೆ ತೆಗೆದುಕೊಳ್ಳಬಾರದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.