ಅತಿಕ್ರಮಣ ತೆರವು: ತಾರತಮ್ಯ

7

ಅತಿಕ್ರಮಣ ತೆರವು: ತಾರತಮ್ಯ

Published:
Updated:

ಬೆಳಗಾವಿ: ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ಭರದಿಂದ ನಡೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಹರ್ಷ ವ್ಯಕ್ತಗೊಂಡಿದೆ. ಇದೇ ಅವಧಿಯಲ್ಲಿ ಬಹುಮಹಡಿ ಕಟ್ಟಡಗಳಲ್ಲೂ ನಿಯಮದ ಉಲ್ಲಂಘನೆ ವ್ಯಾಪಕವಾಗಿ ನಡೆದಿದ್ದು, ಅವುಗಳನ್ನೂ ತಕ್ಷಣ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಕ್ರಮ ಕಟ್ಟಡಗಳನ್ನು ತೆರವು ಮಾಡುವುದರಿಂದ ಸುಗಮ ಸಂಚಾರ ಸಾಧ್ಯವಾಗುವ ಜತೆಗೆ ನಗರದ ಸೌಂದರ್ಯವನ್ನು ವೃದ್ಧಿಸಬಹುದಾಗಿದೆ. ವಾಹನ ನಿಲುಗಡೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಲಭ್ಯವಾಗಲಿದೆ. ಅಕ್ರಮ ಕಟ್ಟಡಗಳ ತೆರವಿನ ಜತೆಗೆ ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ನ್ನು ವಾಣಿಜ್ಯ ವಹಿವಾಟಿಗೆ ಬಳಸಿಕೊಳ್ಳಲಾಗುತ್ತಿದ್ದು, ಅವುಗಳ ತೆರವು ಕೆಲಸವನ್ನು ಕೂಡಲೇ ನಡೆಸಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.ಭಾರಿ ಅಕ್ರಮ: ಪಾಲಿಕೆ ಜಾಗೆಯಲ್ಲಿ ಅಕ್ರಮವಾಗಿ ಇಲ್ಲವೇ ಬಾಡಿಗೆ ಪಡೆದು ಅಂಗಡಿ ನಡೆಸುತ್ತಿದ್ದ ವರ್ತಕರು ಹಾಗೆ ಪಡೆದಿದ್ದ ಜಾಗೆಯನ್ನು ಬೇರೊಬ್ಬರಿಗೆ ಕೊಟ್ಟು ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದರು. ಈ ದಂಧೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದು. ನಗರದಾದ್ಯಂತ ಇಂತಹ ಅಕ್ರಮ ಚಟುವಟಿಕೆ ವ್ಯಾಪಕವಾಗಿ ನಡೆದುಕೊಂಡು ಬಂದಿತ್ತು.ಅದಕ್ಕೆಲ್ಲ ಪ್ರಸ್ತುತ ನಡೆಯುತ್ತಿರುವ ಕಾರ್ಯಾಚರಣೆ ತಕ್ಕ ಉತ್ತರ ನೀಡಲಿದೆ. ಆದರೆ ಪ್ರಸ್ತುತ ತೆರವು ಮಾಡಿರುವ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪುನಃ ಅಂಗಡಿಗಳನ್ನು ಹಾಕಿಕೊಳ್ಳಲು ಅನುಮತಿ ನೀಡಬಾರದು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.ಎಲ್ಲರಿಗೂ ಅನ್ವಯಿಸಲಿ: ನಗರದಲ್ಲಿ ಪ್ರತಿಷ್ಠಿತ ಹೋಟೆಲ್‌ಗಳು, ಸ್ವೀಟ್ ಮಾರ್ಟ್‌ಗಳು ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳಲ್ಲಿ ಕಟ್ಟಡ ನಿಯಮ ಉಲ್ಲಂಘನೆ ವ್ಯಾಪಕವಾಗಿ ನಡೆದಿದೆ. ನಗರದಲ್ಲಿ ಅಂತಹ ಐದು ಸಾವಿರಕ್ಕೂ ಹೆಚ್ಚು ಕಟ್ಟಡಗಳಿವೆ ಎಂಬ ಅಂದಾಜಿದೆ. ಅಂತಹ ಅಕ್ರಮ ಸಂಕೀರ್ಣಗಳ ವಿರುದ್ಧವೂ ಕ್ರಮ ಜರುಗಿಸಬೇಕು. ಪಾಲಿಕೆಯ ತೆರವು ಕಾರ್ಯಾಚರಣೆ ಅಸ್ತ್ರ ಬರೀ ಡಬ್ಬಾ ಅಂಗಡಿಗಳ ವಿರುದ್ಧ ಮಾತ್ರ ಪ್ರಯೋಗವಾಗಬಾರದು. ಹೋಟೆಲ್, ವಾಣಿಜ್ಯ ಸಂಕೀರ್ಣಗಳ ವಿರುದ್ಧವೂ ಮುಲಾಜಿಲ್ಲದೆ ನಡೆಯಬೇಕು ಎಂಬುದು ನಗರದ ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ.ಸಂದೇಹ: ಅಕ್ರಮ ಚಟುವಟಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಾಲಿಕೆಯ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಯಾವುದೋ ಪ್ರಭಾವಕ್ಕೆ ಒಳಗಾಗಿ ಹಾಗೆ ವರ್ತಿಸುತ್ತಿದ್ದಾರೆ. ಅತಿಕ್ರಮಣ ತೆರವು ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry