ಅತಿಥಿ ಉಪನ್ಯಾಸಕರಿಂದ ಧರಣಿ

7

ಅತಿಥಿ ಉಪನ್ಯಾಸಕರಿಂದ ಧರಣಿ

Published:
Updated:

ಹೊನ್ನಾವರ: ಸಕಾಲದಲ್ಲಿ ಗೌರವಧನ ನೀಡುವುದು ಸೇರಿದಂತೆ ನ್ಯಾಯಯುತವಾದ  ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಗುರುವಾರ ತರಗತಿ ಬಹಿಷ್ಕರಿಸಿ ಕಾಲೇಜಿನ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ತಹಸೀಲ್ದಾರ ಕಚೇರಿಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾನಿರತ ಉಪನ್ಯಾಸಕರು ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.ಮುಷ್ಕರ ನಿರತ ಉಪನ್ಯಾಸಕರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವ ಭರವಸೆ ನೀಡಿದರು.

ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಕೇವಲ 5 ಸಾವಿರ ರೂಪಾಯಿ ಗೌರವಧನ ಪಡೆದು ಪಠ್ಯ ಹಾಗೂ ಪಠ್ಯೇತರ ಕಾರ್ಯ ನಿರ್ವಹಿಸಿ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಕಾರಣರಾಗಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರುವವರೆಗೆ ತರಗತಿ ಬಹಿಷ್ಕಾರ ಹಾಗೂ ಧರಣಿ ಮುಂದುವರಿಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸೇವಾ ಭದ್ರತೆ ಹಾಗೂ ಸೇವಾ ಜೇಷ್ಠತೆ ಒದಗಿಸಬೇಕು.  ವೇತನವನ್ನು 15 ಸಾವಿ ರೂ.ಗೆ ಏರಿಸಬೇಕು. ಇದನ್ನು ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಿಂದ ಪೂರ್ವಾನ್ವಯ ಆಗುವಂತೆ ನೀಡಬೇಕು.  ಕನಿಷ್ಠ ವೇತವನ್ನು ಯುಜಿಸಿ ನಿಯಮಾವಳಿಗಳ ಪ್ರಕಾರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ಮಾಸಿಕ ವೇತನವನ್ನು ನಿಗದಿತವಾಗಿ ನೀಡುವುದರ ಜೊತೆಗೆ ವರ್ಷದ ಎಲ್ಲ 12 ತಿಂಗಳು ನೀಡಬೇಕು ಎನ್ನುವ  ಬೇಡಿಕೆಗಳನ್ನು ಧರಣಿ ನಿರತ ಅತಿಥಿ ಉಪನ್ಯಾಸಕರು ಸರ್ಕಾರದ ಮುಂದಿಟ್ಟಿದ್ದಾರೆ. ಅತಿಥಿ ಉಪನ್ಯಾಸಕರ ಸಂಘದ ಕರೆಯ ಮೇರೆಗೆ ಹೊನ್ನಾವರ ಹಾಗೂ ಮಂಕಿಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 44 ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry