ಶುಕ್ರವಾರ, ಏಪ್ರಿಲ್ 16, 2021
31 °C

ಅತಿಥಿ ಉಪನ್ಯಾಸಕರಿಗೆ ರೂ. 15 ಸಾವಿರ ವೇತನ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಸರ್ಕಾರದ ವಿವಿಧ ಕಾಲೇಜುಗಳಲ್ಲಿ ಕಳೆದ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮಾಸಿಕ ಕನಿಷ್ಠ ರೂ. 15 ಸಾವಿರ ವೇತನ ನೀಡಬೇಕೆಂದು ಎಬಿವಿಪಿ ತಾಲ್ಲೂಕು ಘಟಕ ಆಗ್ರಹಿಸಿದೆ.ಈ ಕುರಿತು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಎಬಿವಿಪಿ ತಾಲ್ಲೂಕು ಘಟಕವು, ಕಳೆದ ಹಲವು ದಿನಗಳಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ನ್ಯಾಯೋಚಿತವಾಗಿದೆ ಎಂದಿದೆ.ಅರೆಕಾಲಿಕ ಉಪನ್ಯಾಸಕರು ಎಂದು ತಾರತಮ್ಯ ತೋರದೆ ಈವರೆಗೆ ಸೇವೆಸಲ್ಲಿಸಿದ ಎಲ್ಲರನ್ನೂ ಕಾಯಂಗೊಳಿಸಬೇಕು. ಈ ಪ್ರಕ್ರಿಯೆ ಮುಗಿಯುವವರೆಗೂ 2010ರ ಆಗಸ್ಟ್ ಪೂರ್ವ ಅನ್ವಯವಾಗುವಂತೆ ರೂ, 15 ಸಾವಿರ ವೇತನ ನೀಡುವಂತೆ ಒತ್ತಾಯಿಸಲಾಗಿದೆ.ರೆಡ್ಡಿಯನ್ನು ಕೈಬಿಡಿ: ನ್ಯಾಯಾಲಯದ ವಾರೆಂಟ್ ಲೆಕ್ಕಿಸದೇ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರಿ ನ್ಯಾಯಾಧೀಶರಿಂದ ಛೀಮಾರಿಗೊಳಗಾದ ಪ್ರವಾಸೋದ್ಯಮ ಸಚಿವ ಜಿ. ಜನಾರ್ಧನರೆಡ್ಡಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಎಐಎಎಲ್‌ಎ ಆಗ್ರಹಿಸಿದೆ.ರೆಡ್ಡಿ ನಿತ್ಯ ಕಾನೂನು ಉಲ್ಲಂಘಿಸಿ, ವಿರೋಧ ಪಕ್ಷವನ್ನು ಲೆಕ್ಕಿಸದೆ ಆಡಳಿತ ನಡೆಸುತ್ತಿದ್ದಾರೆ. ವಾರೆಂಟ್ ಉಲ್ಲಂಘನೆ ಗಂಭೀರ ಎಂದು ಪರಿಗಣಿಸಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಸರ್ಕಾರಕ್ಕೂ, ಸಚಿವರಿಗೂ ಛೀಮಾರಿ ಹಾಕಿದ್ದಾರೆ ಎಂದು ಸಂಘಟನೆಯ ಮುಖ್ಯಸ್ಥ ಜೆ. ಭಾರದ್ವಾಜ್ ಆರೋಪಿಸಿದ್ದಾರೆ.ಬಿಸಿಸಿ ಥೀಮ್-1: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮಗ್ರ ಜಿಲ್ಲಾ ಎಚ್‌ಐವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಸುಮಾರು 42 ಸಂಪರ್ಕ ಕಾರ್ಯಕರ್ತರಿಗೆ ಸಣಾಪುರದ ಗೌರಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಮೂರು ದಿನದ ತರಬೇತಿ ನೀಡಲಾಯಿತು.ಬೆಂಗಳೂರು ಮೂಲದ ಪಾಪ್ಯುಲೇಶನ್ ಸರ್ವೀಸಸ್ ಇಂಟರ್‌ನ್ಯಾಶನಲ್ ಸಂಸ್ಥೆಯು ಕಾರ್ಯಕರ್ತರಿಗೆ ‘ನಡವಳಿಕೆ ಬದಲಾವಣೆ ಸಂಹವನ’ ಎಂಬ ವಿಷಯದ ಬಗ್ಗೆ ತರಬೇತಿ ನೀಡಿತು. ಕೊಪ್ಪಳದ ಕರುಣಾ ಟ್ರಸ್ಟ್ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು.ಶಿಕ್ಷಣ ವಿರೋಧಿ ನೀತಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಸದನದಲ್ಲಿ ಮಂಡಿಸಿದ ರಾಜ್ಯ ಸರ್ಕಾರದ 2011-12ರ ಮುಂಗಡ ಪತ್ರವು ಶಿಕ್ಷಣ ವಿರೋಧಿ ಬಜೆಟ್ ಆಗಿದೆ ಎಂದು ಎಸ್‌ಎಫ್‌ಐ ತಾಲ್ಲೂಕು ಘಟಕವು ಆರೋಪಿಸಿದೆ.ಶಿಕ್ಷಣ ಕ್ಷೇತ್ರಕ್ಕೆ ನಿರಾಸೆ ತಂದಿದೆ. ಶಿಕ್ಷಣದ ಅಭಿವೃದ್ಧಿಗೆ ಹೊಸ ಯೋಜನೆಗಳಿಲ್ಲ. ಬಜೆಟ್‌ನ ಶೇ, 14ರಷ್ಟು (ರೂ. 12284 ಕೋಟಿ) ಮಾತ್ರ ಮೀಸಲಿಡಲಾಗಿದೆ. ಮೂಲ ಸೌಕರ್ಯ ಹೊಂದುವ  ವಸತಿ ನಿಲಯಗಳ ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗಿವೆ ಎಂದು ಎಸ್‌ಎಫ್‌ಐ ದೂರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.