ಬುಧವಾರ, ಏಪ್ರಿಲ್ 21, 2021
25 °C

ಅತಿಥಿ ಉಪನ್ಯಾಸಕರ ಅತಂತ್ರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ 4000ಕ್ಕೂ ಹೆಚ್ಚು ಮಂದಿ ಏಳೆಂಟು ವರ್ಷಗಳಿಂದ ದುಡಿಯುತ್ತಿದ್ದಾರೆ. ಇವರ ಗೋಳು ಕೇಳುವವರೇ ಇಲ್ಲ. ಬೇಡಿಕೆಗಳ ಈಡೇರಿಕೆಗಾಗಿ ಇವರು ಪ್ರತಿಭಟನೆ, ತರಗತಿ ಬಹಿಷ್ಕಾರ ಮಾಡುತ್ತಲೇ ಬಂದಿದ್ದಾರೆ. ಈ ವರ್ಷವಂತೂ ತಮ್ಮ ಬೇಡಿಕೆಗಾಗಿ ತಿಂಗಳಪೂರ್ತಿ ಬೆಂಗಳೂರಿನಲ್ಲಿ  ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರೂ  ಸರ್ಕಾರ ಕಿಂಚಿತ್ತೂ ಗಮನ ಹರಿಸದಿರುವುದು ನೋವಿನ ಸಂಗತಿ.ಡಾ. ನಂಜುಂಡಪ್ಪ ವರದಿ ಅನುಸಾರ ಉನ್ನತ ಶಿಕ್ಷಣದ ಅಭಿವೃದ್ದಿಗಾಗಿ ಸರ್ಕಾರ 2006ರಲ್ಲಿ ಹೊಸದಾಗಿ 200ಕ್ಕೂ ಹೆಚ್ಚು ಕಾಲೇಜುಗಳನ್ನು ತೆರೆದಾಗ ಈ ಕಾಲೇಜುಗಳಿಗೆ ಪಾಠಪ್ರವಚನಕ್ಕೆ ಮುಂದು ಬಂದವರು ಈ ಅತಿಥಿ ಉಪನ್ಯಾಸಕರು. ಅಂದು ಅವರ ಸಂಬಳ ಕೇವಲ ರೂ 2500.  ದಿಕ್ಕಿಲ್ಲದ ಕಾಲೇಜುಗಳಿಗೆ ಅಂದು ಆಧಾರಸ್ತಂಭವಾಗಿದ್ದ ಈ ಉಪನ್ಯಾಸಕರು, ತರಗತಿ ಪ್ರವಚನ, ಮೌಲ್ಯಮಾಪನ ಇತ್ಯಾದಿ ಕಾರ್ಯಗಳಿಗೆ ನೆರವಾಗಿ ದುಡಿದಿದ್ದಾರೆ. ಬೆರಳೆಣಿಕೆಯಷ್ಟು ಖಾಯಂ ಉಪನ್ಯಾಸಕರ್ದ್ದಿದುದರಿಂದ ಈ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಸೇವೆ ಅತ್ಯಮೂಲ್ಯ.  4 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಯೋಮಾನದ ಅಂಚಿನಲ್ಲಿದ್ದು, ಅವರು ಈ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ನಮ್ಮ ಸೇವೆ ಹಂತ ಹಂತವಾಗಿ ಕಾಯಂಗೊಳಿಸಬೇಕು. ಅಲ್ಲಿಯವರೆಗೆ ಯುಜಿಸಿ ನಿಯಮದ ಅನ್ವಯ ಮಾಸಿಕ ಗೌರವಧನ 20 ಸಾವಿರ ನೀಡಬೇಕು, ಪ್ರತಿ ತಿಂಗಳು ವೇತನ, ಸೇವಾ ಭದ್ರತೆ ನೀಡಬೇಕು, ಪ್ರತಿ ವರ್ಷ ಸಂದರ್ಶನ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸೇವಾನುಭವ ಗೌರವಿಸದೇ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ತಪ್ಪಿಸಿ ಸೇವಾ ಹಿರಿತನದ ಮೇಲೆ ಮುಂದುವರೆಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.