ಮಂಗಳವಾರ, ಮಾರ್ಚ್ 2, 2021
28 °C
15 ವರ್ಷವಾದರೂ ಇನ್ನೂ ಸೇವೆ ಕಾಯಂ ಆಗಿಲ್ಲ, ಬರಗೂರು ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಬೇಕು

ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

ರಾಮನಗರ: ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಸೇವೆಯನ್ನು ಸರ್ಕಾರ ವಿಲೀನಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ಕಂದಾಯ ಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಉಪನ್ಯಾಸಕರು, ಈ ಕುರಿತು ಉನ್ನತ ಶಿಕ್ಷಣ ಇಲಾಖೆ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 2003ರಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಲಾಗಿದೆ. ಅಲ್ಲದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಶೇ 4 ರಂತೆ ಗರಿಷ್ಠ 40 ಗರಿಷ್ಠ ಕೃಪಾಂಕ ನಿಡಿ ನೇಮಕಾತಿ ಮಾಡಿಕೊಂಡಿರುವ ಮಾದರಿಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಘಟಕದ ಅಧ್ಯಕ್ಷ ನಿಜಗುಣ ಅವರು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸುವ ಸಂಬಂಧ ಕಾನೂನು ತೊಡಕುಗಳ ನಿವಾರಣೆಗಾಗಿ ಹಿರಿಯ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ಕೂಡಲೇ ರಚಿಸಬೇಕು ಎಂದು ಅವರು ಆಗ್ರಹಿಸಿದರು.ಸೇವೆಯಲ್ಲಿ ವಿಲೀನಗೊಳ್ಳುವವರೆಗೆ ಮಾಸಿಕ 25 ಸಾವಿರ ವೇತನವನ್ನು ವರ್ಷದ 12 ತಿಂಗಳು ನೀಡಬೇಕು. ತಿಂಗಳ ಮೊದಲ ವಾರವೇ ವೇತನ ನೀಡಬೇಕು. ಕಾಯಂ ನೇಮಕಾತಿ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿಯ ಸಂದರ್ಭದಲ್ಲಿ ವಯೋಮಿತಿ ಮೀರಿದ, ಮೀರುತ್ತಿರುವ ಅತಿಥಿ ಉಪನ್ಯಾಸಕರನ್ನೇ ಸೇವಾ ಹಿರಿತನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತಿ ಮೂರು ತಿಂಗಳು ಹೆರಿಗೆ ರಜೆ ನೀಡಬೇಕು, ನಾಲ್ಕು ತಿಂಗಳ ಅಂದರೆ ಸೆಪ್ಟೆಂಬರ್, ಅಕ್ಟೊಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ನಿಗದಿಪಡಿಸಿರುವ ಪದವಿ ಉಪನ್ಯಾಸಕರ ಪರೀಕ್ಷೆಯನ್ನು ತಕ್ಷಣ ರದ್ದುಪಡಿಸಿ, ಹಾಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಮಾತಿಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ರವೀಂದ್ರ, ಸುಲೋಚನ, ಡಾ. ನಾರಾಯಣಗೌಡ, ಡಾ. ರಂಗಸ್ವಾಮಿ, ಹೇಮಲತಾ, ಡಾ. ಅಂಕನಹಳ್ಳಿ ಪಾರ್ಥ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.