ಅತಿಯಾದ ತೂಕ; ಪರಿಹಾರ ಏನು...?

7

ಅತಿಯಾದ ತೂಕ; ಪರಿಹಾರ ಏನು...?

Published:
Updated:

ಮೂವತ್ತೈದರ ಹರೆಯದ ಸುರೇಖಾ ಕೊಂಚ ನಡೆದರೂ ವಿಪರೀತ ಸುಸ್ತು. ಮನೆಯಲ್ಲಿ ಬಗ್ಗಿ ಬಗ್ಗಿ ಕೆಲಸ ಮಾಡತೊಡಗಿದರೆ ಐದೈದು ನಿಮಿಷಕ್ಕೂ ಬೇಕು ವಿಶ್ರಾಂತಿ. ಮೆಟ್ಟಿಲು ಏರಿದರಂತೂ ಉಸ್ಸಪ್ಪಾ ಎಂಬ ಏದುಸಿರು.. ಊಟದ ಮಿತಿ ಸ್ವಲ್ಪ ಹೆಚ್ಚಾದರೂ ಹಾಸಿಗೆ ಮೇಲೆ ಉರುಳಾಡುವ ಧಾವಂತ; ಎಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗುವುದೋ ಎಂಬ ಆತಂಕ..!ಇದಕ್ಕೆಲ್ಲ ಕಾರಣ ಆಕೆಯ ಸಿಹಿತಿಂಡಿ ಮೇಲಿನ ವ್ಯಾಮೋಹ, ಕುರುಕುಲು ತಿಂಡಿಗಳ ಮೇಲೆ ಆಸೆ, ಜಂಕ್‌ಫುಡ್ ಪ್ರೀತಿ. ಇದರ ಪರಿಣಾಮ.. ಅತಿಯಾದ ತೂಕ. ಮೈಯಲ್ಲಿ ತುಂಬಿರುವ ಬೊಜ್ಜು. ದೇಹದಲ್ಲಿ ಮನೆ ಮಾಡಿರುವ ಮಧುಮೇಹ, ರಕ್ತದೊತ್ತಡ.ನಿಯಂತ್ರಣ ಹೇಗೆ?

ಅತಿ ತೂಕ ನಿಯಂತ್ರಣಕ್ಕೆ ಸ್ವಾಭಾವಿಕ ಪರಿಹಾರ ಎಂದರೆ ಜೀವನಶೈಲಿಯ ಬದಲಾವಣೆ. ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಪ್ರಾಣಾಯಾಮ, ಯೋಗ ಮಾಡುವುದು, ಬಿರುಸಿನ ನಡಿಗೆ ಜತೆಗೆ ಮಾನಸಿಕ ಚಿಂತನೆ ನಡೆಸುವುದು. ಇವೆಲ್ಲದರ ಜತೆಗೆ ಧಾರಾಳವಾಗಿ ಶುದ್ಧ ನೀರು ಕುಡಿಯಬೇಕು. ಇದರಿಂದ ನಮ್ಮ ದೇಹದಲ್ಲಿ ಶೇಖರವಾದ ಬೊಜ್ಜು ಕರಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಬೆಂಗಳೂರಿನ ಬನ್ನೇರುಘಟ್ಟ ಸಮೀಪ ನಿಸರ್ಗ ಆಯುರ್ಧಾಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಸದಾನಂದ ಜಿಗಜಿನ್ನಿ.

 

ವಾರದಲ್ಲಿ ಒಂದು ದಿನ ಉಪವಾಸವಿದ್ದು, ದ್ರವಾಹಾರ ಮಾತ್ರ ಸೇವಿಸಬೇಕು. ತರಕಾರಿ ಜ್ಯೂಸ್, ಸೂಪ್ ಕುಡಿಯಬಹುದು. ಊಟಕ್ಕೆ ಮೊದಲು ಒಂದು ತುಂಡು ಹಸಿ ಶುಂಠಿ ತಿನ್ನಬೇಕು. ಇದರಿಂದ ಬೊಜ್ಜು ನಿವಾರಣೆಯಾಗುತ್ತದೆ ಎನ್ನುತ್ತಾರೆ ಅವರು.ನೀಲ್ಸನ್ ಸಮೀಕ್ಷೆ

 ದೇಹತೂಕ  ಹೆಚ್ಚಾಗುತ್ತಿರುವ ಬಗ್ಗೆ ಭಾರತದ ನಗರವಾಸಿಗಳು ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ ಎಂದು ಇತ್ತೀಚಿನ ನೀಲ್ಸನ್ ಜಾಗತಿಕ ಸಮೀಕ್ಷೆ ತಿಳಿಸಿದೆ. ತೂಕ ಇಳಿಸಿಕೊಳ್ಳಲು ಹೆಚ್ಚಿನ ಮಂದಿ ದೈಹಿಕ ವ್ಯಾಯಾಮದತ್ತ ಒಲವು ತೋರುತ್ತಿದ್ದಾರೆ  ಎನ್ನುತ್ತದೆ ಈ ಸಮೀಕ್ಷೆ.ಅಂತರ್ಜಾಲದಲ್ಲಿ ಸಂಪರ್ಕಿಸಲಾದ ಭಾರತದ ಗ್ರಾಹಕರಲ್ಲಿ ಶೇ 42ರಷ್ಟು ಮಂದಿ ತಮ್ಮದು ಬೊಜ್ಜುದೇಹ ಎಂಬುದಾಗಿ ಭಾವಿಸಿದ್ದಾರೆ.  ತೂಕ ನಿಯಂತ್ರಿಸಲು ಯತ್ನಿಸುತ್ತಿರುವವರಲ್ಲಿ ಹೆಚ್ಚಿನ ಮಂದಿ ಆಯ್ಕೆ ಮಾಡಿಕೊಂಡಿರುವುದು ದೈಹಿಕ ಕಸರತ್ತು. ನಂತರದ ಆಯ್ಕೆ ಆಹಾರ ಪಥ್ಯ ಎಂದು ಈ ಸಮೀಕ್ಷೆ ತಿಳಿಸಿದೆ.  ನೈಸರ್ಗಿಕ, ಸಾವಯವ ಆಹಾರಗಳತ್ತ ಒಲವು ವ್ಯಕ್ತವಾಗುತ್ತಿದ್ದು, ಸಂಸ್ಕರಿತ ಆಹಾರ ಬಳಕೆ ಕಡಿಮೆ ಮಾಡುವ ಆಕಾಂಕ್ಷೆಯೂ ಹೆಚ್ಚಾಗುತ್ತಿದೆ.   2011ರ ನೀಲ್ಸನ್ ಜಾಗತಿಕ ಸಮೀಕ್ಷೆ  ಒಟ್ಟು 56 ದೇಶಗಳ 25 ಸಾವಿರ ಜನರನ್ನು ಈ ಸಂಬಂಧ ಅಂತರ್ಜಾಲದಲ್ಲಿ ಸಂಪರ್ಕಿಸಿತ್ತು. ಇದರಲ್ಲಿ ಶೇ.48ರಷ್ಟು ಮಂದಿ ತೂಕ ಇಳಿಸುವ ಪ್ರಯತ್ನ ನಡೆಸಿದ್ದು, ಶೇ.78ರಷ್ಟು ಮಂದಿ ಡಯಟ್ ಮೂಲಕವೇ ತೂಕ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ತೂಕನಿಯಂತ್ರಣಕ್ಕೆ ಡಯೆಟ್‌ಗಿಂತ ವ್ಯಾಯಾಮ ಬಯಸುವ ದೇಶಗಳಲ್ಲಿ ಥಾಯ್‌ಲೆಂಡ್ ಮತ್ತು ದಕ್ಷಿಣ ಕೊರಿಯಾ ಸೇರಿವೆ. ಆದರೆ ಉತ್ತರ ಅಮೆರಿಕಾ ಮತ್ತು ಯೂರೋಪಿನ ಕೆಲವು ದೇಶಗಳ ಜನರು ಆಹಾರ ಪದ್ಧತಿ ಬದಲಾವಣೆಗೆ ಒತ್ತು ನೀಡುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ.ಭಾರತೀಯ ನಗರವಾಸಿಗಳಲ್ಲಿ ಆರೋಗ್ಯವಂತರಾಗಿರಬೇಕೆಂಬ ಕಾಳಜಿ ತೀವ್ರವಾಗಿದೆ. ಆದರೆ ಆಹಾರ ಪದ್ಧತಿ ಬದಲಾವಣೆಗಳಿಗಿಂತ ದೈಹಿಕ ವ್ಯಾಯಾಮ ಹೆಚ್ಚು ಪರಿಣಾಮಕಾರಿ ಎಂಬುದು ಹೆಚ್ಚಿನವರ ಅನಿಸಿಕೆ. ಆಹಾರಕ್ರಮ ಬದಲಾವಣೆಗಳಿಗೆ ಒತ್ತು ನೀಡುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳ ಜನರ ಮನೋಭಾವಗಳಿಗೆ ಇದು ಪೂರ್ಣ ವ್ಯತಿರಿಕ್ತವಾಗಿರುವುದು ವಿಶೇಷ.ಆಹಾರ ಪದ್ಧತಿ ಬದಲು

ನಗರಗಳಲ್ಲಿರುವ ಭಾರತೀಯರು ತೂಕ ಇಳಿಸಲು ಹರಸಾಹಸ ಮಾಡುತ್ತಿದ್ದಾರೆ. ಇದಕ್ಕಾಗಿ ಕೆಲವರು ಪಥ್ಯದ ಮೊರೆಯೂ ಹೋಗಿದ್ದಾರೆ. ಸಮೀಕ್ಷೆ ಪ್ರಕಾರ, ತಮ್ಮ ದೈನಂದಿನ ಊಟದಲ್ಲಿ ಕೊಬ್ಬಿನಂಶ ಇರುವ ಪದಾರ್ಥಗಳನ್ನು ಕಡಿಮೆ ಮಾಡಿದವರು  ಶೇ 77. ಚಾಕೊಲೇಟ್ ಮತ್ತು ಸಿಹಿತಿಂಡಿ ಕಡಿಮೆ ಮಾಡಿದವರು ಶೇ. 67ರಷ್ಟು ಮಂದಿ.

 

ಕೃತಕವಲ್ಲದ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳಾಗಲಿ ಅಥವಾ ಕಡಿಮೆ  ಕ್ಯಾಲೊರಿ ಇರುವ ಕೃತಕಪರ್ಯಾಯಗಳಾಗಲಿ ಆರೋಗ್ಯಕರ ಆಯ್ಕೆ ಅಲ್ಲ ಎಂಬುದು ಶೇ 40ರಷ್ಟು ಭಾರತೀಯರ ಅನಿಸಿಕೆ.ನಗರಗಳಲ್ಲಿನ ಭಾರತೀಯರಲ್ಲಿ ಬಹುತೇಕರು ಇತ್ತೀಚೆಗೆ ಸಾವಯವ ಆಹಾರ ಕ್ರಮದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಶೇ 60ರಷ್ಟು ಮಂದಿ ತಮ್ಮ ತೂಕ ಇಳಿಸಲು ತಾಜಾ ಮತ್ತು ಸಾವಯವ ಆಹಾರ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಸಂಸ್ಕರಿತ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಅರ್ಧದಷ್ಟು ಮಂದಿ ಬಿಡುತ್ತಿದ್ದಾರೆ.ಕೊಲೆಸ್ಟ್ರಾಲ್ ಕಡಿಮೆ ಇರುವ ಎಣ್ಣೆ, ಹಣ್ಣಿನ ರಸ ಯೋಗರ್ಟ್ಸ್, ಸೋಯಾ ಹಾಲು ಮುಂತಾದವುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಜನ ಹೆಚ್ಚು ಹೆಚ್ಚು ಡಯಟ್ ಕಾನ್‌ಷಿಯಸ್ ಆಗಿದ್ದಾರೆ. ತೂಕ ಹೆಚ್ಚಳದ ಬಗ್ಗೆ ಆತಂಕವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತೂಕ ಇಳಿಸಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜನ ಜಾಗೃತರಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ.ಡಯಟ್, ವ್ಯಾಯಾಮ

ಅತಿಯಾದ ತೂಕ ನಿಯಂತ್ರಣಕ್ಕೆ ಬಂದು ಆರೋಗ್ಯಯುತವಾಗಿರಲು ಡಯಟ್ ಮತ್ತು ವ್ಯಾಯಾಮ ಎರಡೂ ಬೇಕೇ ಬೇಕು. ಬರೀ ವ್ಯಾಯಾಮದಿಂದ ಸದ್ಯ ಇರುವ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಆದರೆ ಕಡಿಮೆ ಆದ ಮೇಲೆ ತೂಕವನ್ನು ಅದೇ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ ಆಹಾರದಲ್ಲಿ ಮಿತಿ ಇರಬೇಕು. ಸಮತೂಕದ, ಪೋಷಕಾಂಶಯುಕ್ತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಅತೀ ಅವಶ್ಯ ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿ.ವಯಸ್ಸಿನಲ್ಲಿ ಒಂದು ಮಟ್ಟಕ್ಕೆ ಬಂದ ಮೇಲೆ ಎಂದರೆ ಮಹಿಳೆಯರಿಗೆ 18 ಮತ್ತು ಪುರುಷರಿಗೆ 21 ವರ್ಷ ಕಳೆದ ಮೇಲೆ ಮೂಳೆಗಳ ಬೆಳವಣಿಗೆ ಕಡಿಮೆ ಆಗುತ್ತಾ ಬರುತ್ತದೆ. ಈ ಸಂದರ್ಭದಲ್ಲಿ ಕಾರ್ಬೊಹೈಡ್ರೇಟ್, ಖನಿಜಾಂಶ ಇರುವ ಆಹಾರ ಬೇಕು.

 

ಮಹಿಳೆಯರಿಗೆ ಋತುಚಕ್ರ ಆಗುವುದರಿಂದ, ಅಲ್ಲದೆ ಗರ್ಭಿಣಿ, ಬಾಣಂತಿಯರಿಗೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುತ್ತದೆ. ಇಂಥ ಸಂದರ್ಭದಲ್ಲಿ ಫೋಲಿಕ್ ಆ್ಯಸಿಡ್, ಕಬ್ಬಿಣದ ಅಂಶವಿರುವ ಆಹಾರ ಸೇವನೆ ಅಗತ್ಯ ಎನ್ನುತ್ತಾರೆ ಅವರು.ತೀರಾ ಇತ್ತೀಚೆಗೆ ಬಂದ ವರದಿ ಪ್ರಕಾರ ಶೇ. 50ರಷ್ಟು ಹದಿಹರೆಯದ ಹುಡುಗಿಯರು ಅನಿಮಿಕ್ ಆಗಿರುವುದಕ್ಕೆ ಕಾರಣ ಜಂಕ್‌ಫುಡ್ ತಿನ್ನುವುದು ಎಂಬುದು ಸಾಬೀತಾಗಿದೆ. ಇದು ಬೆನ್ನುನೋವು, ಕಾಲುನೋವು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯೋಗ, ವ್ಯಾಯಾಮ, ಸೈಕ್ಲಿಂಗ್‌ನಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.ಆಹಾರ ಸಮತೋಲನ ಮುಖ್ಯ

ಅತಿಯಾದ ತೂಕ ನಿಯಂತ್ರಣ, ಬೊಜ್ಜು ಇಳಿಸಲು ನಾವು ತೆಗೆದುಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಸಾಧ್ಯ; ದೇಹದಲ್ಲಿ ಅತಿಯಾಗಿ ಶೇಖರವಾಗುವ ಕ್ಯಾಲೊರಿಯನ್ನು ಉರಿಸಲು ವ್ಯಾಯಾಮ ಸಹಕಾರಿಯೇ ಹೊರತು ತೂಕ ಇಳಿಸಲು ಅಲ್ಲವೇ ಅಲ್ಲ ಎಂದು ಪ್ರತಿಪಾದಿಸುತ್ತಾರೆ ಡಯಟೀಷಿಯನ್ ಡಾ.ಎಚ್.ಎಸ್. ಪ್ರೇಮ.ಅತಿಯಾಗಿ ವ್ಯಾಯಾಮ ಮಾಡಿದಾಗ ಹಸಿವು ಹೆಚ್ಚಾಗುತ್ತೆ. ಇದರ ನಿಯಂತ್ರಣಕ್ಕೆ ಮತ್ತೆ ಊಟ ಮಾಡ್ತೀವಿ, ವ್ಯಾಯಾಮ ಮಾತ್ರ ಮಾಡಿ ಆಹಾರ ಪಥ್ಯ ಮಾಡದಿದ್ದರೆ ತೂಕ ಕಡಿಮೆಯಾಗಲ್ಲ. ಸಮತೂಕದ ಆಹಾರವನ್ನು ಕ್ರಮಬದ್ಧವಾಗಿ ತೆಗೆದುಕೊಂಡರೆ ತೂಕ ಏರುವುದನ್ನು ಖಂಡಿತಾ ನಿಯಂತ್ರಿಸಬಹುದು ಎನ್ನುತ್ತಾರೆ ಅವರು.ದಿನಕ್ಕೆ ಒಂದು ಗಂಟೆ ವ್ಯಾಯಾಮ, ನಡಿಗೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ತೂಕ ಹೆಚ್ಚಾಗಿದೆ ಎಂದು ಮಿತಿಮೀರಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಮಾರಕವೂ ಆಗಿದೆ ಎಂದು ಎಚ್ಚರಿಸುತ್ತಾರೆ ಡಾ. ಪ್ರೇಮ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry