ಶನಿವಾರ, ಜನವರಿ 18, 2020
18 °C
ಕೆಲವು ರೈತರಿಗೆ ಪ್ರತ್ಯೇಕ ಮೊತ್ತದ ಎರಡು ಚೆಕ್‌ ವಿತರಣೆ

ಅತಿವೃಷ್ಟಿ ಪರಿಹಾರ: ಭಾರಿ ಲೋಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಅತಿವೃಷ್ಟಿ ಪರಿಹಾರದ ಚೆಕ್‌ ವಿತರಣೆಯಲ್ಲಿ ಭಾರಿ ಪ್ರಮಾಣದ ಲೋಪ ಕಂಡುಬಂದಿದ್ದು, ತಾಲ್ಲೂಕಿನ ಕೆಲವು ರೈತರಿಗೆ ಪ್ರತ್ಯೇಕ ಮೊತ್ತದ ಎರಡು ಚೆಕ್‌ ವಿತರಣೆ ಮಾಡಿರುವುದು ಬಹಿರಂಗಗೊಂಡಿದೆ.ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್‌.ಸುಂದರೇಶ್‌ ಅವರು ತಹಸೀಲ್ದಾರ್‌ ಕೊಠಡಿಯಲ್ಲಿ ಪರಿಹಾರ ಧನದ ಚೆಕ್‌ ವಿತರಣೆಯಲ್ಲಿ ಆಗುತ್ತಿರುವ ಅಕ್ರಮ ಬಹಿರಂಗಗೊಳಿಸಿದರು. ಆಗುಂಬೆ ಹೋಬಳಿ ಚಕ್ಕೋಡುಬೈಲು ಗ್ರಾಮದ ಮಂಜುನಾಥ ಬಿನ್‌ ಶ್ರೀನಿವಾಸಗೌಡ ಎಂಬ ಹೆಸರಿಗೆ ₨ 6,000, ಎಂ.ಎಸ್‌. ಮಂಜುನಾಥ ಬಿನ್‌ ಶ್ರೀನಿವಾಸಗೌಡ ಎಂಬ ಹೆಸರಿಗೆ ₨ 3,600 ಮೊತ್ತದ ಚೆಕ್‌ ನಗದುಗೊಳಿಸಿದ ನಂತರ ₨ 1,500 ಹಣ ನೀಡುವಂತೆ ಗ್ರಾಮ ಲೆಕ್ಕಿಗೆ ರೈತನ ಬಳಿ ಒತ್ತಡ ಹೇರಿದ್ದಾರೆ ಎಂದು ಎರಡು ಪ್ರತ್ಯೇಕ ಚೆಕ್‌ನ ಜೆರಾಕ್ಸ ಪ್ರತಿಯನ್ನು ತೋರಿಸಿ ಸುಂದರೇಶ್‌ ಆಕ್ರೋಶ ವ್ಯಕ್ತಪಡಿಸಿದರು.ಪ್ರತ್ಯೇಕ ಚೆಕ್‌ ಪಡೆದ ರೈತ ತೀರ್ಥಹಳ್ಳಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಪರಿಹಾರಧನದ ಹಣವನ್ನು ನಗದು ಮಾಡಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪಾಲುದಾರರಾಗಿದ್ದು, ಸರ್ಕಾರಕ್ಕೆ ಸಾವಿರಾರು ರೂಪಾಯಿ ವಂಚನೆ ಎಸಗಲಾಗಿದೆ.ಹಾನಿಗೆ ಒಳಗಾದ ಸಾಗುವಳಿ ಭೂ ಪ್ರದೇಶಕ್ಕೆ ಸರ್ಕಾರ ಈ ಬಾರಿ ವಿಶೇಷ ಪ್ಯಾಕೇಜ್‌ ಘೋಷಿಸುವ ಮೂಲಕ ಈಗಾಗಲೇ ಸುಮಾರು ₨ 7.50 ಕೋಟಿ ಹಣದ ಪರಿಹಾರ ಧನ ಬಿಡುಗಡೆ ಮಾಡಿದೆ. ವಿತರಣೆಯಲ್ಲಿ ಇಲಾಖೆ ನಿಯಮಬಾಹಿರವಾಗಿ ವರ್ತಿಸಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲು ಕಾರಣವಾಗಿದೆ. ಪರಿಹಾರ ವಿತರಣೆಯಲ್ಲಿ ಅಕ್ರಮ ಒಂದೇ ರೀತಿಯಲ್ಲಿ ಆಗಿಲ್ಲ. ಹತ್ತಾರು ರೂಪದಲ್ಲಿ ಅಕ್ರಮ ನಡೆಸಲಾಗಿದೆ. ಲಕ್ಷಾಂತರ ಹಣ ನಿಯಮಬಾಹಿರವಾಗಿ ವಿತರಣೆ ಆಗಿದೆ ಎಂಬ ಮಾಹಿತಿ ಹೊರಬಂದಿದೆ. ಅರ್ಜಿ, ಪಹಣೆ, ಖಾತೆ ದಾಖಲೆ ಆಧರಿಸಿ ಪರಿಹಾರ ವಿತರಣೆ ಮಾಡಿರುವ ಕ್ರಮ ಅಕ್ರಮಕ್ಕೆದಾರಿ ಮಾಡಿಕೊಟ್ಟಂತಾಗಿದೆ. ಅಧಿಕಾರಿ, ಸಿಬ್ಬಂದಿಯನ್ನು ಹೊಂದಾಣಿಕೆ ಮಾಡಿಕೊಂಡು ಕೆಲವು ರೈತರು ಹೆಚ್ಚು ಮೊತ್ತದ ಪರಿಹಾರ ಧನವನ್ನು 2 ಪ್ರತ್ಯೇಕ ಚೆಕ್‌ ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಬೆಳೆ ಸಾಗುವಳಿ ಭೂಪ್ರದೇಶದ ಹಾನಿ ಕುರಿತು ಕಂದಾಯ ಇಲಾಖೆ ನಿಯಮ ಪಾಲನೆ ಮಾಡುವಲ್ಲಿ ವಿಫಲವಾಗಿದೆ. ಹೆಚ್ಚು ಸಾಗುವಳಿ ಪ್ರದೇಶ ಹೊಂದಿರುವ ಖಾತೆ ದಾಖಲೆ ಆಧರಿಸಿ ಹೆಚ್ಚು ಮೊತ್ತದ ಪರಿಹಾರ ಪಡೆದುಕೊಂಡಿದ್ದಾರೆ.  ಹಾನಿ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸಿಲ್ಲ. ಇದರ ಲಾಭವನ್ನು ಪಡೆದ ಕೆಲವರು ಕಂದಾಯ ಇಲಾಖೆ ಜೊತೆಗೂಡಿ ಅಕ್ರಮಗಳ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ. ಚೆಕ್‌ ವಿತರಣೆಯಲ್ಲಿ ಅಕ್ರಮ ಎಸಗಿರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂಥ ಅಕ್ರಮಕ್ಕೆ ಕಾರಣರಾದ ಸಿಬ್ಬಂದಿಯನ್ನು ಕರೆಸಿ ಸ್ಪಷ್ಟನೆ ನೀಡಬೇಕು ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಟಿ.ಎಲ್‌. ಸುಂದರೇಶ್‌ ಎಚ್ಚರಿಸಿದ್ದಾರೆ.  ರೈತ ಮಂಜುನಾಥ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)