ಗುರುವಾರ , ಜನವರಿ 23, 2020
28 °C
ಗ್ರಾಮಸಂಚಾರ

ಅತಿವೃಷ್ಟಿ: ರೈತರಿಗೆ ಸಿಗದ ಪರಿಹಾರ

ಚಂದ್ರಶೇಖರ್‌ Updated:

ಅಕ್ಷರ ಗಾತ್ರ : | |

ಅರಕಲಗೂಡು: ಹವಾಮಾನ ಹಾಗೂ ಮಳೆಯ ವೈಪರಿತ್ಯದಿಂದ ಬೆಳೆ ನಷ್ಟ ಅನುಭವಿಸಿರುವ ತಾಲ್ಲೂಕಿನ ರೈತರು, ಸರ್ಕಾರದ ನೆರವು ದೊರೆಯದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.ಎರಡು ವರ್ಷಗಳಿಂದ ಬರಗಾಲದ ಬೇಗೆ ಅನುಭವಿಸಿದ  ಇಲ್ಲಿನ ರೈತರು ಕಳೆದ ಮಾರ್ಚ್ ನಲ್ಲಿ ಬಿದ್ದ ಮುಂಗಾರು ಪೂರ್ವ ಮಳೆಯಿಂದ  ಹರ್ಷಗೊಂಡು ಉತ್ಸಾಹದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಏಪ್ರಿಲ್‍ ಮೇ ತಿಂಗಳಿನಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾದರೂ ಬೆಳೆ ಕೈಕೊಡುವುದಿಲ್ಲ  ಎಂಬ ನಂಬಿಕೆ ಉಳಿಸಿತ್ತು.ಆದರೆ, ಜೂನ್– ಜುಲೈ ತಿಂಗಳಿನಲ್ಲಿ ಸುರಿದ ಅತಿವೃಷ್ಟಿ ರೈತರ ನಿರೀಕ್ಷೆಯನ್ನೆಲ್ಲಾ ತಲೆಕೆಳಗು ಮಾಡಿತು. ಬಹಳ ಭರವಸೆ ಇಟ್ಟಿದ್ದ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗೆಡ್ಡೆ, ಮುಸುಕಿನ ಜೋಳ, ಶುಂಠಿ ಬೆಳೆಗಳು ಮಳೆಯ ಹೊಡತಕ್ಕೆ ಸಿಲುಕಿ ಸಂಪೂರ್ಣ ಹಾಳಾಗಿ ರೈತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿತು.ಜೂನ್‍ 160.-24 ಮಿ.ಮೀ. (ವಾಡಿಕೆ 101 ಮಿ.ಮೀ.) ಜುಲೈ 272.09 ಮಿ.ಮೀ. (ವಾಡಿಕೆ 187 ಮಿ.ಮೀ.) ಆಗಸ್ಟ್‍ 147.52 ಮಿ.ಮೀ. (ವಾಡಿಕೆ 116.ಮಿ.ಮೀ.) ತಿಂಗಳುಗಳಲ್ಲಿ ಬಿದ್ದ ಭಾರಿ ಮಳೆಯಿಂದ  ತಾಲ್ಲೂಕಿನ 6700 ಹೆಕ್ಟೇರ್‍ ಪ್ರದೇಶದಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳು ಹಾನಿಗೊಳಗಾದವು.ಪ್ರಮುಖ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ 505 ಹೆ, ಶುಂಠಿ 7209 ಹೆ, ಮುಸುಕಿನ ಜೋಳ 1560 ಹೆ ಹಾಗೂ 3 ಸಾವಿರ ಹೆಕ್ಟೇರ್‍ ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು, ಇದಲ್ಲದೆ ಅಡಿಕೆ 85 ಹೆ, ಬಾಳೆ 80 ಹೆ, ತೆಂಗು 15 ಹೆ, ತರಕಾರಿ ಬೆಳೆ 11 ಹೆ, ಕಾಳು ಮೆಣಸು 25 ಹೆ, ಅಲಸಂದೆ 675 ಹೆ, ತೊಗರಿ 10 ಹೆ ಹಾಗೂ 5 ಹೆಕ್ಟೇರ್‍ ನೆಲಗಡಲೆ ಬೆಳೆ ಹಾನಿಗೊಳಗಾಯಿತು.ತಾಲ್ಲೂಕಿನಲ್ಲಿ ಒಟ್ಟು ಸಂಭವಿಸಿದ ಬೆಳೆ ಹಾನಿ ಪ್ರಮಾಣ ₨ 24 ಕೋಟಿ ಎಂದು ಅಂದಾಜು ಮಾಡಲಾಗಿದೆ. ಬೆಳೆ ಹಾನಿ ಕುರಿತಂತೆ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಂಗಾರಿನಲ್ಲಿ ಅತಿವೃಷ್ಟಿ ಯಿಂದ ಬೆಳೆಹಾನಿಯಾದರೆ ಹಿಂಗಾರಿನಲ್ಲಿ ಮಳೆ ದಿಡೀರ್‍ ಕೈ ಕೊಟ್ಟು ಪರಿಣಾಮ ಬರದ ವಾತಾವರಣ ಉಂಟಾಯಿತು. ಇದರಿಂದಾಗಿ ದ್ವಿದಳ ಧಾನ್ಯ ಬೆಳೆದು ಅಲ್ಪ ಸ್ವಲ್ಪ ಹಣ ಕಾಣುತ್ತಿದ್ದ ರೈತರ ಆಸೆಯೂ ಕಮರಿ ಹೋಯಿತು.ಸಾಲ ಮಾಡಿ ಭೂಮಿಗೆ ಸುರಿದ ಹಣವೂ ಹಾಳು ಬೆಳೆಯೂ ಇಲ್ಲ ಇಂತಹ ದೈನೇಸಿ ಸ್ಥಿತಿ ರೈತರದ್ದಾಗಿದೆ. ಈ ಮಧ್ಯೆ ಸರ್ಕಾರ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇಲ್ಲಿನ ರೈತರಿಗೆ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ನೀಡುವುದು ಅಥವಾ ಬರಪರಿಹಾರದ ಮೂಲಕ ನೆರವು ಒದಗಿಸುವುದೊ ಎಂಬ ಗೊಂದಲ  ಸಹ ಸೃಷ್ಠಿಯಾಗಿದೆ. ಆದರೆ  ಈ ವರೆಗೆ ಅತಿವೃಷ್ಠಿ ಹಾನಿಗೂ ಹಣ ಬಿಡುಗಡೆಯಾಗಿಲ್ಲ, ಬರ ಪರಿಹಾರ ಧನವೂ ಬಂದಿಲ್ಲ ಹೀಗಾಗಿ ರೈತರ ಸಂಕಷ್ಟ ಮಾತ್ರ ಮುಂದು ವರಿದೆ ಇದೆ. 

 

ಪ್ರತ್ಯೇಕ ಸಮೀಕ್ಷೆ

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ ಹಾಗೂ ಬರ ಎರಡು ಕಾಣಿಸಿಕೊಂಡು  ಹವಾಮಾನ ವೈಪರಿತ್ಯ ಉಂಟಾಗಿದೆ. ಸರ್ಕಾರ ಈಗಾಗಲೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಹೀಗಾಗಿ ಅತಿವೃಷ್ಠಿಯಿಂದ ಹಾನಿಗೊಳಗಾದವರ ಪ್ರತ್ಯೇಕ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಎ. ಮಂಜು, ಶಾಸಕ

ಅಧಿಕಾರಿಗಳ ನಿರ್ಲಕ್ಷ                               

ತಾಲ್ಲೂಕಿನಲ್ಲಿ ಬರಕ್ಕಿಂತ ಅತಿವೃಷ್ಟಿಯಿಂದಲೇ ಹೆಚ್ಚಿನ ಹಾನಿ ಸಂಭವಿಸಿದೆ. ಬೆಳೆ ಹಾನಿ ಕುರಿತಂತೆ  ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿಲ್ಲ, ಇದಕ್ಕೆ ಶಾಸಕರ ಹಾಗೂ ಅಧಿಕಾರಿಗಳ ನಿರ್ಲಕ್ಷ ಕಾರಣ. ಹೀಗಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ರೈತರಾಗಿದೆ.     

 –ಸಂತೋಷ್‍ ಗೌಡ, ತಾ.ಪಂ. ಮಾಜಿ ಅಧ್ಯಕ್ಷ            

             

ಸರ್ಕಾರಕ್ಕೆ ಪ್ರಸ್ತಾವನೆ


ಅತಿವೃಷ್ಟಿ ಹಾನಿ ಕುರಿತಂತೆ  ಸರ್ಕಾರಕ್ಕೆ ಪ್ರಸ್ತಾವಣೆ ಕಳಿಸಲಾಗಿದೆ. ಈವರೆಗೂ ಯಾವುದೇ ಅನುದಾನ  ಬಂದಿಲ್ಲ. ಬಂದ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.

–ಎಸ್‍. ಜಗದೀಶ್‍,

ತಹಶೀಲ್ದಾರ್‍

ಪ್ರತಿಕ್ರಿಯಿಸಿ (+)