ಶನಿವಾರ, ಜೂನ್ 19, 2021
28 °C

ಅತಿ ಆತ್ಮವಿಶ್ವಾಸ ಬೇಡ– ಎಚ್‌.ಡಿ. ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ದೇವೇಗೌಡ ಚುನಾವಣೆಗೆ ನಿಂತ ಕೂಡಲೇ ಗೆದ್ದೇ ಬಿಡುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಬಿಟ್ಟು, ಕಾರ್ಯಕರ್ತರೆಲ್ಲ ತಮ್ಮ ಶಕ್ತಿಮೀರಿ ಪಕ್ಷಕ್ಕಾಗಿ  ದುಡಿಯಬೇಕು’ ಎಂದು ಸಂಸದ ಎಚ್.ಡಿ. ದೇವೇಗೌಡ ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ನಗರದ ವಿದ್ಯಾನಗರ ಬಡಾವಣೆಯಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಪಕ್ಷ ಬಲವಾಗಿದೆ. ಐವರು ಶಾಸಕರು, ಒಬ್ಬ ವಿಧಾನ ಪರಿಷತ್ ಸದಸ್ಯರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರವಿದೆ ಎಂಬ ಕಾರಣಕ್ಕೆ ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸಬಾರದು. ಜೀವನದಲ್ಲಿ 2 ಬಾರಿ ಸೋಲಿನ ಅನುಭವವಾಗಿದೆ ಎಂದರು.‘ನಾಮಪತ್ರ ಸಲ್ಲಿಕೆ ದಿನ 50 ಸಾವಿರ ಜನರನ್ನು ಸೇರಿಸುವ ಅಗತ್ಯವಿಲ್ಲ. ಬದಲಿಗೆ ಪಕ್ಷದಿಂದ ಬೇಸರಗೊಂಡು ದೂರವಾಗಿರುವ ಕಾರ್ಯಕರ್ತರನ್ನು ಕರೆತನ್ನಿ. ಹಗಲು-ರಾತ್ರಿ ಪಕ್ಷಕ್ಕಾಗಿ ದುಡಿಯಲು ಸಿದ್ಧರಿರುವ ಕಾರ್ಯಕರ್ತರು ಈಗ ಬೇಕು’ ಎಂದರು.‘ರಾಜ್ಯದ 15 ಕ್ಷೇತ್ರಗಳಲ್ಲಿ ನಾನೇ ಪ್ರಚಾರಕ್ಕೆ ಹೋಗಬೇಕು. ಪಕ್ಷದ ಜವಾಬ್ದಾರಿಯನ್ನು ಅಧ್ಯಕ್ಷರು, ಪದಾಧಿಕಾರಿಗಳಿಗೆ ಹಂಚಿದ್ದರೂ, ನಾನು ಪ್ರವಾಸ ಮಾಡುವುದು ಅನಿವಾರ್ಯ. ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದರು.ಸಿ.ಎಂ. ಭಗೀರಥನಲ್ಲ

‘ರಾಜ್ಯ ಸರ್ಕಾರ ಕಳೆದ ಕೆಲವು ದಿನಗಳಿಂದ ಜಾಹೀರಾತಿಗಾಗಿಯೇ ₨ 300 ಕೋಟಿ ವೆಚ್ಚ ಮಾಡಿದೆ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನೀರು ಹರಿಸುತ್ತೇವೆ ಎನ್ನುತ್ತಿದ್ದಾರೆ. ಹಾಗೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭಗೀರಥ ಅಲ್ಲ’ ಎಂದು ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.ಜಿಲ್ಲೆಯ ಬರ ನಿರ್ವಹಣೆಗೆ ₨ 38 ಕೋಟಿ ರೂಪಾಯಿ ಪ್ರಸ್ತಾವನೆ ಕಳುಹಿಸಿ ಮೂರು ತಿಂಗಳಾಗಿದ್ದರೂ, ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ.ಇಲ್ಲಿನ ನೀರನ್ನು ಬೇರೆ ಕಡೆಗೆ ಹರಿಸುವ ಸಿದ್ಧತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.ಜೆಡಿಎಸ್‌ ಪದಾಧಿಕಾರಿಗಳ ನೇಮಕ

ಅರಸೀಕೆರೆ: ಎಚ್‌.ಎಸ್‌ ಶಂಕರಲಿಂಗಪ್ಪ ಅವರನ್ನು ಜೆಡಿಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಹಾಗೂ ಜೆಡಿಎಸ್‌ ತಾಲ್ಲೂಕು ಘಟಕ ಅಧ್ಯಕ್ಷರನ್ನಾಗಿ ಎನ್‌.ಎಸ್‌. ಸಿದ್ದರಾಮಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಮಂಗಳವಾರ ತಿಳಿಸಿದರು.ತಾಲ್ಲೂಕು ಜೆಡಿಎಸ್‌ ಘಟಕದ ಕಾರ್ಯದರ್ಶಿಯನ್ನಾಗಿ ಸುಬ್ರಹ್ಮಣ್ಯಬಾಬು, ತಾಲ್ಲೂಕು ಯುವ ಜೆಡಿಎಸ್‌ ಘಟಕದ ಅಧ್ಯಕ್ಷರಾಗಿ ಬಾಣಾವರದ ಬಿ.ಎಸ್‌. ಆಶೋಕ್‌ಕುಮಾರ್‌, ಉಪಾಧ್ಯಕ್ಷರಾಗಿ ಮಾಡಾಳು ಚಂದ್ರು ಹಾಗೂ ಕಾರ್ಯದರ್ಶಿಯನ್ನಾಗಿ ಹೇಮಂತ್‌, ಜಿಲ್ಲಾ ಜೆಡಿಎಸ್‌ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿಯಾಗಿ ಅರಸೀಕೆರೆ ಪಟ್ಟಣದ ಮೆಹಮೂದ್‌ ಅಕ್ಬರ್‌ ಅವರನ್ನು ನೇಮಕ ಮಾಡಿದ್ದಾರೆ ಎಂದರು.‘ಕಾಂಗ್ರೆಸ್‌– ಬಿಜೆಪಿ ಎದುರಿಸಲು ಸಮರ್ಥ’

ಹಾಸನ: ಎಲ್ಲ 28 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯ ಹಣ ಹಾಗೂ ತೋಳ್ಬಲವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಎಚ್‌.ಡಿ. ದೇವೇಗೌಡ ಹೇಳಿದರು.

ಹಾಸನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ಪತ್ರಕರ್ತರೊಡನೆ ಮಾತನಾಡುತ್ತ,  ಯಾವುದೇ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವಾಗ ಎಲ್ಲ ಮುಖಂಡರು, ಪ್ರಮುಖ ಕಾರ್ಯಕರ್ತರು ಒಟ್ಟು ಸೇರಿ ಆಯ್ಕೆ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪುಟಕ್ಕಿಟ್ಟ ಚಿನ್ನದಂಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಹುದು. ನಾವು ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ ಎಂದರು.‘ಸಿದ್ದರಾಮಯ್ಯಗೆ ಆಭಾರಿ !’

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡ, ‘ಬಹುಶಃ ನನ್ನ ಮೇಲಿನ ಅನುಕಂಪದಿಂದ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿರಬೇಕು. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.ಹಾಸನದಿಂದಲೇ ಸ್ಪರ್ಧೆ

‘ಈ ಬಾರಿಯೂ ನಾನು ಹಾಸನದಿಂದಲೇ ಸ್ಪರ್ಧಿಸುತ್ತೇನೆ. ಇದರಲ್ಲಿ ಅನುಮಾನ ಬೇಡ. ಎರಡು ಕಡೆಯಿಂದ ಸ್ಪರ್ಧಿಸುವ ಬಗ್ಗೆ ಹಿಂದೆ ಹೇಳಿಕೆ ನೀಡಿದ್ದು ನಿಜವಾದರೂ ತವರು ಜಿಲ್ಲೆ ಮೇಲಿನ ಅಭಿಮಾನದಿಂದ ಇಲ್ಲಿಂದಲೇ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ’ ಎಂದು ದೇವೇಗೌಡ ಸ್ಪಷ್ಟಪಡಿಸಿದರು.ಕೇರಳದಲ್ಲಿ ಜೆಡಿಎಸ್

ಜೆಡಿಎಸ್ ಕೇರಳದಲ್ಲಿ ಸಕ್ರಿಯವಾಗಿದೆ.  ಅಲ್ಲಿಯೂ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ರಾಷ್ಟ್ರೀಯ ಪಕ್ಷಗಳಲ್ಲಿ ಬೇಕಾದಷ್ಟು ದುಡ್ಡಿದೆ. ಜೆಡಿಎಸ್‌ ಕಾರ್ಯಕರ್ತರ ಉತ್ಸಾಹ ಹಾಗೂ ಅವರ ಶಕ್ತಿಯ ಆಧಾರದಲ್ಲೇ ಚುನಾವಣೆ ಎದುರಿಸಲಿದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲ. ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿದ್ದಕ್ಕಾಗಿ ಇಲ್ಲಿನ ಜನರಿಗೆ ದೊರೆತಿರುವುದೇನು? ಎಂದು ಅವರು ಪ್ರಶ್ನಿಸಿದರು.ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಪಟೇಲ್ ಶಿವರಾಮ್‌, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಜಾವಗಲ್ ರಾಜಶೇಖರ್, ರಾಜ್ಯ ಉಪಾಧ್ಯಕ್ಷ ಬಿ.ಎಂ. ಶಿವಕುಮಾರ್ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.