ಸೋಮವಾರ, ಜೂನ್ 14, 2021
26 °C

ಅತಿ ವೇಗದ ರೈಲು: ತಾಂತ್ರಿಕ ಸಹಕಾರಕ್ಕೆ ಚೀನಾ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌(ಪಿಟಿಐ): ‘ಅತಿ ವೇಗದ ರೈಲು, ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಭಾರ­ತಕ್ಕೆ ಚೀನಾ ತಾಂತ್ರಿಕ ಸಹಕಾರ ನೀಡಲಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವಿಸ್ತರಣೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಲಿದೆ’ ಎಂದು ಚೀನಾ ಪ್ರಧಾನಿ ಲೀ ಕೆಕೆ­ಯಾಂಗ್‌ ಇಲ್ಲಿ ಹೇಳಿದರು.ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲು­ವಾಲಿಯಾ ನೇತೃತ್ವದ  ನಿಯೋಗದ ಜತೆ ಮಾತುಕತೆ ನಡೆಸಿದ ಅವರು, ಭಾರತ­ದಲ್ಲಿ ಹೂಡಿಕೆ ಮಾಡಲು ಚೀನಾ ಆಸಕ್ತಿ ಹೊಂದಿದೆ. ಚೀನಾದ ತಾಂತ್ರಿಕ ನೆರವಿ­ನೊಂದಿಗೆ ಭಾರತೀಯ ರೈಲ್ವೆ ಜಾಲವನ್ನು ಆಧು­ನೀಕರ­ಣ­ಗೊಳಿಸಬಹುದು  ಎಂದರು.ಅಹ್ಲುವಾಲಿಯಾ ನೇತೃತ್ವದ ಭಾರತೀಯ ನಿಯೋಗ ಈಗಾಗಲೇ ಚೀನಾದ ಉನ್ನತ ಮಟ್ಟದ ಅಧಿಕಾರಿಗಳ ಜತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಹಲವು ವಲಯಗಳಲ್ಲಿ ಹೂಡಿಕೆಗೆ ಆಹ್ವಾನವನ್ನೂ ನೀಡಿದೆ.ಅತಿ ವೇಗದ ರೈಲು ಯೋಜನೆಗೆ ಪ್ರತಿ ಕಿ.ಮೀಗೆ ಅಂದಾಜು ₨120 ಕೋಟಿ ವೆಚ್ಚವಾಗುತ್ತದೆ. ಇದರ ಬದಲಿಗೆ, ಕೆಲವೆಡೆ ಈಗಿರುವ ರೈಲ್ವೆ ಹಳಿಗಳನ್ನೇ ಅಧುನೀಕರಣಗೊಳಿಸಿ, ರೈಲಿನ ವೇಗ­ವನ್ನು ಗಂಟೆಗೆ 180 ಕಿ.ಮೀಗೆ ಹೆಚ್ಚಿಸುವ ಸಾಧ್ಯತೆ ಕುರಿತೂ ಚೀನಾದ ತಜ್ಞರ ಜತೆ ಭಾರತೀಯ ರೈಲ್ವೆ ಮಂಡಳಿಯ ಅಧಿಕಾ ರಿಗಳು ಮಾತುಕತೆ ನಡೆಸಿದ್ದಾರೆ.ದೆಹಲಿ–ಆಗ್ರಾ, ದೆಹಲಿ–ಖಾನ್‌ ಪುರ, ದೆಹಲಿ–ಚಂಡೀಗಡ ನಡುವೆ ಅತಿ ವೇಗದ ರೈಲ್ವೆ ಹಳಿ ನಿರ್ಮಿಸುವ ಪ್ರಸ್ತಾವ­ವನ್ನು ಭಾರತ ಚೀನಾದ ಮುಂದಿಟ್ಟಿದೆ.ಎಲೆಕ್ಟ್ರಾನಿಕ್‌ ಉದ್ಯಮದತ್ತ ಒಲವು

ಪರ್ಸನಲ್‌ ಕಂಪ್ಯೂಟರ್‌ ತಯಾರಿಕೆ, ಇಂಟರ್ನೆಟ್‌ ಉಪಕರಣಗಳು, ಮೊಬೈಲ್‌ ಫೋನ್‌, ಟಿವಿ ಸೇರಿದಂತೆ ಭಾರತದ ಎಲೆಕ್ಟ್ರಾನಿಕ್‌ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಚೀನಾ ಆಸಕ್ತಿ ತೋರಿದೆ.‘ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿ ಮತ್ತು ಪರ್ಸನಲ್‌ ಕಂಪ್ಯೂಟರ್‌ ತಯಾ ರಿಕೆಗೆ ಸಂಬಂಧಿಸಿದಂತೆ ಭಾರತ­ದಲ್ಲಿ ಹೂಡಿಕೆ ಮಾಡುವ ಚೀನಾದ ಕಂಪೆನಿಗ ಳಿಗೆ ಉತ್ತೇಜನ ನೀಡಲಾ­ಗುವುದು’ ಎಂದು ಚೀನಾ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಯಾಂಗ್‌ ಕ್ಷಿಯಾನ್‌ ಇಲ್ಲಿ ನಡೆದ ಭಾರತ–ಚೀನಾ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಸಭೆಯಲ್ಲಿ ಹೇಳಿದರು.ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ 6650 ಕೋಟಿ ಡಾಲರ್‌ ಮೊತ್ತದ (₨4.12 ಲಕ್ಷ ಕೋಟಿ) ವಹಿವಾಟು ನಡೆದಿದೆ. ಆದರೆ, ಭಾರತದ ರಫ್ತಿಗಿಂತ ಆಮದು ಪ್ರಮಾಣವೇ ಹೆಚ್ಚಿದ್ದು, ವ್ಯಾಪಾರ ಕೊರತೆ ಅಂತರ 3500 ಕೋಟಿ ಡಾಲರ್‌ಗಳಿಗೆ (₨2.17 ಲಕ್ಷ ಕೋಟಿಗೆ) ಏರಿಕೆ ಕಂಡಿದೆ.‘ಚೀನಾದ ಕಂಪೆನಿಗಳಿಗೆ ಭಾರತದ ಕಂಪ್ಯೂ­ಟರ್‌ ತಯಾರಿಕೆ ಕ್ಷೇತ್ರದಲ್ಲಿ ಹೂಡಿ­ಕೆಗೆ ಅವಕಾಶ ನೀಡಿದರೆ, ಭವಿಷ್ಯ ದಲ್ಲಿ ಚೀನಾ ಮತ್ತು ಭಾರತ ಜಾಗತಿಕ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಬ ಹುದು. ಭಾರತದ ಸಾಫ್ಟ್‌ವೇರ್ ಶಕ್ತಿಯ ಜತೆಗೆ ಚೀನಾದ ಹಾರ್ಡ್‌ವೇರ್‌ ಶಕ್ತಿ ಸೇರಿದರೆ ಮಾರುಕಟ್ಟೆ ಏಕಸ್ವಾಮ್ಯ ಸಾಧಿ ಸಬ­ಹುದು’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.