ಶುಕ್ರವಾರ, ಮೇ 20, 2022
21 °C

ಅತೀ ಚಟುವಟಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತೀ ಚಟುವಟಿಕೆ!

ಹೋಮ್‌ವರ್ಕ್ ಅನ್ನು ಮರೆಯುವುದು, ತರಗತಿಯಲ್ಲಿ ಹಗಲುಗನಸು ಕಾಣುವುದು, ಆಲೋಚಿಸದೆ ಕ್ರಿಯೆಗೆ ಮುಂದಾಗುವುದು ಅಥವಾ ಊಟಕ್ಕೆ ಕುಳಿತಾಗ ಗಡಿಬಿಡಿ ಮಾಡುವುದು ಇವೆಲ್ಲ ಮಕ್ಕಳಲ್ಲಿ ಕಂಡುಬರುವುದು ಸಾಮಾನ್ಯ. ಆದರೆ, ಅಲಕ್ಷ್ಯ ಅಥವಾ ಗಮನ ಇಲ್ಲದಿರುವಿಕೆ, ಹಠಾತ್ ಪ್ರವೃತ್ತಿ ಮತ್ತು ಅತಿಚಟುವಟಿಕೆ (ಹೈಪರ್ ಆ್ಯಕ್ಟಿವಿಟಿ) - ಇವು  ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವ್ ಡಿಸ್‌ಆರ್ಡರ್(ಎಡಿಡಿ/ಎಡಿಎಚ್‌ಡಿ)ನ  ಲಕ್ಷಣಗಳಾಗಿವೆ.`ಎಡಿಎಚ್‌ಡಿ~ಯು ಶಾಲೆ ಮತ್ತು ಮನೆಯಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ, ಮಕ್ಕಳ ಕಲಿಕೆ ಮತ್ತು ಇತರರೊಂದಿಗೆ ಬೆರೆಯುವುದರ ಮೇಲೂ ದುಷ್ಪರಿಣಾಮ ಉಂಟುಮಾಡಬಹುದು. ಎಡಿಎಚ್‌ಡಿಯ ಲಕ್ಷಣ ಮತ್ತು ಚಿಹ್ನೆಗಳು ಸಾಮಾನ್ಯವಾಗಿ ಏಳನೇ ವಯಸ್ಸಿಗಿಂತ ಮುಂಚಿತವಾಗಿ ಗೋಚರಿಸುತ್ತವೆ. ಆದರೆ, ಅಟೆನ್ಷನ್ ಡೆಫಿಸಿಟ್ ಡಿಸ್‌ಆರ್ಡರ್ ಮತ್ತು ಸಹಜ `ಮಕ್ಕಳ ವರ್ತನೆ~ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟ.ಕೆಲವು ಲಕ್ಷಣಗಳು ಮಾತ್ರ ಗೋಚರಿಸಿದರೆ ಅಥವಾ ಕೆಲ ಸನ್ನಿವೇಶಗಳಲ್ಲಿ ಮಾತ್ರ ಲಕ್ಷಣಗಳು ಕಂಡುಬಂದರೆ ಅದು ಬಹುಶಃ ಎಡಿಎಚ್‌ಡಿ ಆಗಿರಲಿಕ್ಕಿಲ್ಲ. ಆದರೆ ಮಗುವು ಶಾಲೆ, ಮನೆ ಮತ್ತು ಆಟವಾಡುವಾಗ ಈ ಎಲ್ಲ ಸಂದರ್ಭಗಳಲ್ಲಿಯೂ ಎಡಿಎಚ್‌ಡಿಯ ಹಲವು ಲಕ್ಷಣ ಮತ್ತು ಚಿಹ್ನೆಗಳನ್ನು ತೋರಿಸುತ್ತಿದ್ದರೆ ಆ ಕುರಿತು ಸೂಕ್ಷ್ಮವಾಗಿ ಗಮನಿಸಲೇಬೇಕು. ಮರೆಯುವಿಕೆ ಅಥವಾ ಶಾಲೆಯಲ್ಲಿ ಏಕಾಗ್ರತೆಗೆ ಕಷ್ಟವಾಗುವುದು ಇತ್ಯಾದಿ ತೊಂದರೆಗಳನ್ನು ಮಗುವು ಎದುರಿಸುತ್ತಿದ್ದರೆ, ಪಾಲಕರು ಆ ಸಮಸ್ಯೆಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಮಗುವಿನ ಸಾಮರ್ಥ್ಯವನ್ನು ಬಂಡವಾಳವಾಗಿ ಉಪಯೋಗಿಸಿಕೊಳ್ಳಲು ಮುಂದಾಗಬಹುದು.ಎಡಿಎಚ್‌ಡಿಯಲ್ಲಿ ಮೂರು ಬಗೆಗಳಿವೆ:

1- ಗಮನ ಇಲ್ಲದಿರುವಿಕೆ (ಇನ್‌ಅಟೆಂಟಿವ್),

2- ಹಠಾತ್ ಪ್ರವೃತ್ತಿ (ಹೈಪರ್ ಆ್ಯಕ್ಟಿವ್ ಇಂಪಲ್ಸಿವ್)

3- ಸಂಯೋಜಿತ.ಗಮನ ಕೇಂದ್ರೀಕರಿಸಲು ಆಗದಿರುವುದು ಮತ್ತು  ಶಾಲೆಯ ಕೆಲಸಗಳು ಅಥವಾ ಇತರ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮತ್ತು ತಾತ್ಸಾರ ಪ್ರದರ್ಶಿಸುವ ಪ್ರವೃತ್ತಿ ಈ ಮುಂತಾದ ಲಕ್ಷಣಗಳು `ಇನ್‌ಅಟೆಂಟಿವ್~ ಮಾದರಿಯ ಎಡಿಎಚ್‌ಡಿಯಲ್ಲಿ ಸೇರುತ್ತವೆ.ಕೆಲಸಗಳು ಅಥವಾ ಆಟದ ಚಟುವಟಿಕೆಗಳಲ್ಲಿ ನಿರಂತರ ಗಮನದಲ್ಲಿ ತೊಂದರೆ, ಗಮನವಿಟ್ಟು ಆಲಿಸುವ ಸಮಸ್ಯೆ, ಸೂಚನೆಗಳನ್ನು ಪಾಲಿಸಲು ಕಷ್ಟವಾಗುವುದು,  ಮಾನಸಿಕ ಯತ್ನಗಳನ್ನು ಬೇಡುವ ಕೆಲಸಗಳನ್ನು ತಪ್ಪಿಸಿಕೊಳ್ಳುವುದು ಅಥವಾ ಇಷ್ಟಪಡದಿರುವುದು, ಗೊಂಬೆ, ನೋಟ್‌ಬುಕ್ ಮುಂತಾದವನ್ನು ಕಳೆದುಕೊಳ್ಳುವ ಪ್ರವೃತ್ತಿ ಮತ್ತು ಹೋಮ್‌ವರ್ಕ್, ಗಮನಭಂಗ, ನಿತ್ಯದ ಚಟುವಟಿಕೆಗಳನ್ನು ಮರೆಯುವುದು ಮುಂತಾದವು ಇದರಲ್ಲಿ ಸೇರಿವೆ.ಅವಸರ ಅಥವಾ ದಿಗಿಲುಬೀಳುವುದು,  ಕುಳಿತುಕೊಂಡಿರಲು ಕಷ್ಟಪಡುವುದು, ಅತಿಯಾಗಿ ಓಡುವುದು ಅಥವಾ ಹತ್ತುವುದು, ಶಾಂತವಾಗಿ ಆಡಲು ಕಷ್ಟವಾಗುವುದು, ಯಾವಾಗಲೂ ಗಡಿಬಿಡಿಯಲ್ಲಿ ಇದ್ದಂತೆ ತೋರುವುದು, ವಿಪರೀತ ಮಾತನಾಡುವುದು, ಪ್ರಶ್ನೆಯನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವ ಮೊದಲೇ ಉತ್ತರ ಹೇಳಲು ಮುಂದಾಗುವದು, ತನ್ನ ಸರದಿ ಬರುವವರೆಗೆ ಕಾಯಲು ಪ್ರಯಾಸಪಡುವುದು ಅಥವಾ ಮಧ್ಯೆ ಬಾಯಿಹಾಕುವುದು ಅಥವಾ ಅತಿಕ್ರಮಿಸುವುದು ಮುಂತಾದವು ಹೈಪರ್ ಆ್ಯಕ್ಟಿವ್ ಇಂಪಲ್ಸಿವ್ ಮಾದರಿಯ ಎಡಿಎಚ್‌ಡಿಯಲ್ಲಿ ಸೇರುತ್ತವೆ.ಇವೆರಡೂ ರೀತಿಯ ಎಡಿಎಚ್‌ಡಿಗಳ ಸಂಯೋಜನೆಯ ಮಾದರಿಯ ಎಡಿಎಚ್‌ಡಿ ಹೆಚ್ಚು ಸಾಮಾನ್ಯವಾದುದು. ಸಂಯೋಜಿತ ರೀತಿಯ ಎಡಿಎಚ್‌ಡಿ ಇರುವ ಮಕ್ಕಳು ಅಜಾಗರೂಕತೆ ಮತ್ತು ಹೈಪರ್-ಆ್ಯಕ್ಟಿವಿಟಿ ಇಂಪಲ್ಸಿವ್ ಈ ಎರಡೂ ಲಕ್ಷಣಗಳನ್ನು ಹೊಂದಿರುತ್ತಾರೆ.ಒಂದು ಅಧ್ಯಯನದ ಪ್ರಕಾರ, ಔಷಧೋಪಚಾರ ಮತ್ತು ವರ್ತನಾ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸ್‌ಆರ್ಡರ್ (ಎಡಿಎಚ್‌ಡಿ) ಇರುವ ಮಕ್ಕಳಲ್ಲಿ ಚಟುವಟಿಕೆಗಳನ್ನು ಸಾಮಾನ್ಯ ಸ್ಥಿತಿಗೆ ತರುವ ಮೂಲಕ ಏಕಾಗ್ರತೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬಹುದು ಮತ್ತು ಸ್ವಯಂನಿಯಂತ್ರಣವನ್ನು ಸಾಧಿಸಬಹುದು. ಏಕೆಂದರೆ, ಎಡಿಎಚ್‌ಡಿ ಇದೆ ಎಂಬುದನ್ನು ಪತ್ತೆಹಚ್ಚುವ ಪರೀಕ್ಷೆ ಇಲ್ಲ. ರೋಗಪತ್ತೆಯು ಸಂಪೂರ್ಣ ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ.ಮಗುವಿನ ಮೆದುಳಿನಲ್ಲಿ ಆಗುವ ರಾಸಾಯನಿಕ ಅಸಮತೋಲನದಿಂದಾಗಿ ಎಡಿಎಚ್‌ಡಿ ಉಂಟಾಗುತ್ತದೆ. ಇದು ಮಗುವಿನ ಏಕಾಗ್ರತೆ ಶಕ್ತಿಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಮಗುವಿನ ಹಠಾತ್ ಪ್ರವೃತ್ತಿ ನಿಯಂತ್ರಣ ಸಾಮರ್ಥ್ಯ ಮತ್ತು ಚಟುವಟಿಕೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೂ ಎಡಿಎಚ್‌ಡಿ ದುಷ್ಪರಿಣಾಮ ಉಂಟುಮಾಡಬಲ್ಲದು.ಪರಿಹಾರ

ಎಡಿಎಚ್‌ಡಿಯಿಂದ ಬಾಧಿತರಾದ ಮಕ್ಕಳಿಗೆ ಹೋಮಿಯೋಪಥಿಯು ನೈಸರ್ಗಿಕ, ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಚಂಚಲತೆ, ಅಶಾಂತಿ, ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ವರ್ತನೆ ನಿಯಂತ್ರಣದ ಕೊರತೆ ಮುಂತಾದ ಲಕ್ಷಣಗಳನ್ನು ನಿಗ್ರಹಿಸುವ ಬದಲು ಹೋಮಿಯೋಪಥಿಯು ಸಮಸ್ಯೆಯ ಮೂಲವನ್ನು ಅರಸುತ್ತದೆ ಮತ್ತು ವ್ಯವಸ್ಥೆಯಲ್ಲಿ ಸಮತೋಲನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

 

ಒಂದು ಸಾಮಾನ್ಯ ಡಯಗ್ನೈಸ್ ಮೂಲಕ ಮಗು ಹೀಗೇ ಎಂದು ನಿರ್ಧರಿಸುವ ಬದಲು ಹೋಮಿಯೋಪಥಿಯು ಆತ ಅಥವಾ ಅವಳ ಸಹಜ ಗುಣಸ್ವಭಾವ, ತಲ್ಲಣ, ಖಿನ್ನತೆ, ಹೆದರಿಕೆ, ಕಡಿಮೆ ಆತ್ಮವಿಶ್ವಾಸ ಮತ್ತು ಕೋಪ ಮುಂತಾದ ವಿಶಿಷ್ಟ ಗುಣಲಕ್ಷಣಗಳು ಮತ್ತು ಪರಿಸ್ಥಿತಿಗಳ ಮೂಲಕ ಪ್ರತಿ ಮಗುವನ್ನೂ ವ್ಯಕ್ತಿಗತವಾಗಿ ಗಮನಿಸುತ್ತದೆ. ಎಡಿಡಿ ಲಕ್ಷಣಗಳಿರುವ ಮಕ್ಕಳು ಕೂಡ ಅದ್ಭುತ ಗುಣಗಳನ್ನು ಹೊಂದಿರುತ್ತಾರೆ. ಅಂಥ ಮಕ್ಕಳು ಕುತೂಹಲಿಗಳು, ಸಂವಹನಕಾರರು, ವ್ಯಾಮೋಹಿಗಳು ಮತ್ತು ಲವಲವಿಕೆಯವರಾಗಿರುತ್ತಾರೆ. ಹೋಮಿಯೋಪಥಿಯು ಈ ಗುಣಗಳನ್ನು ಕುಂದಿಸುವುದಿಲ್ಲ, ಬದಲಿಗೆ ಸಮತೋಲನವಿಲ್ಲದ ಲಕ್ಷಣಗಳನ್ನು ಮಾತ್ರ ಪರಿಹರಿಸಲು ಕೆಲಸಮಾಡುತ್ತದೆ.ಹೋಮಿಯೋಪಥಿ ಔಷಧಿಗಳು ಕೇವಲ ಒಂದು ರೋಗಕ್ಕೆ ಚಿಕಿತ್ಸೆ ನೀಡುವ ಬದಲು ಸಮಗ್ರ ವ್ಯಕ್ತಿಗೆ ಚಿಕಿತ್ಸೆ ನೀಡುತ್ತವೆ. ಮಗುವಿಗೆ ಹೆಚ್ಚು ಸೂಕ್ತವಾದ ಪರಿಹಾರ ಒದಗಿಸುವ ಸಂದರ್ಭದಲ್ಲಿ, ಮಗುವಿಗೆ ಇರಬಹುದಾದ ದೈಹಿಕ ಲಕ್ಷಣಗಳಾದ ಅಸ್ತಮಾ, ಪದೆ ಪದೆ ಕಾಣಿಸಿಕೊಳ್ಳುವ ಕಿವಿ ಸೋಂಕು ಅಥವಾ ಇತರ ಯಾವುದೆ ಆರೋಗ್ಯ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.

(ಲೇಖಕರ ದೂರವಾಣಿ ಸಂಖ್ಯೆ 8880788123)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.