ಅತ್ತೂರಿನಲ್ಲಿ ಕಾಡಾನೆ ದಾಳಿ: ಬೆಳೆನಷ್ಟ

ಗುರುವಾರ , ಜೂಲೈ 18, 2019
26 °C

ಅತ್ತೂರಿನಲ್ಲಿ ಕಾಡಾನೆ ದಾಳಿ: ಬೆಳೆನಷ್ಟ

Published:
Updated:

ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು -ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಗುಡ್ಡೆಹೊಸೂರು ಸಮೀಪದ ಅತ್ತೂರು ಭಾಗದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ರೈತರ ಕೃಷಿ ಫಸಲು ಅಪಾರ ಪ್ರಮಾಣದಲ್ಲಿ ನಾಶಗೊಂಡಿದೆ.ಆನೆಕಾಡು ಮತ್ತು ಅತ್ತೂರು ಮೀಸಲು ಅರಣ್ಯದ ಒತ್ತಿನಲ್ಲಿರುವ ಅತ್ತೂರು ಗ್ರಾಮಕ್ಕೆ ಕಳೆದ ಮೂರ‌್ನಾಲ್ಕು ದಿನಗಳಿಂದ ಸಂಜೆಯಾದೊಡನೆ ಕಾಡಿನಿಂದ ಆಹಾರ ಅರಸಿ ಗ್ರಾಮದತ್ತ ನುಸುಳಿ ಬರುವ ಮೂರ‌್ನಾಲ್ಕು ಕಾಡಾನೆಗಳ ಹಿಂಡು ರೈತರ ಜಮೀನಿಗೆ ದಾಳಿಮಾಡಿ ಶುಂಠಿ, ಮುಸುಕಿನ ಜೋಳ, ಬಾಳೆ, ತೆಂಗು ಮತ್ತಿತರ ಕೃಷಿ ಫಸಲನ್ನು ನಾಶ ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.ಸಂಜೆಯಾದೊಡನೆ ಗ್ರಾಮದ ರಸ್ತೆಯಂಚಿಗೆ ಧಾವಿಸಿ ರೈತರ ಜಮೀನಿನ ಕಡೆ ಲಗ್ಗೆಯಿಡುವ ಕಾಡಾನೆಗಳ ದಾಳಿಯಿಂದ ಗ್ರಾಮಸ್ಥರು  ಭೀತಿಗೊಂಡಿದ್ದಾರೆ. ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಸಂಜೆಯಾದೊಡನೆ ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ತಲೆದೋರಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಕಾಡಿನಲ್ಲಿ ಆನೆಯ ಪ್ರಮುಖ ಆಹಾರವಾದ ಬಿದಿರು ಒಣಗಿರುವುದರಿಂದ ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಧಾವಿಸುತ್ತಿವೆ ಎಂದು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಬೆಟ್ಟಗೇರಿ ರಾಜು ಹೇಳಿದ್ದಾರೆ. ಅತ್ತೂರಿನ ರೈತರಾದ ದಿನೇಶ್, ಲೋಕೇಶ್, ಮುಕುಂದ, ಸುರೇಶ್, ರಮೇಶ್ ಮತ್ತಿತರರಿಗೆ ಸೇರಿದ ಕೃಷಿ ಫಸಲನ್ನು ಕಾಡಾನೆಗಳು ನಾಶಪಡಿಸಿವೆ ಎನ್ನಲಾಗಿದೆ.ಅತ್ತೂರು ಗ್ರಾಮಕ್ಕೆ ಪ್ರತಿನಿತ್ಯ ಧಾವಿಸುತ್ತಿರುವ ಕಾಡಾನೆಗಳ ದಾಳಿ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಡಾನೆ ದಾಳಿಯಿಂದ ಬೆಳೆ ನಷ್ಟಗೊಂಡ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry