ಮಂಗಳವಾರ, ನವೆಂಬರ್ 12, 2019
26 °C

ಅತ್ತ ನಾಯಕರ ಹಟ: ಇತ್ತ ಲಕ್ಷ್ಮೀ ಪುತ್ರರ ಹಾರಾಟ

Published:
Updated:

ರಾಯಚೂರು:  ಈ ಜಿಲ್ಲೆಯಲ್ಲಿ ಈ ವರ್ಷ ತಾಪಮಾನ ಗರಿಷ್ಠ 42 ಡಿಗ್ರಿ ಸೆಲ್ಶಿಯಸ್ ತಲುಪಿದೆ. ಈ ಗರಿಷ್ಠ ತಾಪಮಾನದಷ್ಟೇ ವಿಧಾನಸಭಾ ಚುನಾವಣೆ ಚಟುವಟಿಕೆ ಚುರುಕುಗೊಂಡಿದೆ. ಗೆಲ್ಲಲು ಪಣ ತೊಟ್ಟು ನಿಂತಿರುವ ಅಭ್ಯರ್ಥಿಗಳು ಹಗಲು- ರಾತ್ರಿ ಎನ್ನದೇ ಬೆವರು ಸುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರಗಳು ದೇವದುರ್ಗ ಮತ್ತು ಲಿಂಗಸುಗೂರು. ದೇವದುರ್ಗ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು. 2008ರಲ್ಲಿ ಜೆಡಿಎಸ್‌ನಿಂದ ಗೆದ್ದು ಬಳಿಕ ರಾಜೀನಾಮೆ ನೀಡಿ ಪುನಃ ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಗೆದ್ದು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾದ  ಕೆ. ಶಿವನಗೌಡ ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯದ್ದು. ಐದು ವರ್ಷದಲ್ಲಿ ಕೈಗೊಂಡ ಕಾರ್ಯಗಳೇ `ಏಳು-ಬೀಳು' ನಿರ್ಧರಿಸುವ ಮಾಪಕಗಳಾಗಿವೆ ಎನ್ನುತ್ತಾರೆ ಮತದಾರರು.2008ರಲ್ಲಿ ಶಿವನಗೌಡ ನಾಯಕ ವಿರುದ್ಧವೇ ಪರಾಭವಗೊಂಡಿದ್ದ ಎ. ವೆಂಕಟೇಶ ನಾಯಕ ಅವರಿಗೆ ಈ ಬಾರಿ ಕಾಂಗ್ರೆಸ್ ಮತ್ತೆ ಟಿಕೆಟ್ ಕೊಟ್ಟಿದೆ. ಪಕ್ಷದ ಹಿರಿಯ, 4 ಬಾರಿ ಸಂಸದರಾಗಿ ಕೆಲಸ ಮಾಡಿದವರು. ಹಾಗೆಯೇ ಸಂಭಾವಿತ ವ್ಯಕ್ತಿ. ಅನುಕಂಪದ ಅಲೆಯಲ್ಲಿ ಈ ಬಾರಿ ವೆಂಕಟೇಶ ನಾಯಕ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷದ್ದಾಗಿದೆ.ಈ ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ನಿರ್ಣಾಮ ಮಾಡಿದ ಶಿವನಗೌಡ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಭ್ಯರ್ಥಿಯನ್ನು ಕಣಕ್ಕಿಳಿಸದೇ ತನ್ನ ಮತ ಬ್ಯಾಂಕನ್ನೇ ಕಾಂಗ್ರೆಸ್ ಅಭ್ಯರ್ಥಿಗೆ ಬಿಟ್ಟು ಕೊಡಲು ಜೆಡಿಎಸ್ ಮುಂದಾಗಿರುವುದು ಬಹಿರಂಗ ಸತ್ಯ.

ಕುತೂಹಲ ಸೃಷ್ಟಿಸಿರುವ ಮತ್ತೊಂದು ಕ್ಷೇತ್ರವೆಂದರೆ ಲಿಂಗಸುಗೂರು. ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರವಿದು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‌ಆರ್ ಮತ್ತು ಕೆಜೆಪಿ ಸಮಬಲ ಪೈಪೋಟಿಗೆ ಮುಂದಾಗಿವೆಯಾದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ಕಾದಾಟ.ಬಿಜೆಪಿ ತೊರೆದ ಮಾನಪ್ಪ ವಜ್ಜಲ ಅವರು ಈ ಬಾರಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಗ್ರಾನೈಟ್ ಉದ್ಯಮಿ ಡಿ.ಎಸ್. ಹೂಲಗೇರಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಮತ್ತೊಬ್ಬ ಗ್ರಾನೈಟ್ ಉದ್ಯಮಿ ಸಿದ್ದು ಬಂಡಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ `ಲಕ್ಷ್ಮೀ ಕಟಾಕ್ಷ' ಶುರುವಾಗಿದೆ.ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಮತ್ತು ಬಿಜೆಪಿಯ ಅಭ್ಯರ್ಥಿಯಾದ ನಿವೃತ್ತ ಪೊಲೀಸ್ ಅಧಿಕಾರಿ ಟಿ.ಆರ್. ನಾಯಕ ಇವರಿಗೆ ಹಣದ `ಥೈಲಿ'ಗಿಂತ ಸ್ವಂತ ವರ್ಚಸ್ಸೇ ಬಂಡವಾಳ.ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿಯೇ ಭೋವಿ ವಡ್ಡರ ಸಮುದಾಯದವರಿಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ಪರಿಶಿಷ್ಟ ಜಾತಿಯ ಎಡ-ಬಲ ಸಮಾಜ ಬಾಂಧವರಿಗೆ ನೋವು ತಂದಿದೆ. ಇದೇ ಕಾರಣಕ್ಕೆ ಜಾತಿ ಹೆಸರಿನಲ್ಲಿ ಆಗಬಹುದಾದ ಮತಗಳ `ವಿಭಜನೆ' ಎಲ್ಲ ಪಕ್ಷಗಳ ಅಭ್ಯರ್ಥಿಗಳನ್ನು ಕಾಡುತ್ತಿದೆ ಎನ್ನುತ್ತಾರೆ ಕ್ಷೇತ್ರದ ಲೆಕ್ಕಾಚಾರದ ಮತದಾರರು.

ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಯ್ಯದ್ ಯಾಸಿನ್, ಜೆಡಿಎಸ್‌ನಿಂದ ಡಾ.ಶಿವರಾಜ ಪಾಟೀಲ್ ಸ್ಪರ್ಧಿಸಿದ್ದಾರೆ.ಬಿಜೆಪಿಯು ಈ ಬಾರಿ    ರಿಸ್ಕ್ ತೆಗೆದುಕೊಂಡು ತ್ರಿವಿಕ್ರಮ ಜೋಶಿ ಎಂಬ ಹೊಸಮುಖವನ್ನು  ಕಣಕ್ಕಿಳಿಸಿದೆ. ಗೆಲುವಿನ ನಗೆ ಬೀರಲು ಜೋಶಿ ತಂತ್ರ ಹೆಣೆದಿದ್ದಾರೆ. ಕ್ಷೇತ್ರದ ಪ್ರಮುಖ ಆಕರ್ಷಣೆ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಮತ್ತು ಚಲನಚಿತ್ರ ನಟಿ ಪೂಜಾ ಗಾಂಧಿ. ಕೆಜೆಪಿಯಿಂದ ಬಸವರಾಜ ಕಳಸ, ಬಿಎಸ್ಪಿಯಿಂದ ಸಾಫ್ಟ್‌ವೇರ್ ಎಂಜಿನಿಯರ್ ಹ್ಯಾರಿಸ್ ಸಿದ್ದಿಕಿ  ಸ್ಪರ್ಧಿಸಿದ್ದಾರೆ. ಯಾಸಿನ್ ಅವರ `ಭದ್ರ ಮತ ಬ್ಯಾಂಕನ್ನು' ಈ ಬಾರಿ ಜೆಡಿಎಸ್, ಬಿಎಸ್‌ಪಿ ಮತ್ತು ಬಿಎಸ್‌ಆರ್ ಪಕ್ಷದ ಅಭ್ಯರ್ಥಿಗಳು ಛಿದ್ರ ಮಾಡುವ ಲಕ್ಷಣಗಳಿವೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ.ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಜಿಪಂ ಮಾಜಿ ಸದಸ್ಯ ಮಲ್ಲೇಶ ನಾಯಕ ಹೊರತು ಪಡಿಸಿದರೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದ ಹೊರಗಿನವರೇ ಆಗಿದ್ದಾರೆ. ಜೆಡಿಎಸ್‌ನ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್ ಪಕ್ಷದ ರಾಜಾ ರಾಯಪ್ಪ ನಾಯಕ ಈ ಇಬ್ಬರೂ ಸಹೋದರರು ಪೈಪೋಟಿಗೆ ಇಳಿದಿದ್ದಾರೆ. ಇದರ ಲಾಭ ಪಡೆಯಲು ಬಿಜೆಪಿ ಅಭ್ಯರ್ಥಿ ತಿಪ್ಪರಾಜ ಹವಾಲ್ದಾರ ಹವಣಿಸುತ್ತಿದ್ದಾರೆ.ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಶಿವನಗೌಡ ನಾಯಕ ಅವರೇ ತಿಪ್ಪರಾಜ ಅವರ ಬೆನ್ನ ಹಿಂದಿರುವ ಬಂಡವಾಳ. ಕೆಜೆಪಿ ಅಭ್ಯರ್ಥಿ ಮಲ್ಲೇಶ ನಾಯಕ, ಬಿಎಸ್ಪಿಯ ಎಂ ವಿಜಯಲಕ್ಷ್ಮೀ ನೀಲಕಂಠ ಬೇವಿನ್ ಅವರಿಗೆ ಸ್ಥಳೀಯರು ಎಂಬುದೇ ಮುಖ್ಯ ಬಂಡವಾಳ. ಈ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ.ಸಿಂಧನೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 2008ರಲ್ಲಿ ಅದನ್ನು ಛಿದ್ರ ಮಾಡಿದ್ದು ಜೆಡಿಎಸ್ ಪಕ್ಷದ ವೆಂಕಟರಾವ್ ನಾಡಗೌಡ. ಈಗ ಮತ್ತೆ ಭದ್ರಕೋಟೆಯಲ್ಲಿ ಕದನ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಹಳೆಯ ಹುಲಿ ಹಂಪನಗೌಡ ಬಾದರ್ಲಿ ಕಾಂಗ್ರೆಸ್‌ನಿಂದ, ವೆಂಕಟರಾವ್ ನಾಡಗೌಡ ಜೆಡಿಎಸ್‌ನಿಂದ, ಬಿಜೆಪಿಯಿಂದ ಕೊಲ್ಲಾ ಶೇಷಗಿರಿರಾವ್, ರಾಜಶೇಖರ ಪಾಟೀಲ್ ಕೆಜೆಪಿಯಿಂದ ಹಾಗೂ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರ ತಮ್ಮನ ಮಗ ಕೆ. ಕರಿಯಪ್ಪ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಎಸ್‌ಆರ್ ನಡುವೆ  ಸ್ಪರ್ಧೆ ಇದೆ.ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಂಪಯ್ಯ ನಾಯಕ ಹಾಗೂ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ ನಡುವೆ ನೇರ ಸ್ಪರ್ಧೆ ಇದೆ. ಕೆಜೆಪಿಯ ಗಂಗಾಧರ ನಾಯಕ, ಬಿಎಸ್‌ಆರ್ ಪಕ್ಷದ ದದ್ದಲ ಬಸನಗೌಡ ಸ್ಪರ್ಧೆಯಲ್ಲಿ ಗೆಲ್ಲಲು ಪ್ರಯಾಸ ಪಡಲೇಬೇಕಾಗಿದೆ.ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರತಾಪಗೌಡ ಪಾಟೀಲ್ ಅವರಿಗೆ ಅವರ ಮಾವ ಮಹಾದೇವಪ್ಪಗೌಡ ಅವರೇ ಪ್ರಬಲ ಸ್ಪರ್ಧಿ. ಕೆಜೆಪಿ ಪಕ್ಷದಿಂದ ಮಹಾದೇವಪ್ಪಗೌಡ ಅವರು ಅಳಿಯನ ವಿರುದ್ಧ ತೊಡೆ ತಟ್ಟಿದ್ದಾರೆ.ಮತದಾನದ ದಿನ ಸಮೀಪಿಸುತ್ತಿದ್ದಂತೆ ಎಲ್ಲ 7 ಕ್ಷೇತ್ರದ ಚಿತ್ರಣವನ್ನೇ ಉಲ್ಟಾ ಮಾಡಿಬಿಡುವ ಘಟಾನುಘಟಿಗಳೇ ಕಣದಲ್ದ್ದ್‌ದಾರೆ. ಹೀಗಾಗಿ ಫಲಿತಾಂಶ ಹೀಗೇ ಎಂದು ಊಹಿಸುವುದು ಕಷ್ಟ.

ಪ್ರತಿಕ್ರಿಯಿಸಿ (+)