ಅತ್ತ ಹಿನ್ನೀರು ಇತ್ತ ಸಾಗರ

7

ಅತ್ತ ಹಿನ್ನೀರು ಇತ್ತ ಸಾಗರ

Published:
Updated:

ಶುಲ್ಕ ಕೊಟ್ಟಿರುವುದು ಕೇವಲ ಒಂದು ಸುತ್ತು ಬೋಟಿಂಗ್‌ಗೆ ಮಾತ್ರ ಎಂದುಕೊಂಡಿದ್ದೆವು. ಆದರೆ ಎರಡು ಕಿಲೋಮೀಟರ್ ದೂರ ತೇಲಿದ ಯಾಂತ್ರಿಕ ದೋಣಿ ಒಂದೆಡೆ ದಡದಲ್ಲಿ ನಮ್ಮನ್ನು ಇಳಿಸಿ, ಹೊರಟುಹೋಯಿತು. ಆಗಲೇ ಗೊತ್ತಾಗಿದ್ದು ಆ ಕಡೆ ಸಮುದ್ರತೀರ ಇದೆ ಎಂಬುದು!ನುಣ್ಣನೆಯ ಬಿಳಿ ಉಸುಕು. ತಿಳಿ ನೀಲಿ ಬಣ್ಣದ ಅಲೆಗಳು. ಮಾಲಿನ್ಯ ತಟ್ಟದ ಸಾಗರತೀರ... ಇದು ಪ್ಯಾರಡೈಸ್ ಬೀಚ್‌ನ ವೈಶಿಷ್ಟ್ಯ. ಪಾಂಡಿಚೇರಿಯಿಂದ ಕಡಲೂರು ಹೆದ್ದಾರಿಯಲ್ಲಿರುವ ಚುನ್ನಂಬರ್ ಎಂಬ ಗ್ರಾಮದ ಪಕ್ಕದಲ್ಲಿದೆ ಈ ಬೀಚ್. ಹೆಸರೇ ‘ಪ್ಯಾರಡೈಸ್ ಬೀಚ್’. ಅಂದ ಮೇಲೆ ಮನರಂಜನೆ, ಜಲಕ್ರೀಡೆ, ಆಹಾರ-ವಿಹಾರಕ್ಕೆ ಕೊರತೆ ಎಂಬುದಿಲ್ಲ. ಇದೊಂದು ಸುಂದರ ತಾಣವಾಗಿ ರೂಪುಗೊಳ್ಳುವಲ್ಲಿ ಪ್ರವಾಸೋದ್ಯಮ ಇಲಾಖೆಯ ಆಸಕ್ತಿ ಎದ್ದು ಕಾಣುತ್ತದೆ.ಅರ್ಧಭಾಗ ಹಿನ್ನೀರಿನಿಂದ ಸುತ್ತುವರಿದು, ಇನ್ನೊಂದು ಕಡೆ ಸಮುದ್ರವಿರುವ ಈ ಬೀಚ್ ಒಂದರ್ಥದಲ್ಲಿ ದ್ವೀಪದಂತೆ. ಚುನ್ನಂಬರ್‌ನಿಂದ ಬೋಟ್‌ಹೌಸ್‌ಗಳಲ್ಲಿ ತೆರಳಿ ತಲುಪಬೇಕು. ಈ ಬೋಟ್‌ಗಳಲ್ಲೂ ಹಲವು ವಿಧ. ನಾಲ್ಕರಿಂದ ನಲ್ವತ್ತು ಜನರ ಸಾಮರ್ಥ್ಯವುಳ್ಳ ದೋಣಿಗಳಿವೆ. ಸ್ವಲ್ಪ ಹೆಚ್ಚು ಹಣ ನೀಡಿದರೆ, ಹೈಡ್ರೋಪ್ಲೇನ್ ಕೂಡ ಲಭ್ಯ. ಇಬ್ಬರು ಕುಳಿತುಕೊಳ್ಳುವ ಸಾಮರ್ಥ್ಯದ ಈ ಬೋಟ್‌ನಲ್ಲಿ ಅತ್ಯಂತ ವೇಗವಾಗಿ ಸಾಗುವುದೇ ರೋಮಾಂಚಕ ಅನುಭವ.ಒಂದೊಮ್ಮೆ ಸಾಗರತಟ ತಲುಪಿದರೆ ಆಯ್ತು; ಮನರಂಜನೆಗೆ ಮಿತಿ ಎಂಬುದೇ ಇಲ್ಲ. ಬೆನ್ನಿಗೆ ರಬ್ಬರ್ ಟ್ಯೂಬ್ ಕಟ್ಟಿಕೊಂಡು ಸಮುದ್ರದ ಅಲೆಗಳ ಮೇಲೆ ತೇಲಾಡಬಹುದು. ನುಣುಪಾದ ಉಸುಕಿನಲ್ಲಿ ಆಟವಾಡಲು ಪ್ರವಾಸೋದ್ಯಮ ಕೇಂದ್ರದಿಂದ ವಾಲಿಬಾಲ್, ನೆಟ್ ಬಾಡಿಗೆಗೆ ಪಡೆಯಬಹುದು. ಮೀನು ಹಿಡಿಯುವ ಬಯಕೆಯಿದ್ದರೆ ಅದಕ್ಕೂ ಗಾಳ ಸಿಗುತ್ತವೆ. ದೊಡ್ಡ ಹಡಗಿನಲ್ಲಿ ದೂರ ಸಾಗಿ, ಡಾಲ್ಫಿನ್‌ಗಳನ್ನು ಅವುಗಳ ವಾಸಸ್ಥಾನದಲ್ಲೇ ‘ಭೇಟಿ’ ಮಾಡಬಹುದು. ಸಾಗರತಟದಲ್ಲಿ ರುಚಿಕಟ್ಟಾದ ಅಡುಗೆ ಮಾಡಿ, ಬಡಿಸುವ ಹೋಟೆಲ್‌ಗಳಿವೆ. ಗಡದ್ದಾಗಿ ಉಂಡು ವಿಶ್ರಾಂತಿ ಪಡೆಯಲು ಕಾಟೇಜ್‌ಗಳೂ ಉಂಟು.ಸಂಜೆ ಆರು ಗಂಟೆಯವರೆಗೆ ಸಮುದ್ರದ ದಡದಲ್ಲಿ ಓಡಾಡಿ, ಆಟವಾಡಲು ಅವಕಾಶವಿದೆ. ನಂತರ ರಕ್ಷಣಾ ಸಿಬ್ಬಂದಿ ಈ ಜಾಗದಲ್ಲಿ ಯಾರೂ ಇರದಂತೆ ನಿಗಾ ವಹಿಸುತ್ತಾರೆ. ದೋಣಿಯಲ್ಲಿ ವಾಪಸು ಚುನ್ನಂಬರ್‌ಗೆ ಮರಳಿದರೆ, ಉಳಿದುಕೊಳ್ಳಲು ‘ಟ್ರೀಟಾಪ್ ಹೌಸ್’ (ಮರಮನೆ) ಲಭ್ಯ. ಎತ್ತರದ ಮರಗಳ ಮೇಲೆ ಸರಳ ಹಾಗೂ ಸುಂದರವಾಗಿ ನಿರ್ಮಿಸಿದ ಈ ಮನೆಗಳ ಬಾಲ್ಕನಿಯಿಂದ ಸೂರ್ಯಾಸ್ತದ ಮನೋಹರ ದೃಶ್ಯ ಕಾಣಿಸುತ್ತದೆ. ಊಟ- ಉಪಾಹಾರ ಬೇಕಿದ್ದರೆ, ಕೆಳಗಿನ ರೆಸ್ಟೊರೆಂಟ್‌ಗೆ ಹೇಳಿದರಾಯಿತು. ಹಗ್ಗದ ಮೆಟ್ಟಿಲುಗಳ ಮೇಲೇರಿ ಊಟದ ತಟ್ಟೆ ನಿಮ್ಮಲ್ಲಿಗೆ ಬರುತ್ತದೆ.ಬೋಟಿಂಗ್, ಸಮುದ್ರಸ್ನಾನ, ಜಲಕ್ರೀಡೆಯಂಥ ರಂಜನೆಗಳ ‘ಮಿಶ್ರಣ’ವೇ ಈ ಸಾಗರತೀರ. ಪಾಂಡಿಚೇರಿಗೆ ಭೇಟಿ ಕೊಡುವವರು ಚುನ್ನಂಬರ್ ಬೀಚ್‌ಗೆ ಹೋಗದೇ ಇದ್ದರೆ ಆ ಪ್ರವಾಸ ಅಪೂರ್ಣವಾದಂತೆಯೇ ಸೈ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry