ಅತ್ಯಧಿಕ ರಸಗೊಬ್ಬರ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ ಶಂಕೆ!

ಶುಕ್ರವಾರ, ಮೇ 24, 2019
28 °C

ಅತ್ಯಧಿಕ ರಸಗೊಬ್ಬರ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ ಶಂಕೆ!

Published:
Updated:

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪದ್ಧತಿ ಉಲ್ಲಂಘನೆ ಮಾಡಿ ಬತ್ತ ನಾಟಿಗೆ ಶರಣಾಗಿದ್ದು ಒಂದಡೆಯಾದರೆ ನಾಟಿ ಮಾಡಿದ ಬತ್ತ ಹಾಗೂ ಇತರ ಬೆಳೆಗಳಿಗೆ ರಾಜ್ಯದಲ್ಲಿಯೇ ಅತ್ಯಧಿಕ ರಸಗೊಬ್ಬರ ಬಳಕೆಯ ಕೇಂದ್ರವೂ ಇದಾಗಿದೆ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯವು ಬೊಟ್ಟು ಮಾಡಿ ತೋರಿಸಿದೆ.ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ಯೂರಿಯಾ ಹಾಗೂ ಡಿಎಪಿ ಗೊಬ್ಬರದ ಅಭಾವ ಅಧಿಕವಾಗಿದ್ದು ರೈತರು ದಿನವೂ ಟಿಎಪಿಎಂಸಿ ಕೇಂದ್ರ ಹಾಗೂ ರಸಗೊಬ್ಬರ ಅಂಗಡಿಗಳ ಮುಂದೆ ಸಾಲಾಗಿ ನಿಲ್ಲುವುದು ಕಾಯಕವಾಗಿದೆ. ಇದರ ದುರ್ಲಾಭ  ಪಡೆದುಕೊಳ್ಳುವ ಸಲುವಾಗಿ  ಕೆಲ ರಸಗೊಬ್ಬರದ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುವುದು ಗುಟ್ಟಾಗಿ ಉಳಿದಿಲ್ಲ.ಬರಗಾಲದ ದವಡೆಯಿಂದ ಹೊರಬಂದು ರೈತರ ನೆಮ್ಮದಿ ಬದುಕು ಹಸಿರಾಗಲಿ ಎಂದು ಸರ್ಕಾರ ರೂಪಿಸಿದ ನೀರಾವರಿ ಯೋಜನೆ ಉದ್ದೇಶ ಇಲ್ಲಿ ನಗಣ್ಯವಾಗಿದೆ. ಅತಿಯಾದ ಆಸೆಗೆ ಜೋತು ಬಿದ್ದು ಬತ್ತ ಬೆಳೆಗೆ ಮೊರೆ ಹೋಗಿ ಕಾನೂನು ಕೈಗೆ ತೆಗೆದುಕೊಂಡು ಮೇಲ್ಭಾಗದ ಕಾಲುವೆ ಜಾಲದ ರೈತರು ಮನಬಂದಂತೆ ಕಾಲುವೆ ಸೀಳಿ ಅಕ್ರಮವಾಗಿ ನೀರು ಪಡೆದುಕೊಳ್ಳುವುದು ಒಂದು ಭಾಗವಾದರೆ, ಬೆಳೆ ಪದ್ಧತಿ ಉಲ್ಲಂಘನೆ ಮಾಡಿ ಅತ್ಯಧಿಕ ರಸಗೊಬ್ಬರ ಬಳಕೆ ಮಾಡುವುದು ಇನ್ನೊಂದು ಕರಾಳ ಮುಖವನ್ನು ತೆರೆದಿಡುತ್ತಿದ್ದಾರೆ ಎನ್ನುತ್ತಾರೆ ರೈತ ಸಂಗಪ್ಪ.ಅತಿಯಾದ ರಸಗೊಬ್ಬರದ ಉಪಯೋಗದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದ್ದು ಭೂಮಿಯ ಸೂಕ್ಷ್ಮಾಣುಗಳು ನಾಶವಾಗುತ್ತಲಿವೆ. ಈಗಾಗಲೇ ಹಲವು ಪ್ರದೇಶದ ಜವಳು ಭೂಮಿಯಾಗಿ ಪರಿವರ್ತನೆಯಾಗಿದ್ದು. ಬರುವ ದಿನಗಳಲ್ಲಿ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ಭೀಮರಾಯನಗುಡಿ ಕೃಷಿ ವಿಜ್ಞಾನಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.ವಿಷಕಾರಿ ರಸಗೊಬ್ಬರ ಬಳಕೆ ಹಾಗೂ ಬೆಳೆಗೆ ಸಿಂಪಡಿಸಿದ ಔಷಧಿಯ ನೀರು ನೇರವಾಗಿ ಹಳ್ಳ, ನಾಲೆ, ನದಿಗೆ ಹರಿ ಬಿಡುತ್ತಿರುವುದರಿಂದ ಈ ಕಲುಷಿತ ನೀರು ಸೇವನೆಯಿಂದ ಜೀವ ಸಂಕುಲವು ಅಪಾಯದ ಅಂಚಿಗೆ ತಲುಪಿದೆ ಎನ್ನುತ್ತಾರೆ ಶಂಕ್ರಪ್ಪ.ಇನ್ನೊಂದು ಆಘಾತಕಾರಿ ಅಂಶವೆಂದರೆ ಬತ್ತ ನಾಟಿ ಯಿಂದ ನಿರಂತರವಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ಸೂಕ್ತ ಜಾಗವಾಗಿದ್ದು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ವಿಪರೀತ ಸೊಳ್ಳೆಗಳ ಕಾಟವಾಗಿದೆ. ಇದರಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾ ಬೀರುತ್ತಿದೆ.ಮಲೇರಿಯಾ. ಟೈಫಾಯ್ಡ, ಜ್ವರ ಕಾಣಿಸುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಪರಿಸರ ಹಾಳಾಗುವುದರ ಜೊತೆಯಲ್ಲಿ ಆರೋಗ್ಯಕ್ಕೂ ಕುತ್ತು ಬಂದಿದೆ ಎನ್ನುತ್ತಾರೆ ವಕೀಲ ಆರ್.ಎಂ.ಹೊನ್ನಾರಡ್ಡಿ.ಇವೆಲ್ಲದರ ನಡುವೆ ತಾಲ್ಲೂಕಿನ ಗೋಗಿಯಲ್ಲಿ ಸ್ಥಾಪಿಸಲು ಹೊರಟಿರುವ ಯುರೇನಿಯಂ ಘಟಕದಿಂದ ಮತ್ತಷ್ಟು ನಡುಕ ಶುರುವಾಗಿದೆ. ಅಣು ವಿಕಿರಣತೆಯಿಂದ ಮನುಕುಲಕ್ಕೆ ಶಾಪದ ಭೀತಿ ಆವರಿಸಿದೆ. ಕೇವಲ ಗೋಗಿ ಗ್ರಾಮದ ಜನತೆಯ ನೋವು ಅಲ್ಲ; ಅದರ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳು ಮತ್ತು ಪಟ್ಟಣದ ಜನತೆಯನ್ನೂ ನಿದ್ದೆಗೆಡಿಸಿದೆ. ಬದುಕಿನ ರಕ್ಷಾಕವಚ ಆಗಬೇಕಾದ ಜನಪ್ರತಿನಿಧಿಗಳು ಹಾಗೂ  ಬೆಳೆ ಪದ್ಧತಿ ಕಾನೂನು ಉಲ್ಲಂಘಿಸಿ ಪರಿಸರ ಹಾಗೂ ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಂಡು ಮೆರೆಯುತ್ತಿರುವ ಜನತೆಗೆ ಯಾವ ಕಾನೂನು ಇಲ್ಲವೆ ಎಂದು ನೊಂದ ಸಾರ್ವಜನಿಕರ ಅಳಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry