ಅತ್ಯಾಚಾರಕ್ಕೆ ಬಿ-ಸಿಟಿ ಕೆಂಡಾಮಂಡಲ

7

ಅತ್ಯಾಚಾರಕ್ಕೆ ಬಿ-ಸಿಟಿ ಕೆಂಡಾಮಂಡಲ

Published:
Updated:

`ಛೆ,  ಬರೆಯಲಿಕ್ಕೂ ಹೇಸಿಗೆ ಅನಿಸುತ್ತಿದೆ. ಇಂಥ ಪಾಶವೀ ಕೃತ್ಯಕ್ಕೆ ಮನಸಾದರೂ ಹೇಗೆ ಬಂತು? ಪಶುಗಳೂ ಹೀಗೆ ವರ್ತಿಸುವುದಿಲ್ಲ. ನಾಗರಿಕ ಸಮಾಜವೇ ತಲೆತಗ್ಗಿಸುವಂಥ ವರ್ತನೆ ಇದು' ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.


ಚೆನ್ನೈ ಸಿನಿಮಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು `ಮಹಿಳೆಯರನ್ನು ಪೂಜಿಸುವ ಸಂಸ್ಕೃತಿ ಇರುವ ದೇಶ ಇದು. ಇಂಥ ವಿಕೃತಿಗೆ ಅವಕಾಶವಾದರೂ ಹೇಗೆ ದೊರೆಯಿತು? ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಸಾಂಗತ್ಯ ಹಾಗೂ ಸಾಮೀಪ್ಯ ಎರಡೂ ಗೌರವದಿಂದ ಗಳಿಸಬೇಕೆ ಹೊರತು, ಕ್ರೌರ್ಯದಿಂದಲ್ಲ. ನಾಗರಿಕ ಸಮಾಜದಲ್ಲಿ ಕ್ರೌರ್ಯವೇ ಮೇಲುಗೈ ಸಾಧಿಸುವುದು ಸಾಧುವಲ್ಲ' ಎಂದು ಅಮಿತಾಬ್ ಅಭಿಪ್ರಾಯ ಪಟ್ಟಿದ್ದಾರೆ.  

 

ನವದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ಇಡೀ ಬಿ-ಟೌನ್ ಟೀಕೆಯ ನದಿ ಹರಿಸಿದೆ. ಸಲ್ಮಾನ್ ಖಾನ್ ಅಂತೂ `ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಥಳಿಸಬೇಕು. ಇಂಥವರಿಗೆಲ್ಲ ಸಾಯುವವರೆಗೂ ಹೊಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕಾನೂನಿನ ವ್ಯಾಪ್ತಿಯಲ್ಲಿ ಇದೆಲ್ಲ ಸಾಧ್ಯವಿಲ್ಲ. ಕೊನೆಯ ಪಕ್ಷ, ಕಾನೂನಿನ ವ್ಯಾಪ್ತಿಯಲ್ಲಿಯೇ ಕಠಿಣಾತಿಕಠಿಣ ಶಿಕ್ಷೆಯನ್ನು ಅತ್ಯಾಚಾರಿಗಳಿಗೆ ವಿಧಿಸಬೇಕು' ಎಂದು ಹೇಳಿದ್ದಾರೆ ಚುಲ್‌ಬುಲ್ ಪಾಂಡೆ.

 

ಅನುಪಮ್  ಖೇರ್ `ಖಂಡಿತವಾಗಿಯೂ ಈ ಅತ್ಯಾಚಾರಿಗಳು ತಾಯಿಗೆ ಹುಟ್ಟಿದವರಲ್ಲ. ಇವರ‌್ಯಾರಿಗೂ ಸಹೋದರಿಯರು, ಪತ್ನಿ ಇದ್ದಂತಿಲ್ಲ. ಇಂಥ ಕೃತ್ಯಕ್ಕೆ ವಿಕೃತ ಮನಸು ಕಾರಣ. ಇಡೀ ಸಮಾಜವೇ ತಲೆತಗ್ಗಿಸುವ ಕೆಲಸ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಬಿಪಾಶಾ ಬಸು, `ಹುಡುಗಿಯರಿಗೆ ರಾತ್ರಿ ಓಡಾಡಬೇಡಿ, ತುಂಡುಡುಗೆ ತೊಡಬೇಡಿ ಅಂತೆಲ್ಲ ಜಾಗ್ರತೆ ಹೇಳುವುದೇ ಹೇಯಕರ. ಇದು ಎಂಥ ಸಮಾಜ ಎಂಬ ಪ್ರಶ್ನೆ ಬರುವುದಿಲ್ಲವೇ' ಎಂದು ಪ್ರಶ್ನಿಸಿದ್ದಾರೆ.

 

ಕಂಗನಾ ರಣೌತ್ ನಟಿಸುತ್ತಿರುವ `ಕ್ವೀನ್' ಚಿತ್ರತಂಡದವರು ಶುಕ್ರವಾರ ಕಪ್ಪು ವಸ್ತ್ರ ಧರಿಸಿ ಪ್ರತಿಭಟಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯನ್ನು ಬೆಂಬಲಿಸುವುದಾಗಿ ಈ ತಂಡ ಹೇಳಿದೆ.  ನಿರ್ದೇಶಕ ವಿಕಾಸ್ ಬೆಹ್ಲ್, `ಈ ದೇಶದಲ್ಲಿ ಯುವತಿಯರು ಯಾವ ಸಮಯದಲ್ಲಿಯಾದರೂ ಮುಕ್ತವಾಗಿ ಒಂಟಿಯಾಗಿ ಓಡಾಡುವಂಥ ವಾತಾವರಣ ನಿರ್ಮಾಣವಾಗಬೇಕು' ಎಂದು ಹೇಳಿದ್ದಾರೆ.

 

ಮಾಧವನ್ `ಇಂಥ ಜನರಿಗೆ ಈ ಭೂಮಿಯಲ್ಲಿ ಸ್ಥಾನವಿರಕೂಡದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಿಯಾ ಮಿರ್ಜಾ, `ಈ ಬಗ್ಗೆ ಚರ್ಚೆ ಸಾಕು. ಶಿಕ್ಷೆಯಾಗಲೇಬೇಕು' ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ದೀಪಾ ಮೆಹ್ತಾ, ಹತ್ತಿಪ್ಪತ್ತು ವರ್ಷಗಳ ಹಿಂದೆ ದೆಹಲಿ ಹೀಗಿರಲಿಲ್ಲ. ನಾವೆಲ್ಲ ಮುಕ್ತವಾಗಿ ಓಡಾಡುತ್ತಿದ್ದೆವು. ಆಗಿನ ಕಾಲಕ್ಕೆ ಅತ್ಯಾಧುನಿಕ ಎನಿಸುವ ಉಡುಗೆಗಳನ್ನೇ ತೊಡುತ್ತಿದ್ದೆವು. ಈಗೇನಾಗಿದೆ? ಹೆಣ್ಣುಮಕ್ಕಳ ಮೇಲೆ ನಿಯಂತ್ರಣ ಹೇರುವ ಬದಲು, ಅಂಥ ಸನ್ನಿವೇಶ ಉದ್ಭವವಾಗದಂಥ ಸಂಸ್ಕಾರಗಳನ್ನು ಪುರುಷರಲ್ಲಿ ಬೆಳೆಸಬೇಕಿದೆ' ಎಂದು ಕಾಲೇಜೊಂದರಲ್ಲಿ ಹೇಳಿದ್ದಾರೆ.

 

`ಘಟನೆ ನಡೆದಾಗ ಎಲ್ಲರೂ ಮಾತನಾಡುತ್ತೇವೆ. ನ್ಯಾಯ ಬೇಕು ಎಂದು ಆಗ್ರಹಿಸುತ್ತೇವೆ. ನಂತರ ಮರೆತು ಹೋಗುತ್ತೇವೆ... ಏನಾಗಿದೆ ನಮ್ಮಳಗಿನ ಮನುಷ್ಯತ್ವಕ್ಕೆ? ಒಂದು ಹೇಯ ಕೃತ್ಯಕ್ಕೆ ನಾವು ಹೀಗೆ ಸ್ಪಂದಿಸಬೇಕೆ? ನ್ಯಾಯ, ಶಿಕ್ಷೆಗಿಂತ ಸುರಕ್ಷಿತ ಸಮಾಜದ ಬಗ್ಗೆ ಕಾಳಜಿ ವ್ಯಕ್ತವಾಗಬೇಕು' ಎಂದು ಶಾಹಿದ್ ಕಪೂರ್ ಬರೆದ್ದಾರೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry