ಅತ್ಯಾಚಾರದ ವಿರುದ್ಧ ಸಿಡಿದೆದ್ದ ಯುವಶಕ್ತಿ

7

ಅತ್ಯಾಚಾರದ ವಿರುದ್ಧ ಸಿಡಿದೆದ್ದ ಯುವಶಕ್ತಿ

Published:
Updated:
ಅತ್ಯಾಚಾರದ ವಿರುದ್ಧ ಸಿಡಿದೆದ್ದ ಯುವಶಕ್ತಿ

ಧಾರವಾಡ: ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಭವಿಸಿ ಇನ್ನೇನು ತಿಂಗಳಾಗುತ್ತ ಬಂತು. ಆದರೆ ಆ ಹೀನ ಕೃತ್ಯವನ್ನು ಖಂಡಿಸಲು ನಗರದಲ್ಲಿ ಗುರುವಾರ ಸೇರಿದ್ದ ಬೃಹತ್ ವಿದ್ಯಾರ್ಥಿ ಸಮೂಹವನ್ನು ನೋಡಿದಾಗ ಇನ್ನೂ ಆ ಘಟನೆ ಮನದಿಂದ ಮರೆಯಾಗಿಲ್ಲ ಎಂಬುದನ್ನು ಸ್ಪಷ್ಟವಾಯಿತು.ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲರೂ ಸಮಾವೇಶಗೊಳ್ಳುವುದು ಎಂದು ನಿರ್ಧಾರವಾಗಿತ್ತು. ಅದರಂತೆ ಬೆಳಿಗ್ಗೆ 10 ಗಂಟೆಯಿಂದಲೇ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ಕಾಲೇಜುಗಳಿಂದ ತೊರೆಗಳಂತೆ ಹರಿದು ಕ್ರೀಡಾಂಗಣದಲ್ಲಿದ್ದ ಸಮುದ್ರಕ್ಕೆ ಸೇರಿದಂತೆ ಭಾಸವಾಯಿತು.`ಅತ್ಯಾಚಾರ ಘಟನೆಗಳನ್ನು ವಿರೋಧಿಸಲು ಸಂಘಟಿತವಾಗಿ ಬಂದ ಇಂತಹ ಯುವ ಸಮೂಹವನ್ನು ಇಷ್ಟು ವರ್ಷಗಳಲ್ಲಿ ಕಂಡೇ ಇಲ್ಲ' ಎಂದು ರ‌್ಯಾಲಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡಿದ ಲೇಖಕಿ ಹೇಮಾ ಪಟ್ಟಣಶೆಟ್ಟಿ ಅವರ ಅನುಭವವವೇ ಇತರರದೂ ಆಗಿತ್ತು.ನಗರದ ಜೆಎಸ್‌ಎಸ್ ಕಾಲೇಜು, ಕೆಸಿಡಿ ಕಾಲೇಜು, ಕಿಟ್ಟೆಲ್ ಕಾಲೇಜು, ಬಾಸೆಲ್ ಮಿಷನ್ ಕಾಲೇಜು, ಸಿಎಸ್‌ಐ ಕಾಲೇಜಿನ ವಿದ್ಯಾರ್ಥಿಗಳು, ಅಂಜುಮನ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಈ ಐತಿಹಾಸಿಕ ಹೋರಾಟದಲ್ಲಿ ಭಾಗವಹಿಸಿದ್ದರು. ಸಂಘಟಕರ ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರು ತಮ್ಮ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು.ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳ ರ‌್ಯಾಲಿಯು ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಇಡೀ ಡಿಸಿ ಕಚೇರಿಯ ಮುಂಭಾಗ ಯುವ ಪ್ರತಿಭಟನಾಕಾರರಿಂದ ತುಂಬಿ ಹೋಗಿತ್ತು.ಆಂದೋಲನದ ಸಂಚಾಲಕ ಶಂಕರ ಹಲಗತ್ತಿ, ಡಾ.ವಿನಯಾ ಒಕ್ಕುಂದ, ಸಿಪಿಎಂ ಪಕ್ಷದ ಮುಖಂಡ ಬಿ.ಎಸ್.ಸೊಪ್ಪಿನ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಎಚ್.ಜಿ.ದೇಸಾಯಿ ಸಭೆಯಲ್ಲಿ ಮಾತನಾಡಿದರು.ಹಿರಿಯ ಸಂಗೀತಗಾರ ಪಂ.ವೆಂಕಟೇಶಕುಮಾರ್, ಪ್ರೊ.ಎನ್.ಆರ್.ಬಾಳಿಕಾಯಿ, ಡಾ.ಎಂ.ಡಿ.ಒಕ್ಕುಂದ, ಸಮುದಾಯ ಜಿಲ್ಲಾ ಸಂಚಾಲಕ ಬಿ.ಐ. ಈಳಿಗೇರ, ಮಹಿಳಾ ಕಾಂಗ್ರೆಸ್‌ನ ನಿರ್ಮಲಾ ಹೊಂಗಲ, ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ಸಂಚಾಲಕಿ ಪ್ರಭಾವತಿ ಗೂಗಲ್, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಮಾರುತಿ ಅಂಬಿಗೇರ, ಜ್ಯೋತಿ, ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ, ಎಐಡಿವೈಓ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬೆತ್ತ ಹಿಡಿದ ಟೀಚರ್!

ಪ್ರತಿಭಟನೆಯ ವೇಳೆ ಕೆಲ ಪುಂಡ ಹುಡುಗರೂ ಸೇರಿಕೊಂಡಿದ್ದರು. ಇದನ್ನು ಗಮನಿಸಿದ ಜೆಎಸ್‌ಎಸ್ ಕಾಲೇಜಿನ ಹಿರಿಯ ಉಪನ್ಯಾಸಕಿ ಪ್ರೊ.ಸುಕನ್ಯಾ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿ ಬೆತ್ತ ಹಿಡಿದುಕೊಂಡು ಹುಡುಗರನ್ನು ಓಡಿಸುತ್ತಿದ್ದರು. ತರಗತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೆತ್ತ ಇಡುವ ರೂಢಿಯೇ ನಿಂತು ಹೋಗಿದೆ. ಆದರೆ ಪುಂಡ ಹುಡುಗರನ್ನು ನಿಯಂತ್ರಿಸಲು ಸುಕನ್ಯಾ ಬೆತ್ತ ಹಿಡಿದಿದ್ದರು.

ಹರಿದು ಹೋಯ್ತು ಅಶ್ಲೀಲ ಪೋಸ್ಟರ್

ಧಾರವಾಡದ ಲಕ್ಷ್ಮಿ ಥಿಯೇಟರ್ ಬಳಿ ವಾರದ ಹಿಂದೆ ಅಂಟಿಸಿದ್ದ `ಟೇಬಲ್ ನಂ 21' ಚಲನಚಿತ್ರದ ಅಶ್ಲೀಲ ಪೋಸ್ಟರ್ ವಿದ್ಯಾರ್ಥಿನಿಯರ ಮೆರವಣಿಗೆ ಬರುವಷ್ಟರಲ್ಲೇ ಹರಿದು ಹೋಗಿತ್ತು. ರ‌್ಯಾಲಿ ಆರಂಭವಾಗುವ ಹಂತದಲ್ಲೇ ವಿದ್ಯಾರ್ಥಿಗಳ ಗುಂಪೊಂದು ಥಿಯೇಟರ್ ಬಳಿ ತೆರಳಿ ಪೋಸ್ಟರ್ ಹರಿಯುವ ಮೂಲಕ ಪ್ರತಿಭಟಿಸುವ ಉದ್ದೇಶ ಹೊಂದಿತ್ತು. ಆದರೆ ಆಗಲೇ ಹರಿದು ಹೋಗಿದ್ದರಿಂದ ವಿದ್ಯಾರ್ಥಿಗಳು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಯತ್ತ ತೆರಳಿದರು.ಅಶ್ಲೀಲ ಪೋಸ್ಟರ್ ಅಂಟಿಸಿರುವ ಬಗ್ಗೆ `ಪ್ರಜಾವಾಣಿ' ಗುರುವಾರವಷ್ಟೇ ವರದಿ ಮಾಡಿತ್ತು. ಕೂಡಲೇ ಕ್ರಮ ಕೈಗೊಂಡ ಪಾಲಿಕೆಯ ಅಧಿಕಾರಿಗಳು ಬೆಳಿಗ್ಗೆ 10.30 ಸುಮಾರಿಗೆ ಪೋಸ್ಟರ್ ಹರಿದರು.ವಿದ್ಯಾರ್ಥಿನಿಯರು ಏನಂತಾರೆ?

ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಹಾಗೂ ಅಮ್ಮಿನಭಾವಿಯ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದವರನ್ನು ಕೂಡಲೇ ಗಲ್ಲಿಗೆ ಹಾಕಿದರೆ ಅತ್ಯಾಚಾರಕ್ಕೆ ಒಳಗಾದವರಿಗೆ ನ್ಯಾಯ ಸಿಗುವುದಿಲ್ಲ. ದುಷ್ಟರನ್ನು ಹಿಂಸಿಸಬೇಕು. ಜೀವನ ಪರ‌್ಯಂತ ನರಳಬೇಕು. ನಂತರವಷ್ಟೇ ಅವರನ್ನು ಗಲ್ಲಿಗೆ ಹಾಕಬೇಕು.

- ಮೇಘಾ, ಜೆಎಸ್‌ಎಸ್ ಕಾಲೇಜು

ಹೆಣ್ಣುಮಕ್ಕಳೆಂದರೆ ಭೋಗದ ವಸ್ತು ಎಂಬ ಮನೋಭಾವ ಬದಲಾಗಬೇಕು. ಅವರ ದೃಷ್ಟಿಕೋನ ಬದಲಾಗಬೇಕು. ಇಲ್ಲದಿದ್ದರೆ ಯುವತಿಯರಿಗೆ ರಕ್ಷಣೆಯೇ ಇಲ್ಲದಂತಾಗುತ್ತದೆ.

- ಅಫ್ರಿನ್ ಮಲ್ಲೂರು, ಅಂಜುಮನ್ ಕಾಲೇಜು

ಇಂತಹ ಘಟನೆಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ ಮಧ್ಯರಾತ್ರಿಯೂ ಮಹಿಳೆಯರು ಸರಾಗವಾಗಿ ಓಡಾಡುವಂತೆ ಆಗಬೇಕು. ಆದರೆ ಇಂದು ರಾತ್ರಿ 8 ಗಂಟೆಯಾದರೂ ಓಡಾಡಲು ಆಗುತ್ತಿಲ್ಲವೆಂದರೆ ನಮ್ಮ ಸರ್ಕಾರ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ?

- ಲೀಲಾವತಿ, ಉಪನ್ಯಾಸಕಿಮಹಿಳೆಯರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ಕೊಡಬೇಕು. ಅದು ಮೊದಲ ಪಾಠ. ಅದರೊಂದಿಗೆ ಅತ್ಯಾಚಾರ ಘಟನೆಗಳು ನಿಲ್ಲಲ್ಲು ಮಾನಭಂಗ ಮಾಡಿದವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಅಂದಾಗ ಇತರ ದುರುಳರಿಗೆ ಒಂದು ಕಠಿಣ ಸಂದೇಶ ರವಾನೆಯಾದಂತಾಗುತ್ತದೆ.

- ಶೀಲಾ ಕೋರಿಶೆಟ್ಟರ, ಉಪನ್ಯಾಸಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry